ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಸರಿಯಲ್ಲ: ಸಿಎಎಗೆ ಕ್ರೈಸ್ತ ಸಮುದಾಯ ವಿರೋಧ

Update: 2020-01-09 12:17 GMT
ಡಾ.ಪೀಟರ್ ಮಚಾದೊ

ಬೆಂಗಳೂರು, ಜ.9: ವ್ಯಕ್ತಿಗತ ಅರ್ಹತೆಯನ್ನು ಪರಿಗಣಿಸಿ ದೇಶದ ಪೌರತ್ವವನ್ನು ನೀಡಬೇಕೇ ಹೊರತು ಧರ್ಮದ ಆಧಾರದಲ್ಲಿ ಅಲ್ಲ. ದೇಶ ಮತ್ತು ನಾಗರಿಕರ ಒಳಿತಿಗಾಗಿ ಕಾಯ್ದೆಯನ್ನು ಹಿಂಪಡೆಯುವುದು ಸೂಕ್ತ ಎಂದು ಬೆಂಗಳೂರಿನ ಆರ್ಚ್ ಬಿಷಪ್ ರೆವೆರೆಂಡ್ ಡಾ.ಪೀಟರ್ ಮಚಾದೊ ಆಗ್ರಹಿಸಿದ್ದಾರೆ.

ಗುರುವಾರ ನಗರದ ಪಾಲಾನ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಕುರಿತಂತೆ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದ್ದು, ಅಕ್ರಮವಾಗಿ ವಲಸೆ ಬಂದಿರುವ ವಿದೇಶಿ ಪ್ರಜೆಗಳಿಗೆ ಧರ್ಮದ ಆಧಾರದಲ್ಲಿ ಪೌರತ್ವ ಕೊಡದೇ, ಆದ್ಯತೆ ಅನುಸಾರ ಪೌರತ್ವ ನೀಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.

ಪೌರತ್ವವನ್ನು ಧರ್ಮದ ಆಧಾರದಲ್ಲಿ ನೀಡುವ ಬದಲಾಗಿ ಪ್ರತಿಯೊಬ್ಬರ ವೈಯಕ್ತಿಕ ಅರ್ಹತೆ ಆಧರಿಸಿ ನೀಡುವಂತೆ ಪತ್ರದಲ್ಲಿ ಕೋರಲಾಗಿದೆ ಎಂದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯು ಸಾಮಾನ್ಯ ನಾಗರಿಕತ್ವಕ್ಕೆ ಈ ಹಿಂದೆ ಅವಶ್ಯಕವಾಗಿದ್ದ 11 ವರ್ಷಗಳ ಕಾಲಾವಧಿಯನ್ನು 5 ವರ್ಷಗಳಿಗೆ ಇಳಿಸಿದ್ದು, ಇದು ಸಹ ಮೂರು ದೇಶಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ಜನರಲ್ಲಿ ಅಪಾರ್ಥ ಮತ್ತು ಗೊಂದಲವನ್ನು ಸೃಷ್ಟಿಸಿ ಅಸ್ಸಾಂ ರಾಜ್ಯದಲ್ಲಿ ಪ್ರತಿಭಟನೆ ಹಾಗೂ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿರುವ ದೇಶದ ಸಮಸ್ತ ನಾಗರಿಕರು ಯಾವುದೇ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಬಾರದೆಂದು ವಿನಂತಿಸಲಾಗುತ್ತಿದೆ. ಅಲ್ಲದೆ, ಕೇಂದ್ರ ಸರಕಾರವು ಪೌರತ್ವವನ್ನು ಧರ್ಮದ ಆಧಾರದ ಮೇಲೆ ನೀಡಬಾರದೆಂದು ನಾವು ಬೇಡಿಕೊಳ್ಳುತ್ತಿದ್ದೇವೆ. ವ್ಯಕ್ತಿಗತ ಅರ್ಹತೆಯನ್ನು ಪರಿಗಣಿಸಿ ಪೌರತ್ವವನ್ನು ನೀಡಿದಾಗ ಮಾತ್ರ ಅಕ್ರಮ ವಲಸಿಗರಿಗೆ ನ್ಯಾಯ ಕಲ್ಪಿಸಿದಂತಾಗುತ್ತದೆ ಎಂದು ಮಚಾಡೋ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನವಾದರೆ ಭಾರತದ ನಾಗರಿಕರನ್ನು ಧರ್ಮದ ಆಧಾರದಲ್ಲಿ ದ್ರುವೀಕರಿಸುವ ಸಂಭವವಿದೆ. ಇದು ದೇಶಕ್ಕೆ ಮಾರಕ. ಅಭಿಪ್ರಾಯ, ಅನಿಸಿಕೆಗಳಲ್ಲಿ ಸಂಘರ್ಷವೇರ್ಪಟ್ಟರೆ ಅವುಗಳನ್ನು ಬಗೆಹರಿಸಿಕೊಳ್ಳಲು ಹಿಂಸೆಯು ಯಾವುದೇ ರೀತಿಯಲ್ಲಿ ನೆರವಾಗುವುದಿಲ್ಲ. ಸರಕಾರವು ಈ ಕಾಯ್ದೆಯನ್ನು ವಿರೋಧಿಸುತ್ತಿರುವವರೊಂದಿಗೆ ಸಂವಾದ ನಡೆಸಿ, ಅವರ ವಾದಗಳನ್ನೂ ಆಲಿಸಿ, ಅದಕ್ಕೆ ನ್ಯಾಯಯುತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News