ಬೆಂಗಳೂರು: ಮುಷ್ಕರ ಬೆಂಬಲಿಸಿ ಬೀದಿಗಿಳಿದ ರಕ್ಷಣಾ ಇಲಾಖೆ ಉದ್ಯೋಗಿಗಳು

Update: 2020-01-08 12:57 GMT

ಬೆಂಗಳೂರು, ಜ.8: ದೇಶ ವ್ಯಾಪಿ ನಡೆದ ಕಾರ್ಮಿಕರ ಮುಷ್ಕರ ಬೆಂಬಲಿಸಿ ರಕ್ಷಣಾ ಇಲಾಖೆಯ ನೂರಾರು ಉದ್ಯೋಗಿಗಳು, ಕೇಂದ್ರ ಸರಕಾರದ ಖಾಸಗೀಕರಣ ಪ್ರಕ್ರಿಯೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಬುಧವಾರ ಇಲ್ಲಿನ ಜೆಸಿ ನಗರದ ಟಿವಿ ಟವರ್ ಸಮೀಪದ ಸಿಕ್ಯೂಎಎಲ್ ಕಚೇರಿ ಮುಂಭಾಗ ಆಲ್ ಇಂಡಿಯಾ ಡಿಫೆನ್ಸ್ ಎಂಪ್ಲಾಯೀಸ್ ಫೆಡರೇಷನ್ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಮುಷ್ಕರದ ನೇತೃತ್ವ ವಹಿಸಿ ಮಾತನಾಡಿದ ಫೆಡರೇಷನ್ ಉಪಾಧ್ಯಕ್ಷ ಎಂ.ಕೆ.ರವೀಂದ್ರನ್ ಪಿಳ್ಳೆ, ರಕ್ಷಣಾ ಉದ್ಯಮದ ಖಾಸಗೀಕರಣ ತಡೆಯಲು, ಜೊತೆಗೆ ನಿವೃತ್ತ ವೇತನದ ಹಕ್ಕನ್ನು ಮರಳಿ ಪಡೆಯುವ ಸಲುವಾಗಿ ಹಲವು ದಿನಗಳಿಂದ ಮುಷ್ಕರ ಕೈಗೊಳ್ಳಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಕೇಂದ್ರದ ಮೋದಿ ಸರಕಾರ ಖಾಸಗಿ ಕಾರ್ಪೊರೇಟ್ ಕುಳಗಳನ್ನು ಬಲಪಡಿಸುವ ಗುರಿ ಇಟ್ಟುಕೊಂಡಿದ್ದು, ಪ್ರಮುಖ ರಕ್ಷಣಾ ತಯಾರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಾದ ಸಂಶೋಧನೆ ಹಾಗೂ ಸೇವಾ ಕಾರ್ಯಗಳನ್ನು ಅಂಬಾನಿ ಮತ್ತು ಅದಾನಿಗಳ ಗುಂಪಿಗೆ ವಹಿಸಲು ತೀರ್ಮಾನಿಸಿದೆ ಎಂದು ಗಂಭೀರ ಆರೋಪ ಮಾಡಿದರು.

ಕೇಂದ್ರದ ನೀತಿಗಳಿಂದ ರಾಷ್ಟ್ರ ವ್ಯಾಪ್ತಿಯ ನಾಲ್ಕು ಲಕ್ಷ ರಕ್ಷಣಾ ನಾಗರಿಕ ಉದ್ಯೋಗಿಗಳು ರೋಸಿ ಹೋಗಿದ್ದಾರೆ ಎಂದ ಅವರು, ರಕ್ಷಣಾ ನೀತಿಗಳು ದೇಶದ ಅಭಿವೃದ್ಧಿಗಾಗಿಯೋ ಅಥವಾ ಖಾಸಗಿ ಕಾರ್ಪೋರೇಟ್‌ಗಳ ಉದ್ಧಾರಕ್ಕಾಗಿ ಇವೆಯೋ ಎಂದು ಅವರು ಪ್ರಶ್ನೆ ಮಾಡಿದರು.

