×
Ad

ಕೈಗಾರಿಕೋದ್ಯಮಿಗಳ ಸಮಸ್ಯೆ ನೀಗಿಸಲು "ಇಂಡಸ್ಟ್ರೀ ಅದಾಲತ್" ನಡೆಸಲು ಕ್ರಮ: ಜಗದೀಶ್ ಶೆಟ್ಟರ್

Update: 2020-01-07 17:52 IST

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶ( ಜಿಮ್) ವನ್ನು ನವೆಂಬರ್ 3 ರಿಂದ 5ರವರೆಗೆ ನಡೆಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದುಕೊಂಡಿದ್ದು, ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್ ಅವರು ತಿಳಿಸಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಶ್ರೀ.ಎಂ.ವಿ. ಸಭಾಂಗಣದಲ್ಲಿ  ಕೈಗಾರಿಕಾ ಸಂಘ ಸಂಸ್ಥೆಗಳ ಸದಸ್ಯರೊಂದಿಗೆ ಇಂದು ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು  ಮಾತನಾಡಿದ ಅವರು, ಜನವರಿ ತಿಂಗಳಲ್ಲಿಯೇ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಬೇಕಿತ್ತು. ಆದರೆ ಕೆಲ ಕಾರಣದಿಂದ ವರ್ಷಾಂತ್ಯದ ನವೆಂಬರ್‌ ತಿಂಗಳಲ್ಲಿ ಜಿಮ್ ಆಯೋಜನೆ ಮಾಡಲಾಗಿದೆ.

ಫೆಬ್ರವರಿಯಲ್ಲಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಕಾನ್ಫರೆನ್ಸ್‌ ಜರುಗಲಿದ್ದು, ಇದರ ಭಾಗವಾಗಿ ಮುಂಬೈನಲ್ಲಿ ರೋಡ್‌ ಶೋ ನಡೆಸಿ, ಬೃಹತ್ ಕೈಗಾರಿಕೋದ್ಯಮಿಗಳನ್ನು ಭೇಟಿ ಮಾಡಿ ಆಹ್ವಾನಿಸಿದ್ದೇವೆ. ರೋಡ್‌ ಶೋಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಹುಬ್ಬಳ್ಳಿ-ಧಾರವಾಡ, ಕಲುಬುರ್ಗಿಯಲ್ಲಿಯೂ ವಿಮಾನ ಸಂಪರ್ಕ ಇರುವ ಬಗ್ಗೆ ಉದ್ದಿದಾರರ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ಅಚ್ಚರಿ ವ್ಯಕ್ತ ಪಡಿಸಿದ ಉದ್ದಿಮೆದಾರರು ತಮ್ಮ ತಂಡವನ್ನು ಕಳುಹಿಸಿ ಅಲ್ಲಿನ ಮೂಲಸೌಕರ್ಯ ಲಭ್ಯತೆ ಬಗ್ಗೆ ಅಧ್ಯಯನ ನಡೆಸುವುದಾಗಿ ಬೃಹತ್ ಕಂಪನಿಗಳ ಉದ್ದಿದಾರರು ಆಶ್ವಾಸನೆ ನೀಡಿದ್ದಾರೆ ಎಂದು ಹೇಳಿದರು.

ಮತ್ತೊಂದೆಡೆ ಬೆಂಗಳೂರು ಹೊರತು ಪಡಿಸಿ ಟೂ ಟಯರ್ ಸಿಟಿಗಳಲ್ಲಿಯೂ ಕೈಗಾರಿಕೋದ್ಯಮವನ್ನು ವಿಸ್ತರಿಸಲು ಕ್ರಮ ಕೈಗೊಂಡಿದ್ದೇವೆ. ಟೂ ಟಯರ್‌ ಸಿಟಿಗಳಲ್ಲಿ ವಿಮಾನ, ಸಾರಿಗೆ ಸಂಪರ್ಕಗಳ ಸೌಲಭ್ಯ ಹಾಗೂ ಇತರೆ ಮೂಲಸೌಕರ್ಯಗಳು ಸಿಗುತ್ತಿವೆ. ಭೂಮಿ ಬೆಲೆ ಸಹ ಕಡಿಮೆ ಇದೆ. ಆದರೆ ಮಾಹಿತಿ ಕೊರತೆಯಿಂದ
ಉದ್ದಿದೆದಾರರು ಈ ಜಿಲ್ಲೆಗಳತ್ತ ಗಮನಹರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಟೂ ಟಯರ್ ಸಿಟಿಗಳಲ್ಲಿ ಇರಿವ ಸವಲತ್ತುಗಳ ಬಗ್ಗೆ ಮಾಹಿತಿ ಪಸರಿಸಿ ಆ ಭಾಗದಲ್ಲೂ ಕೈಗಾರಿಕೆಯನ್ನು ಬೆಳೆಸಬೇಕಿದೆ.  ಇದರಿಂದ ಬೆಂಗಳೂರು ಕೈಗಾರಿಕಾ ಒತ್ತಡದಿಂದ ಮುಕ್ತವಾಗಲು ಸಾಧ್ಯವಾಗಲಿದೆ ಎಂದರು.

