ಕಾಲೇಜು ಆವರಣದಲ್ಲೇ ಬಿಜೆಪಿ ಕಾರ್ಯಕರ್ತರಿಂದ ಬೆದರಿಕೆ ಆರೋಪ: ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2020-01-09 16:52 GMT

ಬೆಂಗಳೂರು, ಜ.9: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಬೆಂಬಲಿಸಿ ಕೆಲ ಬಿಜೆಪಿ ಕಾರ್ಯಕರ್ತರು, ಜ್ಯೋತಿ ನಿವಾಸ ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನೂರಾರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ನಗರದ ಕೋರಮಂಗಲದ ಜ್ಯೋತಿ ನಿವಾಸ ಕಾಲೇಜು ಆವರಣದಲ್ಲಿಯೇ ವೌನ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು, ಕೆಲ ಬಿಜೆಪಿ ಕಾರ್ಯಕರ್ತರು ಉದ್ದೇಶ ಪೂರ್ವಕವಾಗಿಯೇ ಗಲಾಟೆ ನಡೆಸಿ, ನಮ್ಮನ್ನು ನಿಂದಿಸಿದ್ದಾರೆ ಎಂದು ದೂರಿದರು.

ಕೇಂದ್ರ ಸರಕಾರದ ಯಾವುದೇ ಕಾಯ್ದೆ, ಕಾನೂನು ಇರಲಿ. ಇದನ್ನು ಬೆಂಬಲಿಸುವ ಮತ್ತು ವಿರೋಧಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ಕೆಲವರು ಗೂಂಡಾ ರೀತಿ ವರ್ತನೆ ಮಾಡುವುದು ಸರಿಯಲ್ಲ. ಇಂತಹ ವಾತಾವರಣ ಬದಲಾಗಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ಹೇಳಿದರು.

ಏನಿದು ಪ್ರಕರಣ?: ಸಿಎಎ ಬೆಂಬಲಿಸಿ ಅಭಿಯಾನ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರು ಬುಧವಾರ ಇಲ್ಲಿನ ಜ್ಯೋತಿ ನಿವಾಸ ಕಾಲೇಜಿಗೆ ತೆರಳಿ ಸಹಿ ಸಂಗ್ರಹದಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿನಿಯರಿಗೆ ಒತ್ತಡ ಹೇರಿದ್ದರು ಎನ್ನಲಾಗಿದೆ.

ಆದರೆ, ವಿದ್ಯಾರ್ಥಿನಿಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ನಾವು ಸಂವಿಧಾನ ವಿರೋಧಿ ಕಾಯ್ದೆಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಬಿಜೆಪಿ ಕಾರ್ಯಕರ್ತರೊಂದಿಗೆ ನಡೆಸಿದ ಮಾತಿನ ಚಕಮಕಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೆಲವರು ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪವು ಕೇಳಿಬಂದಿದೆ.

ತನಿಖೆಗೆ ಆದೇಶ

ಜ್ಯೋತಿ ನಿವಾಸ ಕಾಲೇಜಿನಲ್ಲಿ ಪೌರತ್ವ ಪರ ಸಹಿ ಹಾಕಲು ಬಿಜೆಪಿ ಕಾರ್ಯಕರ್ತರಿಂದ ಒತ್ತಾಯ ಆರೋಪ ಪ್ರಕರಣ ಸಂಬಂಧ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪ ವಿಚಾರದ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸಲಿದ್ದಾರೆ. ಆದರೆ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ರಾಜಕೀಯ ಮಾಡಲು ಅಲ್ಲಿಗೆ ಹೋಗಿದ್ದಾರೆ ಎಂದು ದೂರಿದರು.

ಭದ್ರತೆ ನಿಯೋಜನೆ

ಕೋರಮಂಗಲದ ಜ್ಯೋತಿನಿವಾಸ್ ಕಾಲೇಜಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಷಾ ಪಂತ್ ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪೌರತ್ವ ಕಾಯ್ದೆ ಪರ ಅಭಿಯಾನ ನಡೆಸಲು ಬಿಜೆಪಿ ಕಾರ್ಯಕರ್ತರು ಬುಧವಾರ ಕಾಲೇಜಿಗೆ ತೆರಳಿದ್ದ ವೇಳೆ ವಿದ್ಯಾರ್ಥಿಗಳ ಜತೆ ಮಾತಿನ ಚಕಮಕಿ ನಡೆದಿದೆ ಎನ್ನಲಾದ ಬಗ್ಗೆ ಸ್ಥಳದಲ್ಲಿನ ಸಿಸಿಟಿವಿ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಘಟನೆ ಬಗ್ಗೆ ಕಾಲೇಜು ಮಂಡಳಿ ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಯಾವುದೇ ರೀತಿಯ ಹಲ್ಲೆ, ಬೆದರಿಕೆ ನಡೆದಿಲ್ಲ. ಕಾಲೇಜಿಗೆ ಸೂಕ್ತ ಭದ್ರತೆ ನೀಡಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಬೆಂಬಲ

ಜ್ಯೋತಿ ನಿವಾಸ ಕಾಲೇಜಿಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ, ಘಟನೆ ಸಂಬಂಧ ಮಾಹಿತಿ ಪಡೆದರು,

ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲ ಮತ್ತು ರಕ್ಷಣೆ ನೀಡಲಾಗುವುದು. ಈ ಘಟನೆ ಸಂಬಂಧ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಮಲಿಂಗಾರೆಡ್ಡಿ ಆಗ್ರಹಿಸಿದರು.

ಪಾಕಿಸ್ತಾನಕ್ಕೆ ಹೋಗಿ ಎಂದರು !

ಸಿಎಎ ಬೆಂಬಲಿಸಿ ಬಂದ ಬಿಜೆಪಿ ನಾಯಕರು, ನಾವು ಈ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಎಂದರು. ಆದರೆ, ಇದು ಮಹಿಳೆಯರ ಕಾಲೇಜು ಆಗಿದೆ. ಅಲ್ಲದೆ, ಸಹಿ ಸಂಗ್ರಹಕ್ಕೆ ಆಕ್ಷೇಪ ವ್ಯಕ್ತಪಡಿಸಿದಕ್ಕೆ, ನೀವು ಪಾಕಿಸ್ತಾನಕ್ಕೆ ಹೋಗಿ ಎಂದಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News