ಸರಕಾರಿ ಕಾರ್ಪೋರೇಟ್ ವ್ಯವಸ್ಥೆಯಡಿ ದೇಶದ ಸೈನಿಕರಿಗೆ ಸ್ವೇಚ್ಛಾ ಸ್ವಾತಂತ್ರವನ್ನು ನೀಡಬೇಕು. ಅವರಿಗೆ ಬೇಕಾದ ಯುದ್ಧ ಸಾಮಗ್ರಿಗಳನ್ನು ಪಡೆಯಲು ನಿರಾಕರಿಸಿದೆ, ಅವರಿಗೆ ಅನುಮತಿ ನೀಡಬೇಕು. ಈ ಎಲ್ಲ ವಿಚಾರಗಳನ್ನು ಸರಕಾರ ಸಂಸತ್ತಿನೊಳಗೆ ಹಾಗೂ ಹೊರಗೆ ಚರ್ಚಿಸಬೇಕು ಎಂದು ಅವರು ಒತ್ತಾಯ ಮಾಡಿದರು.

ದೇಶದ ಶಾಂತಿ ಸ್ಥಾಪನೆಗಾಗಿ, ರಕ್ಷಣಾ ಉದ್ಯಮಗಳಲ್ಲಿ ಸ್ವಾವಲಂಬನೆ ಸಾಧಿಸಲು ರಕ್ಷಣಾ ಘಟಕಗಳನ್ನು ಸ್ಥಾಪಿಸಲಾಗಿದ್ದು, ಸಂಸ್ಥೆಯಲ್ಲಿನ ಕೌಶಲ್ಯಭರಿತ ನೌಕರರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಗೌರವವನ್ನು ಸಾಧಿಸಲು ಒದ್ದಾಡುತ್ತಿದ್ದಾರೆ. ಆದರೆ, ಸರಕಾರ ಅವರನ್ನು ಉತ್ತೇಜಿಸುವ ಬದಲಾಗಿ, ರಕ್ಷಣಾ ಘಟಕಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂದು ದೂರಿದರು.

ಸರಕಾರವು ಸೈನಿಕರ ಅಧೀನದಲ್ಲಿರುವ ಉದ್ಯಮಗಳಿಗೆ ಮತ್ತು ಘಟಕಗಳಿಗೆ ಗುಣಮಟ್ಟ ಹಾಲನ್ನು ಸರಬರಾಜು ಮಾಡುತ್ತಿದ್ದ, ಸೇನಾ ಕೃಷಿ ವಲಯಗಳನ್ನು, ತನ್ನ ಕಾರ್ಯನೀತಿ ಅನ್ವಯ ಮುಚ್ಚಲು ನಿರ್ಧರಿಸಿದೆ. ಅಲ್ಲದೆ, ಡಿಆರ್‌ಡಿಓದಲ್ಲಿ ಮಾನವ ಸಂಪನ್ಮೂಲವನ್ನು ಗಣನೀಯವಾಗಿ ತಗ್ಗಿಸಲಾಗಿದೆ ಎಂದು ಎಂ.ಕೆ.ರವೀಂದ್ರ ಪಿಳ್ಳೆ ಹೇಳಿದರು.

ಮುಷ್ಕರದಲ್ಲಿ ಎಡಿಇ ಅಧ್ಯಕ್ಷ ನಾರಾಯಣಪ್ಪ, ಉಪಾಧ್ಯಕ್ಷ ಭಾಸ್ಕರ್ ರಾವ್, ಕಾರ್ಯದರ್ಶಿ ಪ್ರಸನ್ನ, ಆರ್.ಎನ್.ನಾಗರಾಜ್ ಸೇರಿದಂತೆ ಪ್ರಮುಖರಿದ್ದರು.

‘ವಿಶೇಷ ಮಹಾ ನಿರ್ದೇಶಕನನ್ನು ಬದಲಿಸಿ’
ದೆಹಲಿಯಲ್ಲಿರುವ ರಕ್ಷಣಾ ಇಲಾಖೆಯ ವಿಶೇಷ ಮಹಾ ನಿರ್ದೇಶಕ (ಗುಣಮಟ್ಟ) ಜೆ. ಜನಾರ್ದನ್ ಎಂಬಾತನನ್ನು ಸರಕಾರ ಈ ಕೂಡಲೇ ಬದಲಾವಣೆ ಮಾಡಬೇಕು. ಅಲ್ಲದೆ, ಈತ ಕಾರ್ಮಿಕರ ಹಿತರಕ್ಷಣೆಗೆ ಬದ್ಧವಿಲ್ಲ. ಹಲವು ಯೋಜನೆಗಳಿಗೆ ಈತನೇ ಕಡಿವಾಣ ಹಾಕುತ್ತಾನೆ ಎಂದು ಎಂ.ಕೆ.ರವೀಂದ್ರನ್ ಪಿಳ್ಳೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News