ಕೈಗಾರಿಕಾ ಅದಾಲತ್

ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಭೂ ಸ್ವಾದೀನ, ವಿದ್ಯುತ್ ಪೂರೈಕೆ, ಪರವಾನಗಿ ಪಡೆಯುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಕೈಗಾರಿಕೊದ್ಯಮಿಗಳು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ನಿವಾರಿಸಲು ಕೈಗಾರಿಕಾ ಅದಾಲತ್ ನಡೆಸಲು ನಿರ್ಧರಿಸಿದ್ದೇನೆ. ಆಯಾ ಜಿಲ್ಲೆಗಳಿಗೆ ತೆರಳಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಅದಾಲತ್ ನಡೆಸಿ ಸ್ಥಳದಲ್ಲೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.

ಕೊನೆ ಹಂತದಲ್ಲಿ ನೀತಿ

ನೂತನ ಕೈಗಾರಿಕಾ ನೀತಿ ಸಿದ್ಧತೆ ಕೊನೆ ಹಂತಕ್ಕೆ ತಲುಪಿದೆ. ಮಾದರಿ ಪಾಲಿಸಿ ತರುವ ನಿಟ್ಟಿನಲ್ಲಿ ಎಲ್ಲಾ ಕೈಗಾರಿಕೋದ್ಯಮಿಗಳು, ಕೈಗಾರಿಕಾ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಿ ಅವರ ಸಲಹೆ , ಸೂಚನೆ ಮೇರೆಗೆ ಪಾಲಿಸಿ ಸಿದ್ಧವಾಗುತ್ತಿದೆ. ಈ ಪಾಲಿಸಿಯಲ್ಲಿ ರೀಜಿನಲ್ ಅಥಾರಿಟಿ ರಚಿಸಿ ಸಣ್ಣ ಉದ್ದಿಮೆದಾರರಿಗೆ ಜಿಎಸ್‌ಟಿ ಸೇರಿದಂತೆ ಇತರೆ ಸೌಲಭ್ಯದಲ್ಲಿ ರಿಯಾಯಿತಿ ನೀಡುವ ಬಗ್ಗೆಯೂ ಉಲ್ಲೇಖಿಸಲಾಗಿದೆ ಎಂದು ವಿವರಿಸಿದರು.

ಟ್ಯಾಕ್ಸ್‌ ನಿಗದಿ ಸಂಬಂಧ ಹೊಸ ಪಾಲಿಸಿ

ನಗರಸಭೆ, ಪುರ ಸಭೆ, ಕಾರ್ಪೋರೇಷನ್‌ಗಳು, ಗ್ರಾಮಪಂಚಾಯ್ತಿ ಇವುಗಳ ಮೂಲಕ ತೆರಿಗೆ ಸಂಗ್ರಹಕ್ಕೆ ಇರುವ ಕ್ರಮಗಳಲ್ಲಿ ಬಹಳಷ್ಟು ಗೊಂದಲಗಳು ಇವೆ. ಕೆಲ ಕೈಗಾರಿಕೆಗಳಿಗೆ  ಕಮರ್ಷಿಯಲ್‌ ಟ್ಯಾಕ್ಸ್ ವಿಧಿಸಲಾಗುತ್ತಿದೆ.  ಕೈಗಾರಿಕೋದ್ಯಮಕ್ಕೆ ತೆರಿಗೆ ವಿಧಿಸುವ ವಿಚಾರದಲ್ಲಿ ಇರುವ ಗೊಂದಲ ನೀಗಿಸಲು ರಾಜ್ಯದಕ್ಕೆ ಒಂದೇ ಮಾದರಿಯ ಟ್ಯಾಕ್ಸ್‌ ಪಾಲಿಸಿ ತರಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಟೌನ್‌ಶಿಪ್‌ ನಿರ್ಮಾಣಕ್ಕೆ ಬೆಂಬಲ

ಕೈಗಾರಿಕಾ ಟೌನ್‌ಶಿಪ್ ನಿರ್ಮಾಣಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಟೌನ್‌ಶಿಪ್ ನಿರ್ಮಾಣವಾಗುವುದರಿಂದ ಉದ್ದಿಮೆದಾರರಿಗೆ ತೆರಿಗೆ ಹೊಡೆತ ತಪ್ಪಲಿದೆ. ಅಭಿವೃದ್ಧಿ ವಿಷಯದಲ್ಲಿಯೂ ಸಾಕಷ್ಟು ನೆರವು ಸಿಗಲಿದೆ. ಟೌನ್‌ಶಿಪ್‌ ನಿರ್ಮಾಣದಿಂದ ಪ್ರತ್ಯೇಕ ಹಣಕಾಸಿನ ನೆರವೂ ಸಿಗಲಿದೆ. ಹೀಗಾಗಿ ಟೌನ್‌ಶಿಪ್ ನಿರ್ಮಾಣದ ಸಂಬಂಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಸಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸಂಘ ಸಂಸ್ಥೆ ಅಧ್ಯಕ್ಷರು, ಮುಖಂಡರು ಹಲವು ಸಮಸ್ಯೆಗಳನ್ನು ತೋಡಿಕೊಂಡರು.
ಸಭೆಯಲ್ಲಿ ಕೈಗಾರಿಕೋದ್ಯಮ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಎಫ್‌ಕೆಸಿಸಿ ಅಧ್ಯಕ್ಷ ಜನಾರ್ಧನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News