ಸಾಂಸ್ಕೃತಿಕ-ಧಾರ್ಮಿಕ ಶುದ್ಧೀಕರಣಕ್ಕೆ ಯತ್ನಿಸಿದ್ದ ಪೇಜಾವರ ಶ್ರೀ: ಉಪ ರಾಷ್ಟ್ರಪತಿ

Update: 2020-01-07 16:54 GMT

 ಬೆಂಗಳೂರು, ಜ.7: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಮ್ಮ ಜೀವಿತಾವಧಿಯಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಶುದ್ಧೀಕರಣಕ್ಕೆ ಯತ್ನಿಸಿದ್ದರು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸ್ಮರಿಸಿಕೊಂಡರು.

ಮಂಗಳವಾರ ನಗರದ ಕತ್ರಿಗುಪ್ಪೆ ಬಳಿಯಿರುವ ಪೂರ್ಣ ಪ್ರಜ್ಞ ವಿದ್ಯಾಪೀಠದ ಆವರಣದಲ್ಲಿರುವ ಪೇಜಾವರ ಶ್ರೀಗಳ ಬೃಂದಾವನದ ದರ್ಶನ ಪಡೆದ ಬಳಿಕ ಅವರು ಮಾತನಾಡಿದರು.

1956ರಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ಸ್ಥಾಪಿಸಿದ ಈ ಪೂರ್ಣ ಪ್ರಜ್ಞ ವಿದ್ಯಾಪೀಠಕ್ಕೆ ನಾನು ಭಾವುಕನಾಗಿ ಇವತ್ತು ಆಗಮಿಸಿದ್ದೇನೆ. ವಿಶ್ವೇಶತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ಸುದೈವ ನನ್ನದಾಗಿತ್ತು ಎಂದು ವೆಂಕಯ್ಯ ನಾಯ್ಡು ಹೇಳಿದರು.

ವಿಶ್ವೇಶತೀರ್ಥ ಶ್ರೀಗಳು ಶ್ರೀಮದ್ ಭಾಗವತದ ಬೋಧನೆಗಳನ್ನು ಅಕ್ಷರಶಃ ಸಾಕಾರಗೊಳಿಸಿದವರು. ಸಾಂಸ್ಕೃತಿಕ, ಧಾರ್ಮಿಕ ಶುದ್ದೀಕರಣಕ್ಕಾಗಿ ಮತ್ತು ಇಂದಿನ ಪ್ರಸಕ್ತ ಸಮಾಜದಲ್ಲಿನ ಸಾಮಾಜಿಕ ವೌಲ್ಯಗಳನ್ನು ಎತ್ತಿಹಿಡಿಯಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಉಪ ರಾಷ್ಟ್ರಪತಿ ಹೇಳಿದರು.

ಪೇಜಾವರ ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗುವ ಮೂಲಕ ದೇಶದಲ್ಲಿ ಜಾತಿರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಬಡವರಿಗೆ ಹಾಗೂ ನಿರ್ಗತಿಕರಿಗೆ ಸಹಾಯ ಹಸ್ತ ಚಾಚುವುದರಲ್ಲಿ ಪೇಜಾವರ ಶ್ರೀಗಳು ಸದಾಕಾಲ ಮುಂಚೂಣಿಯಲ್ಲಿರುತ್ತಿದ್ದರು ಎಂದು ವೆಂಕಯ್ಯ ನಾಯ್ಡು ಹೇಳಿದರು.

 ಮಾನವೀಯತೆಗೆ ಸಲ್ಲಿಸುವ ಸೇವೆ, ದೇವರಿಗೆ ಸಲ್ಲಿಸಿದ ಸೇವೆಯಂತೆ ಎಂದು ಮಹಾತ್ಮಗಾಂಧೀಜಿ ಪಾಲಿಸುತ್ತಿದ್ದ ಆದರ್ಶವನ್ನು ಪೇಜಾವರ ಶ್ರೀಗಳು ಅಳವಡಿಸಿಕೊಂಡಿದ್ದರು. ಅವರು ಪ್ರಗತಿಪರವಾದ ದೂರದೃಷ್ಟಿಯನ್ನು ಹೊಂದಿದ್ದರು. ಆಧುನಿಕ ಭಾರತದಲ್ಲಿ ದಲಿತರನ್ನು ಹಿಂದೂ ಸಮಾಜದ ಅವಿಭಾಜ್ಯ ಅಂಗವೆಂದು ಹೇಳಿದ ಮೊದಲ ಧಾರ್ಮಿಕ ನೇತಾರ ಪೇಜಾವರ ಶ್ರೀಗಳು ಎಂದು ಅವರು ತಿಳಿಸಿದರು.

1970ರಲ್ಲಿ ಮಲ್ಲೇಶ್ವರಂನ ದಲಿತ ಕಾಲನಿಗಳಲ್ಲಿ ಪೇಜಾವರ ಶ್ರೀಗಳು ಪಾದಯಾತ್ರೆ ಮಾಡಿದ್ದರು. ಅಲ್ಲದೇ, ತಮಿಳುನಾಡಿನ ಊಟಿಯಲ್ಲಿರುವ ಹರಿಜನ ಕೇರಿಯಲ್ಲಿಯೂ ಅವರು ಪಾದಯಾತ್ರೆ ಮಾಡಿದ್ದರು ಎಂದು ಉಪ ರಾಷ್ಟ್ರಪತಿ ಸ್ಮರಿಸಿಕೊಂಡರು.

ಆಂಧ್ರಪದೇಶದ ಹಂಸಾಲದೀವಿ ಭಾಗದಲ್ಲಿ ಸೈಕ್ಲೋನ್ ಚಂಡಮಾರುತದಿಂದ ಸಂತ್ರಸ್ತರಾಗಿದ್ದವರಿಗೆ ನೆರವಿನ ಹಸ್ತ ಚಾಚಿದ ಪೇಜಾವರ ಶ್ರೀಗಳು, ಮನೆಗಳನ್ನು ಕಳೆದುಕೊಂಡಿದ್ದ ಕುಟುಂಬಗಳಿಗೆ 150 ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು ಎಂದು ಅವರು ಹೇಳಿದರು.

ಅಲ್ಲದೇ, 1993ರಲ್ಲಿ ಮಹಾರಾಷ್ಟ್ರದ ಲಾತೂರ್‌ನಲ್ಲಿ ಭೂಕಂಪದಿಂದ ಸಂತ್ರಸ್ತರಾದವರು, ಸುನಾಮಿಯಿಂದ ತತ್ತರಿಸಿಹೋಗಿದ್ದ ತಮಿಳುನಾಡಿನ ಕುಡ್ಡಾಲೂರ್ ಭಾಗದ ಜನರಿಗೆ ಸಹಾಯ ನೀಡಿದ್ದರು ಎಂದು ವೆಂಕಯ್ಯ ನಾಯ್ಡು ಸ್ಮರಿಸಿಕೊಂಡರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News