ರಾಷ್ಟ್ರಧ್ವಜ ಪ್ರದರ್ಶನ, ಹಾರಾಟದ ವಿಚಾರದಲ್ಲಿ ಯಾರನ್ನೂ ಬಲವಂತ ಮಾಡುವಂತಿಲ್ಲ: ಹೈಕೋರ್ಟ್

Update: 2020-01-07 15:15 GMT

ಬೆಂಗಳೂರು, ಜ.7: ರಾಷ್ಟ್ರಧ್ವಜ ಪ್ರದರ್ಶನ ಅಥವಾ ಹಾರಾಟದ ವಿಚಾರದಲ್ಲಿ ಯಾರನ್ನೂ ಬಲವಂತ ಮಾಡುವಂತಿಲ್ಲ. ಹೀಗಾಗಿ, ಈ ವಿಚಾರದಲ್ಲಿ ಆದೇಶ ಅಥವಾ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೈಕೋಟ್ ಹೇಳಿದೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಬೋಧನ ಗ್ರಾಮದ ಅಂಗನವಾಡಿ ಕೇಂದ್ರ ಇರುವ ಸರಕಾರಿ ಕಟ್ಟಡದ ಮೇಲೆ 2019ರ ಆಗಸ್ಟ್ 15ರಂದು ರಾಷ್ಟ್ರ ಧ್ವಜಾರೋಹಣ ಮಾಡಿಲ್ಲ ಎಂದು ಆಕ್ಷೇಪಿಸಿ ಅದೇ ಗ್ರಾಮದ ರಮೇಶ್ ಲಕ್ಷ್ಮಣ ಗಜಾರೆ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಹೇಮಂತ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಷ್ಟ್ರ ಧ್ವಜ ಪ್ರದರ್ಶನ ಹಾಗೂ ಹಾರಾಟದ ಬಗ್ಗೆ ಭಾರತೀಯ ಧ್ವಜ ಸಂಹಿತೆ-2002 ಬಹಳ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ, ಈ ವಿಚಾರದಲ್ಲಿ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.

ವಕೀಲರ ವಾದ ಆಲಿಸಿದ ನ್ಯಾಯಪೀಠವು, ರಾಷ್ಟ್ರ ಧ್ವಜ ಪ್ರದರ್ಶನ ಅಥವಾ ಹಾರಾಟದ ವಿಚಾರದಲ್ಲಿ ಯಾರನ್ನೂ ಬಲವಂತ ಮಾಡುವಂತಿಲ್ಲ. ಒಂದೊಮ್ಮೆ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದರೆ ಅದು ಅಪರಾಧವಾಗುತ್ತದೆ. ಅಲ್ಲದೇ, ಧ್ವಜ ಹಾರಿಸುವ ಮತ್ತು ಇಳಿಸುವ, ಧ್ವಜದ ಬಟ್ಟೆ ಮಡಿಚಿಡುವ, ಅದನ್ನು ನಿರ್ವಹಿಸುವ ಬಗ್ಗೆ ಸಾಕಷ್ಟು ಜಾಗರೂಕತೆ ಮತ್ತು ಕಾಳಜಿ ವಹಿಸಬೇಕಾಗುತ್ತದೆ. ಸಮಯ ಪಾಲಿಸಬೇಕಾಗುತ್ತದೆ. ಈ ಎಲ್ಲ ವಿಚಾರಗಳನ್ನು ಧ್ವಜ ಸಂಹಿತೆ-2002ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಧ್ವಜಾರೋಹಣದ ಬಗ್ಗೆ ಧ್ವಜ ಸಂಹಿತೆಯ ಸೆಕ್ಷನ್ 2(3)ರಲ್ಲಿ ವಿವರಿಸಲಾಗಿದೆ.

ಹೀಗಿರುವಾಗ, ಧ್ವಜಾರೋಹಣ ಮಾಡದ ಅಂಗನವಾಡಿ ಕೇಂದ್ರದ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಧ್ವಜ ಹಾರಿಸಲು ನಿದೇರ್ಶನ ನೀಡಬೇಕು ಎಂಬ ಮನವಿ ಪರಿಗಣಿಸಲು ಸಾಧ್ಯವಿಲ್ಲ. ಎಲ್ಲ ಕಡೆ ರಾಷ್ಟ್ರ ಧ್ವಜ ಹಾರಾಟ ಆಗಬೇಕು ಎಂಬುದು ಆದರ್ಶ ಸನ್ನಿವೇಶ(ಐಡಿಯಲ್ ಸಿಚ್ಯುವೇಷನ್). ಆದರೆ, ನಾವು ಆದರ್ಶ ಪ್ರಪಂಚದಲ್ಲಿ (ಐಡಿಯಲ್ ವರ್ಲ್ಡ್) ಜೀವಿಸುತ್ತಿಲ್ಲ ಅನ್ನುವುದು ಸಹ ವಾಸ್ತವ. ಮುಖ್ಯವಾಗಿ, ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಇದನ್ನು ನಿರೀಕ್ಷಿಸುವುದು ಹೇಗೇ? ಅಂಗನವಾಡಿಗಳ ಸ್ಥಾಪನೆಯ ಉದ್ದೇಶವೇ ಈವರೆಗೆ ಸಾಧಿಸಲಾಗಲಿಲ್ಲ. ಇಂತಹ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಯಾವುದನ್ನೂ ಹೇಳಲು ಬರುವುದಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿಯನ್ನು ಇತ್ಯರ್ಥಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News