ಮಾರ್ಚ್ ವೇಳೆಗೆ 320 ಐಷಾರಾಮಿ ಬಸ್‌ಗಳ ಸೇರ್ಪಡೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-01-07 16:08 GMT

ಬೆಂಗಳೂರು, ಜ. 7: 2020ರ ಮಾರ್ಚ್ ಅಂತ್ಯದ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಗೆ ಇನ್ನೂ 320 ಐಷಾರಾಮಿ ಬಸ್‌ಗಳು ಸೇರ್ಪಡೆಗೊಳ್ಳಲಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದ ಮುಂಭಾಗದಲ್ಲಿನ ವೈಭವೋಪೇತ ಮೆಟ್ಟಿಲುಗಳ ಬಳಿ ಏರ್ಪಡಿಸಿದ್ದ ಕೆಎಸ್ಸಾರ್ಟಿಸಿಯ ವಿವಿಧ ಮಾದರಿ ನೂತನ ಬಸ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಸಂಸ್ಥೆಗೆ ಮತ್ತಷ್ಟು ಬಸ್‌ಗಳನ್ನು ಸೇರ್ಪಡೆ ಮಾಡುವ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲಾಗುವುದು ಎಂದರು.

ಕೆಎಸ್ಸಾರ್ಟಿಸಿ ದೇಶದಲ್ಲೇ ಅಗ್ರಗಣ್ಯ ಸಂಸ್ಥೆಯಾಗಿದ್ದು, ಇದನ್ನು ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು, ಸಂಸ್ಥೆ ವಿಶ್ವದರ್ಜೆ ವಿನ್ಯಾಸದ ಹೊಸ ಬಸ್‌ಗಳು, ಸುಸಜ್ಜಿತ ಬಸ್ ನಿಲ್ದಾಣಗಳು, ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಸುರಕ್ಷತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಮೂಲಕ ಉತ್ತಮ ಸೇವೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾರಿಗೆ ಸಂಸ್ಥೆಯ ವಿವಿಧ ಉಪಕ್ರಮಗಳು ಹಾಗೂ ಸಾರ್ವಜನಿಕ ಪ್ರಯಾಣಿಕ ಸೇವೆಯನ್ನು ಶ್ಲಾಘಿಸಿ ಕೆಎಸ್ಸಾರ್ಟಿಸಿಗೆ 240ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ ಎಂದ ಅವರು, ನಿಗಮವು ಪ್ರಯಾಣಿಕರಿಗೆ ಅವಶ್ಯಕತೆಗೆ ಅನುಗುಣವಾಗಿ ಐಷಾರಾಮಿ ಸಾರಿಗೆ ಸೌಲಭ್ಯ ಕಲ್ಪಿಸುತ್ತಿದೆ ಎಂದರು.

ಅಂಬಾರಿ ಡ್ರೀಮ್‌ಕ್ಲಾಸ್: ಅಂಬಾರಿ ಡ್ರೀಮ್‌ಕ್ಲಾಸ್-5, ಐರಾವತ ಕ್ಲಬ್ ಕ್ಲಾಸ್-3, ಐರಾವತ ಮಾದರಿ-4, ನಾನ್ ಎಸಿ ಸ್ಲೀಪರ್-1, ರಾಜಹಂಸ-2, ಸಾಮಾನ್ಯ ಸಾರಿಗೆ-5 ಸೇರಿ ಒಟ್ಟು 20 ನೂತನ ಬಸ್‌ಗಳ ಸಂಚಾರಕ್ಕೆ ಬಿಎಸ್‌ವೈ ಹಸಿರು ನಿಶಾನೆ ತೋರಿಸಿದರು.

ನೂತನ ಬಸ್‌ಗಳು ಬೆಂಗಳೂರಿನಿಂದ ಎರ್ನಾಕುಲಮ್, ಹೈದರಾಬಾದ್, ನೆಲ್ಲೂರು, ಮಂತ್ರಾಲಯ, ಶಿರಡಿ, ಶ್ರೀಶೈಲಂ, ತಿರುನಲ್ಲಾರ್, ಕಾನಂಗಾಡ್, ಪಂಪಾ, ಚನ್ನೈ, ಶೃಂಗೇರಿ, ದಾವಣಗೆರೆ, ಚಿಕ್ಕಮಗಳೂರು ಮಾರ್ಗದಲ್ಲಿ ಸಂಚರಿಸಲಿವೆ ಎಂದು ತಿಳಿಸಿದರು.

ಮೆಚ್ಚುಗೆ: ಹೊಸ ಬಸ್‌ಗಳನ್ನು ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರು-ಶಿಕಾರಿಪುರ ಐರಾವತ ಕ್ಲಬ್‌ಕ್ಲಾಸ್ ಬಸ್‌ನಲ್ಲಿ ವಿಧಾನಸೌಧದ ಆವರಣದಲ್ಲಿ ಸಂಚಾರ ಮಾಡಿದ್ದಲ್ಲದೆ, ಬಸ್‌ನ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಸಾರಿಗೆ ನಿಗಮದ ನಿರ್ದೇಶಕಿ ಕವಿತಾ ಮನ್ನಿಕೇರಿ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News