7ನೇ ತರಗತಿಗೆ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ: ಸುರೇಶ್‌ಕುಮಾರ್

Update: 2020-01-07 16:04 GMT

ಬೆಂಗಳೂರು, ಜ.7: 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆಯ ಬದಲಾಗಿ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್ ತಿಳಿಸಿದ್ದಾರೆ. ಮಂಗಳವಾರ ನಗರದ ಶಿಕ್ಷಣ ಸದನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿರುವ ಸಾಮರ್ಥ್ಯ ಹಾಗೂ ಕೊರತೆಯನ್ನು ಗುರುತಿಸುವುದಕ್ಕಾಗಿ ಮೌಲ್ಯಮಾಪನ ಪರೀಕ್ಷೆ ನಡೆಸಲಾಗುತ್ತಿದೆಯೇ ವಿನಃ ಯಾರನ್ನು ಅನುತ್ತೀರ್ಣಗೊಳಿಸುವ ಉದ್ದೇಶವಿಲ್ಲವೆಂದು ಖಂಚಿತ ಪಡಿಸಿದರು.

ಪರೀಕ್ಷಾ ವಿಧಾನ: 7ನೇ ತರಗತಿಗೆ ರಾಜ್ಯಮಟ್ಟದಲ್ಲಿ ಒಂದೇ ರೀತಿಯ ಪ್ರಶ್ನೆ ಪತ್ರಿಕೆಯನ್ನು ಕೊಡಲಾಗುತ್ತದೆ. ಹಾಗೂ ಪರೀಕ್ಷೆಯನ್ನು ಆಯಾ ಶಾಲೆಗಳಲ್ಲಿ ನಡೆಸಲಾಗುತ್ತದೆ. ಅದರೆ, ಮೌಲ್ಯಮಾಪನ ಮಾತ್ರ ಜಿಲ್ಲಾಮಟ್ಟದಲ್ಲಿ ಡಯಟ್ ಶಿಕ್ಷಕರು ಸೇರಿದಂತೆ ಇತರೆ ಶಿಕ್ಷಕರು ಮಾಡಲಿದ್ದಾರೆಂದು ಅವರು ಮಾಹಿತಿ ನೀಡಿದರು.

ಸಾಮಾನ್ಯ ಮೌಲ್ಯಮಾಪನ ಪರೀಕ್ಷೆಯ ಮೂಲಕ ಏಕಕಾಲದಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಗುಣಮಟ್ಟವನ್ನು ಅಳೆಯಲಾಗುತ್ತದೆ. ಪ್ರತಿ ವಿದ್ಯಾರ್ಥಿ ಯಾವ ವಿಷಯದಲ್ಲಿ ಉತ್ತಮವಾಗಿದ್ದಾನೆ. ಯಾವುದರಲ್ಲಿ ಕೊರತೆಯಿದೆಯೆಂದು ಗುರುತಿಸಿ, 8 ಹಾಗೂ 9ನೇ ತರಗತಿಯಲ್ಲಿ ಕೊರತೆಯಿರುವ ವಿಷಯಕ್ಕೆ ಹೆಚ್ಚಿನ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ಬೆಳಗಾವಿ ವಿಭಾಗದಲ್ಲಿ ಈಗಾಗಲೇ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆಯನ್ನು ಪ್ರಾಯೋಗಿಕವಾಗಿ ಮಾಡಲಾಗಿದ್ದು, ಅಲ್ಲಿನ ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆಂದು ಗುರುತಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಹಾಗೂ ಶಿಕ್ಷಕರಿಬ್ಬರಿಗೂ ಹೆಚ್ಚಿನ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅವರು ಹೇಳಿದರು.

 ಕಲಬುರಗಿ ಭಾಗದ ವಿದ್ಯಾರ್ಥಿಗಳಿಗೆ ಗಣಿತ ಕಷ್ಟಕರವಾಗಿದೆ. ಅಲ್ಪಸಂಖ್ಯಾತ ಸಮುದಾಯ ಹೆಚ್ಚಿರುವ ಕಡೆಗಳಲ್ಲಿ ಭಾಷಾ ವಿಷಯಗಳಲ್ಲಿ ಸಮಸ್ಯೆ, ಹಲವು ಕಡೆ ಇಂಗ್ಲಿಷ್ ಕಷ್ಟಕರವಾಗಿದೆ. ಯಾವ ವಿದ್ಯಾರ್ಥಿ ಯಾವ ವಿಷಯದಲ್ಲಿ ಸಮಸ್ಯೆ ಎದುರಿಸುತ್ತಿದ್ದಾನೆಂದು ನಿಖರವಾಗಿ ತಿಳಿದುಕೊಂಡು, ಆ ವಿಷಯದಲ್ಲಿ ಹೆಚ್ಚಿನ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ಬಾಕ್ಸ್

ಮಾರ್ಚ್‌ನಲ್ಲಿ ಪರೀಕ್ಷೆ

 7ನೇ ತರಗತಿಯ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆಯನ್ನು ಮಾರ್ಚ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಳಗಾವಿ, ಮೈಸೂರು, ಕಲಬುರಗಿ ವಿಭಾಗದ ಡಿಡಿಪಿಐ ಮತ್ತು ಬಿಇಒಗಳ ಜೊತೆ ಸಭೆ ನಡೆಸಿದ್ದೇನೆ. ಈ ಪರೀಕ್ಷೆಯ ಸಾಧಕ-ಬಾಧಕಗಳನ್ನು ಅರಿತುಕೊಂಡು 8 ಹಾಗೂ 9ನೇ ತರಗತಿಗೂ ವಿಸ್ತರಿಸಲು ಚಿಂತನೆ ನಡೆಸಲಾಗುವುದು.

-ಸುರೇಶ್‌ಕುಮಾರ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News