ಆಸ್ಟ್ರೇಲಿಯನ್ ಓಪನ್‌ಗೆ ಕಾಡ್ಗಿಚ್ಚಿನ ಹೊಗೆ ಬಾಧಿಸಲಾರದು: ಆಯೋಜಕರ ವಿಶ್ವಾಸ

Update: 2020-01-08 05:02 GMT

ಸಿಡ್ನಿ, ಜ.7: ಕಾಡ್ಗಿಚ್ಚಿನ ದಟ್ಟ ಹೊಗೆಯಿಂದಾಗಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರಾನ್‌ಸ್ಲಾಮ್ ವಿಳಂಬವಾಗುವ ಸಾಧ್ಯತೆಯಿಲ್ಲ ಎಂದು ಟೂರ್ನಿಯ ಆಯೋಜಕರು ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಯು ಮೆಲ್ಬೋರ್ನ್‌ನಲ್ಲಿ ಜನವರಿ 20ರಂದು ಆರಂಭವಾಗಲಿದೆ. ಆಸ್ಟ್ರೇಲಿಯದ ಪೂರ್ವ ಭಾಗದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನ ಪರಿಣಾಮ 25 ಮಂದಿ ಸಾವನ್ನಪ್ಪಿದ್ದರು.

ಪರಿಸ್ಥಿತಿ ಸುಧಾರಿಸದೇ ಇದ್ದರೆ ಆಯೋಜಕರು ಟೂರ್ನಮೆಂಟ್‌ನ್ನು ವಿಳಂಬವಾಗಿ ಆರಂಭಿಸುವತ್ತ ಗಮನ ನೀಡಬೇಕು ಎಂದು ಎಟಿಪಿ ಆಟಗಾರರ ಕೌನ್ಸಿಲ್‌ನ ಅಧ್ಯಕ್ಷ ನೊವಾಕ್ ಜೊಕೊವಿಕ್ ಆಗ್ರಹಿಸಿದ್ದರು.

ಕಾಡ್ಗಿಚ್ಚಿನ ಹೊಗೆಯು ಆಸ್ಟ್ರೇಲಿಯನ್ ಓಪನ್ ಮೇಲೆ ಪರಿಣಾಮಬೀರಲಿದೆ ಎಂಬ ಊಹಾಪೋಹ ಹರಡುತ್ತಿದೆ.ನಮಗೆ ಲಭಿಸಿರುವ ಮಾಹಿತಿಯ ಅನ್ವಯ ವಾತಾವರಣ ಚೆನ್ನಾಗಿದೆ. ಟೂರ್ನಿಯು ವಿಳಂಬವಾಗುವ ಸಾಧ್ಯತೆಯಿಲ್ಲ. ಆಸ್ಟ್ರೇಲಿಯನ್ ಓಪನ್ ವೇಳಾಪಟ್ಟಿಯಂತೆಯೇ ನಡೆಯಲು ನಾವು ಹೆಚ್ಚುವರಿ ಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತೇವೆ’’ ಎಂದು ಟೆನಿಸ್ ಆಸ್ಟ್ರೇಲಿಯದ ಮುಖ್ಯಸ್ಥ ಕ್ರೆಗ್ ಟೈಲಿ ತಿಳಿಸಿದ್ದಾರೆ.

ಹಲವು ಆಸ್ತಿಪಾಸ್ತಿಯನ್ನು ನಾಶ ಮಾಡಿರುವ ಬೆಂಕಿಯ ಚಿತ್ರಗಳು ಸಂಕಟ ಉಂಟುಮಾಡುತ್ತದೆ. ಮೆಲ್ಬೋರ್ನ್‌ನ ಜನತೆಯ ಸುರಕ್ಷತೆಗೆ ಈ ಘಟನೆಯಿಂದ ಅಪಾಯವಿಲ್ಲ. ನಗರದಿಂದ ನೂರಾರು ಕಿಲೋಮೀಟರ್‌ಗಳ ದೂರದಲ್ಲಿ ಘಟನೆ ನಡೆದಿದ್ದು, ಆಟಗಾರರು, ಸಿಬ್ಬಂದಿ ಹಾಗೂ ಟೆನಿಸ್ ಅಭಿಮಾನಿಗಳ ಆರೋಗ್ಯ ಹಾಗೂ ಸುರಕ್ಷತೆ ನಮ್ಮ ಆದ್ಯತೆಯಾಗಿದೆ.ಟೂರ್ನಮೆಂಟ್‌ನುದ್ದಕ್ಕೂ ಸಾರಿಗೆ ವ್ಯವಸ್ಥೆಯ ಮೇಲೆ ನಿಗಾವಹಿಸಲು, ವಿಮರ್ಶಿಸಲು ಹೆಚ್ಚುವರಿ ಸಂಪನ್ಮೂಲ ಒದಗಿಸಲು ನಾವು ಬದ್ಧರಾಗಿದ್ದೇವೆ. ಎಲ್ಲ ಲಭ್ಯವಿರುವ ದತ್ತಾಂಶವನ್ನು ವಿಶ್ಲೇಷಿಸಲು ಹವಾಮಾನ ಹಾಗೂ ವಾಯುಗುಣಮಟ್ಟ ತಜ್ಞರು ಮೆಲ್ಬೋರ್ನ್ ಪಾರ್ಕ್ ಸ್ಟೇಡಿಯಂನಲ್ಲಿ ಇರುತ್ತಾರೆ.ನಮ್ಮ ವೈದ್ಯಕೀಯ ತಂಡ ಹಾಗೂ ಇತರ ಸ್ಥಳೀಯ ತಜ್ಞರೊಂದಿಗೆ ನಾವು ನಿರಂತರ ಕಾರ್ಯೋನ್ಮುಖರಾಗಿರುತ್ತೇವೆ ಎಂದು ಟೈಲಿ ತಿಳಿಸಿದ್ದಾರೆ.

ಈಗ ಸಿಡ್ನಿ, ಬ್ರಿಸ್ಬೇನ್ ಹಾಗೂ ಪರ್ತ್ ನಲ್ಲಿ ನಡೆಯುತ್ತಿರುವ ಎಟಿಪಿ ಕಪ್‌ನಲ್ಲಿ ಆಸ್ಟ್ರೇಲಿಯದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿ ನ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಕ್ರೀಡಾಳುಗಳು ನಿಧಿ ಸಂಗ್ರಹಕ್ಕೆ ಅಭಿಯಾನ ಆರಂಭಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್‌ಗಿಂತ ಮೊದಲು ಜ.15ರಂದು ಮೆಲ್ಬೋರ್ನ್‌ನಲ್ಲಿ ನಿಧಿ ಸಂಗ್ರಹಕ್ಕಾಗಿ ಪ್ರದರ್ಶನ ಪಂದ್ಯವನ್ನು ಟೆನಿಸ್ ಆಸ್ಟ್ರೇಲಿಯ ಆಯೋಜಿಸಿದೆ. ಇದರಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News