ಕೇಂದ್ರದ ನೆರೆ ಪರಿಹಾರ 'ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ': ಸಿದ್ದರಾಮಯ್ಯ

Update: 2020-01-07 14:01 GMT

ಬೆಂಗಳೂರು, ಜ. 7: ರಾಜ್ಯದ ನೆರೆ ಪರಿಹಾರಕ್ಕೆ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿದ್ದು, ‘ಸುಳ್ಳು ದೇವರ ಭಕ್ತರಾದ ಬಿಜೆಪಿ ನಾಯಕರು ಪರಿಹಾರದ ಮೊತ್ತ 1,200+1869.85=3069 ಕೋಟಿ ರೂ. ಎಂದು ಹೇಳಿ ಸಂಭ್ರಮಿಸುತ್ತಿರುವುದು ತಮಾಷೆಯಾಗಿದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಗೋಗರೆತಕ್ಕೆ ಕರಗಿದ ಪ್ರಧಾನಿ ಮೋದಿ 669.85 ಕೋಟಿ ರೂ. ಹೆಚ್ಚುವರಿ ನೆರೆಪರಿಹಾರ ದಯಪಾಲಿಸಿದ್ದು, ಒಟ್ಟು ಪರಿಹಾರ 1869.85 ರೂ.ಆಗುತ್ತೆ ಎಂದು ಟೀಕಿಸಿದ್ದಾರೆ.

‘ಕೇಂದ್ರ ಸರಕಾರ ನೀಡಿರುವ 669.85 ಕೋಟಿ ರೂ.ಹೆಚ್ಚುವರಿ ನೆರೆ ಪರಿಹಾರ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ. ಯಡಿಯೂರಪ್ಪ ಅವರೇ, ನೆನಪಿರಲಿ ನೀವೇ ಒಪ್ಪಿಕೊಂಡಂತೆ ಅಂದಾಜು ನಷ್ಟ 50ಸಾವಿರ ಕೋಟಿ ರೂ., ನೀವು ಕೇಳಿದ್ದು 38ಸಾವಿರ ಕೋಟಿ ರೂ. ನಿಮ್ಮ ಗೋಗರೆತಕ್ಕೆ ಸಿಕ್ಕಿದ್ದು ಕೇವಲ 1,869ಕೋಟಿ ರೂ. ಇಷ್ಟು ಸಾಕಾ?’ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ.

‘ಮುಖ್ಯಮಂತ್ರಿ ಯಡಿಯೂರಪ್ಪನವರೇ, ನೀವು 38 ಸಾವಿರ ಕೋಟಿ ರೂ. ಪರಿಹಾರ ಕೇಳಿದ್ದು ಆಗಸ್ಟ್ ತಿಂಗಳ ನೆರೆ ಹಾವಳಿಗೆ. ಅಕ್ಟೋಬರ್ ತಿಂಗಳ ಅತಿವೃಷ್ಟಿಯ ನಷ್ಟದ ಸಮೀಕ್ಷೆಯೇ ಪೂರ್ಣಗೊಂಡಿಲ್ಲ. ತಕ್ಷಣ ಅದನ್ನು ಮುಗಿಸಿ ಕೇಂದ್ರಕ್ಕೆ ಹೆಚ್ಚುವರಿ ಪರಿಹಾರದ ಬೇಡಿಕೆ ಸಲ್ಲಿಸಿ’ ಎಂದು ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.

‘ತಮ್ಮ ಪಕ್ಷದ ರಾಜಕೀಯ ಸಿದ್ಧಾಂತ ಒಪ್ಪದಿರುವವರು ಅಧ್ಯಕ್ಷರಾಗಿರುವ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನಿರಾಕರಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ನಿರ್ಧಾರ ಕನ್ನಡ ನಾಡು-ನುಡಿಗೆ ಬಗೆದ ದ್ರೋಹವಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ನ ಸ್ವಾಯತ್ತತೆ ಗೌರವಿಸುವುದು ಸರಕಾರದ ಕರ್ತವ್ಯ’

- ಸಿದ್ದರಾಮಯ್ಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News