ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿದೆ: ವೆಂಕಯ್ಯ ನಾಯ್ಡು

Update: 2020-01-07 16:21 GMT

ಬೆಂಗಳೂರು, ಜ.7: ನಾವು ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶ ಕೊರತೆ ಇರುವುದರಿಂದಲೇ ರೋಗಗಳು ಹೆಚ್ಚಾಗುತ್ತಿದ್ದು, ಶೇ.38.7ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆತಂಕ ವ್ಯಕ್ತಪಡಿಸಿದ್ದಾರೆ.

 ಮಂಗಳವಾರ ಗವೀಪುರಂನಲ್ಲಿರುವ ಅದಮ್ಯ ಚೇತನ ಸಂಸ್ಥೆಯ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ಹೀಗಾಗಿ ಮಕ್ಕಳು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಗಮನ ಕೊಡಬೇಕೆಂದು ತಿಳಿಸಿದರು.

 ಬಹಳ ವರ್ಷಗಳಿಂದ ಅದಮ್ಯ ಚೇತನದ ಬಗ್ಗೆ ತಿಳಿದುಕೊಂಡಿದ್ದೆ. ನನ್ನ ನೆಚ್ಚಿನ ಮಿತ್ರನಾಗಿದ್ದ ಅನಂತಕುಮಾರ್ ಈ ಸಂಸ್ಥೆಯನ್ನು ತಮ್ಮ ಸರ್ವಸ್ವವನ್ನಾಗಿಸಿಕೊಂಡಿದ್ದರು. ಈ ಹಿಂದೆಯೇ ಅದಮ್ಯ ಚೇತನದ ಶೂನ್ಯ ತ್ಯಾಜ್ಯ ಮತ್ತು ಹಸಿರು ಅಡುಗೆ ಮನೆಗೆ ಭೇಟಿ ನೀಡಲು ಬಯಸಿದ್ದೆ. ಆದರೆ, ನಾನಾ ಒತ್ತಡಗಳಿಂದ ಸಾಧ್ಯವಾಗಿರಲಿಲ್ಲ. ಇಂದು ಆ ಅವಕಾಶ ದೊರೆತ್ತಿದ್ದು, ಇಲ್ಲಿನ ವ್ಯವಸ್ಥೆಯನ್ನು ನೋಡಿದಾಗ ತುಂಬಾ ಸಂತಸವಾಯಿತು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಶೂನ್ಯ ತ್ಯಾಜ್ಯ ಮತ್ತು ಪರಿಸರ ಸ್ನೇಹಿ ಅಡುಗೆ ಮನೆಯನ್ನು ಅಭಿವೃದ್ಧಿಪಡಿಸಿರುವುದರ ಹಿಂದೆ ತೇಜಸ್ವಿನಿ ಅನಂತಕುಮಾರ್ ಮತ್ತು ಇಲ್ಲಿನ ಸಮರ್ಪಣಾ ಭಾವದ ಸಿಬ್ಬಂದಿಯ ಅವಿರತ ಶ್ರಮ ಇದೆ. ಅವರು ಹಗಲಿರುಳೂ ಸಂಸ್ಥೆಯನ್ನು ಬೆಳೆಸಲು ಮತ್ತು ಸಾವಿರಾರು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಒದಗಿಸುವಲ್ಲಿ ತೋರುತ್ತಿರುವ ಬದ್ಧತೆ ಇತರರಿಗೂ ಅನುಕರಣೀಯ ಮತ್ತು ಮಾರ್ಗದರ್ಶಿಯಾಗಿದೆ ಎಂದು ಅವರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ತೇಜಸ್ವಿನಿ ಅನಂತಕುಮಾರ್, ಅದಮ್ಯ ಚೇತನ ಟ್ರಸ್ಟಿಗಳಾದ ನಂದಕುಮಾರ್, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಕೃಷ್ಣ ಭಟ್ ಸೇರಿದಂತೆ ಪ್ರಮುಖ ಟ್ರಸ್ಟಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News