ಎಸ್ಸಿ-ಎಸ್ಟಿ ಮೀಸಲಾತಿ: ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು- ನ್ಯಾ.ನಾಗಮೋಹನ್ ದಾಸ್

Update: 2020-01-06 16:13 GMT

ಬೆಂಗಳೂರು, ಜ.6: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯ ಏರಿಕೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನು ಗಂಭೀರವಾಗಿ ಗಮನಿಸಿದ್ದು, ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಏರಿಕೆಗೆ ಸಂಬಂಧಿಸಿದಂತೆ ವರದಿ ನೀಡಲು ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೃಷಿ ತಂತ್ರಜ್ಞಾನ ಸಭಾಭವನದಲ್ಲಿ ಏರ್ಪಡಿಸಿದ್ದ ರಾಜ್ಯದ ಲಂಬಾಣಿ ಸಮುದಾಯದ ಸಮಾಲೋಚನಾ ಸಭೆ ಮತ್ತು ಅಹವಾಲು ಸಲ್ಲಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡಿ 70 ವರ್ಷಗಳಾದರೂ ಸಮುದಾಯಗಳ ಅಭಿವೃದ್ಧಿಯಾಗಿಲ್ಲ. ಹೀಗಾಗಿ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಪರಿಗಣಿಸಿ ಅವಕಾಶ ಕಲ್ಪಿಸಲಾಗುವುದು ಎಂದು ನಾಗಮೋಹನ್ ದಾಸ್ ಹೇಳಿದರು.

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಮಾತನಾಡಿ, ಪರಿಶಿಷ್ಟ ಜಾತಿ ಮೀಸಲಾತಿಯನ್ನು ಈಗಿರುವ ಶೇ.15ರಿಂದ 19ಕ್ಕೆ ಹೆಚ್ಚಿಸಬೇಕು. ಪರಿಶಿಷ್ಟ ಜಾತಿ ಗುಂಪಿನಲ್ಲಿ 101 ಜಾತಿಗಳಿದ್ದು, ಇನ್ನೂ ಅಭಿವೃದ್ಧಿ ಕಾಣದಾಗಿದೆ. ಹಲವು ಸೌಲಭ್ಯಗಳನ್ನು ರೂಪಿಸಿದ್ದರೂ ಅನುಷ್ಠಾನ ಹಂತಗಳಲ್ಲಿನ ಲೋಪದಿಂದಾಗಿ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದರು. ಬ್ಯಾಕ್‌ಲಾಗ್ ಹುದ್ದೆಗಳು ಸೃಷ್ಟಿಯಾಗಿದ್ದು, ಅವುಗಳನ್ನು ಪತ್ತೆ ಹಚ್ಚುವ ಕಾರ್ಯವಾಗಬೇಕು. ಜೊತೆಗೆ ಇಲಾಖೆಗಳಲ್ಲಿ ರೋಸ್ಟರ್ ಪದ್ಧತಿ ಅನುಸರಿಸುತ್ತಿಲ್ಲ, ಇದನ್ನು ಸಕ್ರಮಗೊಳಿಸುವ ಅಗತ್ಯವಿದೆ ಎಂದು ರಾಜೀವ್ ತಿಳಿಸಿದರು.

ಲಂಬಾಣಿ ಸಮುದಾಯವು ಅಭಿವೃದ್ಧಿಯಿಂದ ಸಾಕಷ್ಟು ಹಿಂದುಳಿದಿದೆ. ರಾಜ್ಯದಲ್ಲಿ 3,300 ತಾಂಡಗಳು ಇದ್ದು, 2,750 ತಾಂಡಗಳು ಇಂದಿಗೂ ಕಂದಾಯ ಗ್ರಾಮಗಳಾಗಿಲ್ಲ. ಜನವಸತಿಯಿಲ್ಲ, ಮೂಲಸೌಲಭ್ಯದಿಂದ ವಂಚಿತರಾಗಿದ್ದಾರೆ. ಇಂದಿಗೂ ಹಕ್ಕು ಪತ್ರಗಳಿಲ್ಲ, ಸರಕಾರಿ ಅಥವಾ ಖಾಸಗಿ ಭೂಮಿಗಳಲ್ಲಿ ಬದುಕುತ್ತಿದ್ದಾರೆ ಎಂದು ಅವರು ತಿಳಿಸಿದರು.

ಪ್ರಗತಿಪರ ಚಿಂತಕಿ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಕಳೆದ 70 ವರ್ಷಗಳಲ್ಲಿ ಸಮುದಾಯದಲ್ಲಿ ಒಬ್ಬ ಲೋಕಸಭೆ ಸದಸ್ಯರನ್ನು ಹೊಂದಿದ್ದೇವೆ. ಉನ್ನತ ಉದ್ಯೋಗಗಳಲ್ಲಿ ಯಾರೂ ಇಲ್ಲದಿರುವುದರಿಂದ ಮೀಸಲಾತಿಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಮಾತನಾಡಿ, ಲಂಬಾಣಿ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು ಸಮುದಾಯದ ಶೇ.99ರಷ್ಟು ಕುಟುಂಬಗಳು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಹೇಳಿದರು.

ಸಮಾಜದ ಮುಖಂಡರಾದ ರಾಮಾನಾಯ್ಕಿ, ಬೋಜ್ಯಾ ನಾಯ್ಕ, ಮಾಜಿ ಸಚಿವ ರೇವೂನಾಯ್ಕ್ ಬೆಳಮಗಿ, ಪಿ.ಟಿ.ಪರಮೇಶ್ವರ್ ನಾಯ್ಕಿ, ನ್ಯಾಯವಾದಿ ಅನಂತ್ ನಾಯ್ಕಾ ಮತ್ತಿತರರು ಮಾತನಾಡಿದರು. ಶಾಸಕ ಅವಿನಾಶ್ ಜಾಧವ್, ಆಯೋಗದ ಸದಸ್ಯ ಕಾರ್ಯದರ್ಶಿ ಶಬೀರ್ ಅಹಮದ್ ಮುಲ್ಲಾ, ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ನಾಯ್ಕ್, ಬಿ.ರಾಜಶೇಖರ್‌ಮೂರ್ತಿ, ಡಾ.ರಮೇಶ್ ನಾಯ್ಕಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News