ಜೈಲಿನಲ್ಲಿರುವ ಚಂದ್ರಶೇಖರ್ ಆಝಾದ್ ಆರೋಗ್ಯ ಸ್ಥಿತಿ ಗಂಭೀರ: ಭೀಮ್‌ಸೇನೆ ಹೇಳಿಕೆ

Update: 2020-01-05 17:36 GMT

ಹೊಸದಿಲ್ಲಿ, ಜ.5: ಜೈಲಿನಲ್ಲಿರುವ ಭೀಮ್ ಸೇನೆಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ತೀವ್ರ ಅಸ್ವಸ್ಥರಾಗಿದ್ದು ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಭೀಮ್ ಸೇನೆಯ ವಕ್ತಾರರು ಹೇಳಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಜೈಲು ಅಧಿಕಾರಿಗಳು ಆಝಾದ್‌ರ ಆರೋಗ್ಯಸ್ಥಿತಿಯಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದಿದ್ದಾರೆ.

ಚಂದ್ರಶೇಖರ್ ಆಝಾದ್ ರಕ್ತಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಪ್ರತೀ 2 ವಾರಕ್ಕೊಮ್ಮೆ ರಕ್ತದಲ್ಲಿರುವ ಹೆಚ್ಚುವರಿ ಕೆಂಪುಕಣಗಳನ್ನು ಹೊರತೆಗೆಯಬೇಕಿದೆ ಎಂದು ಅವರ ಖಾಸಗಿ ವೈದ್ಯ ಹರ್ಜೀತ್ ಸಿಂಗ್ ಭಟ್ಟಿ ಹೇಳಿದ್ದಾರೆ.

ಶುಕ್ರವಾರ ತಿಹಾರ್ ಜೈಲಿಗೆ ತೆರಳಿ ಚಂದ್ರಶೇಖರ್ ಆಝಾದ್‌ರನ್ನು ಭೇಟಿಯಾಗಿದ್ದೇನೆ. ತನಗೆ ತಲೆನೋವು, ತಲೆ ಸುತ್ತಿದಂತಾಗುವುದು, ಕಿಬ್ಬೊಟ್ಟೆಯಲ್ಲಿ ನೋವು ಮುಂತಾದ ಸಮಸ್ಯೆ ಇರುವುದಾಗಿ ಆಝಾದ್ ಹೇಳಿದ್ದರು ಎಂದು ಭೀಮ್‌ಸೇನೆಯ ವಕ್ತಾರ ಕುಶ್ ಅಂಬೇಡ್ಕರ್‌ ವಾದಿ ಹೇಳಿದ್ದಾರೆ. ಆಝಾದ್ ಕಳೆದ ಒಂದೂವರೆ ವರ್ಷಗಳಿಂದ ರಕ್ತಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ . ಅವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಲಭ್ಯವಾಗದಿದ್ದರೆ ಅವರ ರಕ್ತ ಹೆಪ್ಪುಗಟ್ಟುತ್ತಾ ಹೋಗಿ ಹೃದಯಾಘಾತ ಸಂಭವಿಸುವ ಅಪಾಯವಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆದರೆ ಜೈಲು ಅಧಿಕಾರಿಗಳು ಆಝಾದ್‌ರನ್ನು ಎಐಐಎಂಎಸ್‌ಗೆ ದಾಖಲಿಸಲು ಅವಕಾಶ ನೀಡಿಲ್ಲ ಎಂದು ಕುಶ್ ಅಂಬೇಡ್ಕರ್‌ವಾದಿ ಹೇಳಿದ್ದಾರೆ.

  ಇದೊಂದು ಅಮಾನವೀಯ ಘಟನೆಯಾಗಿದ್ದು ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆಝಾದ್‌ರನ್ನು ಎಐಐಎಂಎಸ್‌ಗೆ ದಾಖಲಿಸುವಂತೆ ದಿಲ್ಲಿ ಪೊಲೀಸರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಕ್ತ ನಿರ್ದೇಶನ ನೀಡಬೇಕು ಎಂದವರು ಟ್ವೀಟ್ ಮಾಡಿದ್ದಾರೆ.

ಆದರೆ ಆಝಾದ್‌ರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ. ದೈನಂದಿನ ವೈದ್ಯಕೀಯ ತಪಾಸಣೆ ಸಂದರ್ಭ ಅವರ ಅನಾರೋಗ್ಯದ ಬಗ್ಗೆ ಮಾಹಿತಿ ದೊರಕಿಲ್ಲ. ಅಗತ್ಯಬಿದ್ದರೆ ವೈದ್ಯಕೀಯ ನೆರವು ಒದಗಿಸಲಾಗುವುದು ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News