ತನ್ನ ಹಿರಿಯ ನಾಯಕರ ಬಿಡುಗಡೆಗೆ ಕೇಂದ್ರಕ್ಕೆ ಎನ್‌ಸಿ ಮನವಿ

Update: 2020-01-11 14:23 GMT

ಶ್ರೀನಗರ,ಜ.11: ರಾಜಕೀಯ ಚಟುವಟಿಕೆಗಳ ಪುನರಾರಂಭಕ್ಕೆ ಮಾರ್ಗ ಸುಗಮಗೊಳಿಸಲು ತನ್ನ ಹಿರಿಯ ನಾಯಕರನ್ನು ಬಿಡುಗಡೆಗೊಳಿಸುವಂತೆ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಶನಿವಾರ ಕೇಂದ್ರ ಸರಕಾರವನ್ನು ಕೋರಿಕೊಂಡಿದೆ.

ಮಾಧ್ಯಮಗಳ ಒಂದು ವರ್ಗದಲ್ಲಿಯ ವರದಿಗಳನ್ನು ತಿರಸ್ಕರಿಸಿರುವ ಅದು,ನಾಯಕರ ಬಿಡುಗಡೆಗಾಗಿ ಕೇಂದ್ರದೊಂದಿಗೆ ಯಾವುದೇ ವ್ಯವಹಾರ ನಡೆಯುತ್ತಿಲ್ಲ ಎಂದಿದೆ.

ವರದಿಗಳನ್ನು ಆಧಾರರಹಿತ ಎಂದು ಹೇಳಿಕೆಯಲ್ಲಿ ಬಣ್ಣಿಸಿರುವ ಎನ್‌ಸಿ,ಪಕ್ಷದ ಪೋಷಕರಾದ ಫಾರೂಕ್ ಅಬ್ದುಲ್ಲಾ ಮತ್ತು ಅವರ ಪುತ್ರ ಉಮರ್ ಅಬ್ದುಲ್ಲಾ ಅವರು ಕಾಶ್ಮೀರವನ್ನೆಂದಿಗೂ ತೊರೆಯುವುದಿಲ್ಲ. ಇಂತಹ ಯಾವುದೇ ಕೊಡುಗೆ ನಮ್ಮ ಮುಂದಿಲ್ಲ ಮತ್ತು ಇಂತಹ ವ್ಯವಹಾರ ಎಂದಿಗೂ ಸ್ವೀಕೃತವಲ್ಲ ಎಂದು ಹೇಳಿದೆ.

ಪಕ್ಷದ ಯಾವುದೇ ನಾಯಕರು ದೇಶಭ್ರಷ್ಟರಾಗುವ ಅಥವಾ ದೇಶವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿರುವ ಹೇಳಿಕೆಯು,2019 ಆಗಸ್ಟ್ ಮೊದಲ ವಾರದಲ್ಲಿ ಬಂಧಿಸಲ್ಪಟ್ಟ ಎಲ್ಲರನ್ನು ಬೇಷರತ್ ಬಿಡುಗಡೆಗೊಳಿಸಬೇಕು ಮತ್ತು ಸಹಜ ಚಟುವಟಿಕೆಗಳನ್ನು ಪುನರಾರಂಭಿಸಲು ಅವಕಾಶ ನೀಡಬೇಕು ಎಂದಿದೆ.

 ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಆ.5ರಂದು ಫಾರೂಕ್ ಮತ್ತು ಉಮರ್ ಸೇರಿದಂತೆೆ ಹಲವಾರು ರಾಜಕೀಯ ನಾಯಕರನ್ನು ಬಂಧಿಸಲಾಗಿತ್ತು. ಸೆ.17ರಂದು ಫಾರೂಕ್ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ನು ಹೇರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News