ವಿಧಾನಸೌಧಕ್ಕೂ ತಟ್ಟಿದ ಕಾರ್ಮಿಕ ಸಂಘಟನೆಗಳ ಮುಷ್ಕರದ ಬಿಸಿ

Update: 2020-01-08 12:19 GMT

ಬೆಂಗಳೂರು, ಜ. 8: ಕಾರ್ಮಿಕ ಕಾನೂನು ಸುಧಾರಣೆ ಸೇರಿದಂತೆ ಕೇಂದ್ರದ ತಪ್ಪು ಆರ್ಥಿಕ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಮುಷ್ಕರದ ಬಿಸಿ ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ(ಎಂ.ಎಸ್.ಬಿಲ್ಡಿಂಗ್)ಕ್ಕೂ ತಟ್ಟಿತ್ತು.

ಬುಧವಾರ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಎಂದಿನಂತೆ ಕಚೇರಿಗಳು ಆರಂಭವಾದರೂ, ಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ ಸಿಬ್ಬಂದಿ ಹಾಜರಾತಿ ಕೊರತೆ ಎದ್ದುಕಾಣುತ್ತಿತ್ತು. ಸದಾ ಜನ ಜಂಗುಳಿಯಿಂದ ತುಂಬಿ ತುಳುತ್ತಿದ್ದ ವಿಧಾನಸೌಧದಲ್ಲಿ ಸಚಿವರು ಹಾಗೂ ಜನಪ್ರತಿನಿಧಿಗಳಿಲ್ಲದೆ ಬಣಗುಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಿಎಂ ಕಾರ್ಯಕ್ರಮ ರದ್ದು: ಬಜೆಟ್ ಸಿದ್ಧತೆ ಸೇರಿದಂತೆ ಸದಾ ಒಂದಿಲ್ಲೊಂದು ಸಭೆ, ಸಮಾರಂಭಗಳಲ್ಲಿ ಮುಳುಗಿರುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ದಿನದ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ಡಾಲರ್ಸ್‌ ಕಾಲನಿಯಲ್ಲಿರುವ ತನ್ನ ಧವಳಗಿರಿ ನಿವಾಸದಲ್ಲೆ ವಿಶ್ರಾಂತಿಗೆ ಮೊರೆಹೋಗಿದ್ದರು. ಹೀಗಾಗಿ ಸಿಎಂ ನಡೆಸಬೇಕಿದ್ದ ಸಭೆಗಳ ಹೊಣೆಯನ್ನು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್‌ಗೆ ವಹಿಸಲಾಗಿದೆ. ರೋರಿಕ್-ದೇವಿಕಾ ರಾಣಿ ಎಸ್ಟೇಟ್, ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ, ಹೆಸರಘಟ್ಟ ಫಿಲ್ಮ್ ಇನ್ಸ್‌ಟಿಟ್ಯೂಟ್ ಕುರಿತು ಅಧಿಕಾರಿಗಳೊಂದಿಗೆ ಡಿಸಿಎಂ ಸಭೆ ನಡೆಸಿದರು ಎಂದು ಗೊತ್ತಾಗಿದೆ.

ರಾಜಕೀಯ ಚಟುವಟಿಕೆ ಹಾಗೂ ನಿರಂತರ ಸುತ್ತಾಟದಿಂದ ಬಳಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಶ್ರಾಂತಿ ಪಡೆದುಕೊಳ್ಳಲು ವೈದ್ಯರು ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಅವರಿಂದು ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿ ವಿಶ್ರಾಂತಿ ಪಡೆದಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News