×
Ad

ನಾರಾಯಣಗುರು ಹೆಸರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಮ್ಮತಿ: ಕುಮಾರ ಬಂಗಾರಪ್ಪ

Update: 2020-01-07 21:48 IST

ಬೆಂಗಳೂರು, ಜ.7: ಆರ್ಯ ಈಡಿಗ ಸಮುದಾಯದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾರಾಯಣಗುರು ಹೆಸರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಮ್ಮತಿ ನೀಡಿದ್ದಾರೆ ಎಂದು ಶಾಸಕ ಕುಮಾರ್ ಬಂಗಾರಪ್ಪಹೇಳಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕುಮಾರ ಬಂಗಾರಪ್ಪ ನೇತೃತ್ವದ ಈಡಿಗ ಸಮುದಾಯದ ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ವೈದ್ಯಕೀಯ ಕಾಲೇಜು ಸ್ಥಾಪನೆ ಪ್ರಸ್ತಾಪವನ್ನು ಪರಿಶೀಲಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ ಎಂದರು.

ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಕುಮಾರ ಬಂಗಾರಪ್ಪ, ನಮ್ಮ ಸಮಾಜಕ್ಕೆ ಬೇಕಾದ ಸವಲತ್ತುಗಳನ್ನು ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಇದೇ ವರ್ಷದ ಬಜೆಟ್‌ನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುದಾನ ನೀಡುವ ಭರವಸೆ ನೀಡಿದ್ದು, ನಮ್ಮ ಸಮುದಾಯದ ಪರವಾಗಿ ಅವರಿಗೆ ಧನ್ಯವಾದಗಳು ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಶೈಕ್ಷಣಿಕ ಮತ್ತು ಆರ್ಥಿಕವಾಗಿ ನಮ್ಮ ಸಮುದಾಯವನ್ನು ಬಲಪಡಿಸಬೇಕಿದೆ. ಮಂಗಳೂರು, ಉಡುಪಿ, ಕಾರವಾರ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕರ್ನಾಟಕದ ಅನೇಕ ಭಾಗಗಳಲ್ಲಿ ಸಣ್ಣ ಮಟ್ಟದಲ್ಲಿ ಇರುವಂತಹ ನಮ್ಮ ಆರ್ಯ ಈಡಿಗ ಸಂಘದ ಜನಾಂಗವನ್ನು ಸಂಪೂರ್ಣವಾಗಿ ಮೇಲೆತ್ತಲು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಸಿಎಂ ಸಮ್ಮತಿಸಿದ್ದಾರೆ ಎಂದು ಹೇಳಿದರು.

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯವಾದ ಸ್ಥಳವನ್ನು ನಿಗದಿ ಮಾಡಿ, ಸಿಎಂಗೆ ಮನವಿ ಸಲ್ಲಿಸಲಾಗುತ್ತದೆ. ಎಲ್ಲಿ ಸ್ಥಾಪನೆ ಮಾಡಬೇಕು ಎಂಬುದು ಇನ್ನೂ ಅಂತ್ಯಗೊಂಡಿಲ್ಲ ಎಂದ ಅವರು, ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಸಮಾಜದ ಮುಖಂಡರ ಜತೆ ಮಾತುಕತೆ ನಡೆಸಿ ಅಂತಿಮ ಮಾಡಲಾಗುವುದು ಎಂದರು.

ಸಚಿವ ಸಂಪುಟ ವಿಸ್ತರಣೆ ವೇಳೆ ನಮ್ಮ ಸಮುದಾಯದವರಿಗೆ ಸಚಿವ ಸ್ಥಾನ ನೀಡುವ ಕುರಿತು ಯಾವುದೇ ಬೇಡಿಕೆ ಇಟ್ಟಿಲ್ಲ. ನಮ್ಮ ಸಮುದಾಯಕ್ಕೆ ಕೊಡಬೇಕಾದ ಸ್ಥಾನಮಾನವನ್ನು ಸರಕಾರದಲ್ಲಿ ನೀಡಲಾಗಿದೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News