​ಇಲ್ಲಿ ಶಾಲಾ ಮಕ್ಕಳ ಮಾಹಿತಿ ಮಾರಾಟಕ್ಕಿದೆ !

Update: 2020-01-07 04:01 GMT
ಸಾಂದರ್ಭಿಕ ಚಿತ್ರ

ಚಂಡೀಗಢ: ನಿಮ್ಮ ಕುಟುಂಬದ ಮಾಹಿತಿ, ದೂರವಾಣಿ ಸಂಖ್ಯೆ, ವೇತನ ವಿವರ, ವಿಳಾಸ, ಸಾಮಾಜಿಕ ಜಾಲತಾಣಗಳ ಪ್ರೊಫೈಲ್, ನಿಮ್ಮ ಮಕ್ಕಳ ಹೆಸರು, ಕಲಿಯುತ್ತಿರುವ ಶಾಲೆ ಇಂತಹ ಮಹತ್ವದ ಮಾಹಿತಿಗಳು ಕೇವಲ 4ರಿಂದ 6 ರೂ.ಗೆ ಮಾರಾಟವಾಗುತ್ತಿವೆ ಎಂಬ ಆತಂಕಕಾರಿ ಅಂಶ, "ಹಿಂದೂಸ್ತಾನ್ ಟೈಮ್ಸ್" ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ.

ಇಂಥ ಮಹತ್ವದ ಮಾಹಿತಿಗಳು ಕಿಡಿಗೇಡಿಗಳಿಗೆ ಕೂಡಾ ಸುಲಭವಾಗಿ ಲಭ್ಯವಾಗುವ ವ್ಯವಸ್ಥೆ ಇದ್ದು, ಪ್ರತಿ ವಿದ್ಯಾರ್ಥಿಯ ಮಾಹಿತಿಗೆ ಕೇವಲ 4ರಿಂದ 6 ರೂ. ಪಾವತಿಸಿದರೆ ಸಾಕಾಗುತ್ತದೆ. ಕೋಚಿಂಗ್ ಸೆಂಟರ್‌ಗಳ ಸ್ವರ್ಗ ಎನಿಸಿಕೊಂಡ ಚಂಡೀಗಢದ ಸೆಕ್ಟರ್ 34ರಲ್ಲಿ ವಿವಿಧ ಕೇಂದ್ರಗಳು ನಿಯೋಜಿಸಿದ ಮಾರಾಟ ಪ್ರತಿನಿಧಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದಾಗ ಈ ಅಂಶ ಬಹಿರಂಗವಾಗಿದೆ. ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳ ಹೆಸರು, ತರಗತಿ, ಕ್ರಮಸಂಖ್ಯೆ, ಶಾಲೆಯ ಹೆಸರು, ಅವರ ಕುಟುಂಬದ ದೂರವಾಣಿ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಪಡೆದಿದ್ದಾಗಿ ಪ್ರತಿನಿಧಿಗಳು ಹೇಳಿದ್ದಾರೆ.

ಪ್ರತಿ ವಿದ್ಯಾರ್ಥಿಯ ಮಾಹಿತಿಗೆ 4ರಿಂದ 6 ರೂ.ಗಳನ್ನು ವಿವಿಧ ಮಾರಾಟ ಏಜೆನ್ಸಿಗಳು ನಿಗದಿಪಡಿಸಿದ್ದು, ಈ ಪ್ರದೇಶದ 26 ಶಾಲೆಗಳ 7000 ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲು 28 ಸಾವಿರ ರೂ. ವೆಚ್ಚ ತಗುಲಿದೆ ಎಂದು ವಿವರ ನೀಡಿದ್ದಾರೆ.

ಈ ಕ್ರಮ ಅಂತರ್ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಪ್ಪಂದದ 19ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹಿರಿಯ ವಕೀಲ ಎಚ್.ಸಿ.ಅರೋರಾ ಹೇಳಿದ್ದಾರೆ. ಇದನ್ನು ಸಮಾಜ ಘಾತುಕ ಶಕ್ತಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಅದರಲ್ಲೂ ಬಾಲಕಿಯರಿಗೆ ಎದುರಾಗಬಹುದಾದ ಅಪಾಯ ತೀರಾ ಗಂಭೀರ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News