ಕಿವೀಸ್ ಕ್ರಿಕೆಟ್ ಪ್ರವಾಸಕ್ಕೆ ಇಂದು ಟೀಮ್ ಇಂಡಿಯಾ ಆಯ್ಕೆ

Update: 2020-01-11 18:55 GMT

ಮುಂಬೈ, ಜ.11: ನ್ಯೂಝಿಲ್ಯಾಂಡ್‌ಗೆ ಆರು ವಾರಗಳ ಕಾಲ ಕ್ರಿಕೆಟ್ ಪ್ರವಾಸ ಕೈಗೊಳ್ಳಲಿರುವ ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡವನ್ನು ರವಿವಾರ ಆಯ್ಕೆ ಮಾಡಲಾಗುತ್ತದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡವನ್ನು ಸೇರಲಿರುವ ಪ್ರಮುಖ ಆಟಗಾರನಾಗಿದ್ದಾರೆ.

ಟೀಮ್ ಇಂಡಿಯಾ ಜ.24ರಿಂದ ನ್ಯೂಝಿಲ್ಯಾಂಡ್ ವಿರುದ್ಧ 5 ಪಂದ್ಯಗಳ ಟ್ವೆಂಟಿ-20 ಸರಣಿ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲದೆ, ಎರಡು ಪಂದ್ಯಗಳ ಟೆಸ್ಟ್ ಸರಣಿಗಳನ್ನು ಆಡಲಿದೆ. ಈ ಎಲ್ಲ ಸರಣಿಗೆ ರವಿವಾರ ತಂಡವನ್ನು ಪ್ರಕಟಿಸಲಾಗುತ್ತದೆ.

ಭಾರತ ತಂಡ ನ್ಯೂಝಿಲ್ಯಾಂಡ್ ನೆಲದಲ್ಲಿ 8 ಸೀಮಿತ ಓವರ್‌ಗಳ ಪಂದ್ಯಗಳನ್ನಾಡಲಿದೆ. ಆಯ್ಕೆಗಾರರು 15ರ ಬದಲಿಗೆ 16 ಅಥವಾ 17 ಸದಸ್ಯರುಗಳಿರುವ ತಂಡವನ್ನು ಆಯ್ಕೆ ಮಾಡುತ್ತಾರೋ ಎಂದು ಕಾದುನೋಡಬೇಕಾಗಿದೆ.

ಟೀಮ್ ಇಂಡಿಯಾಕ್ಕೆ ಮೊದಲೇ ಭಾರತ ‘ಎ’ ತಂಡ ಕಿವೀಸ್ ನಾಡಿಗೆ ತೆರಳಲಿದ್ದು, ಅಗತ್ಯಬಿದ್ದರೆ ಭಾರತ ‘ಎ’ ತಂಡದಿಂದ ಆಟಗಾರರನ್ನು ಆಯ್ಕೆ ಮಾಡಬಹುದು.

ಈ ವರ್ಷ ಟ್ವೆಂಟಿ-20 ವಿಶ್ವಕಪ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿಯು ಸೀಮಿತ ಓವರ್ ಕ್ರಿಕೆಟ್‌ನತ್ತ ಹೆಚ್ಚು ಗಮನ ನೀಡಲು ನಿರ್ಧರಿಸಿದೆ. ಶುಕ್ರವಾರ ಕೊನೆಗೊಂಡ ಟ್ವೆಂಟಿ-20 ಸರಣಿಯಲ್ಲಿ ಲಂಕಾ ವಿರುದ್ಧ ಆಡಿರುವ ತಂಡವನ್ನೇ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ಈಗಾಗಲೇ ಭಾರತ ‘ಎ’ ತಂಡದೊಂದಿಗೆ ನ್ಯೂಝಿಲ್ಯಾಂಡ್‌ಗೆ ತೆರಳಿದ್ದು, ನ್ಯೂಝಿಲ್ಯಾಂಡ್ ವಿರುದ್ದ ಕೆಲವು ಲಿಸ್ಟ್ ‘ಎ’ ಪಂದ್ಯ, ಎರಡು ಅಭ್ಯಾಸ ಪಂದ್ಯಗಳಲ್ಲಿ ಆಡಿ ತಮ್ಮ ಫಿಟ್ನೆಸ್ ಸಾಬೀತುಪಡಿಸಿದ ಬಳಿಕವೇ ತಂಡಕ್ಕೆ ಸೇರ್ಪಡೆಯಾಗುವ ನಿರೀಕ್ಷೆಯಿದೆ.

 ಭಾರತ ‘ಎ’ ತಂಡ ಆಡಲಿರುವ 3 ಲಿಸ್ಟ್ ‘ಎ’ ಪಂದ್ಯಗಳು ಜ.26ಕ್ಕೆ ಕೊನೆಯಾಗಲಿದೆ. ಬೆನ್ನು ನೋವಿನಿಂದ ಚೇತರಿಸಿಕೊಂಡು ವಾಪಸಾಗುತ್ತಿರುವ ಹಾರ್ದಿಕ್ ಪಾಂಡ್ಯ ಮೂರನೇ ಟ್ವೆಂಟಿ-20 ಪಂದ್ಯದ ವೇಳೆಗೆ ತಂಡಕ್ಕೆ ಸೇರ್ಪಡೆಯಾಗಬಹುದು.

ಏಕದಿನ ತಂಡದಲ್ಲಿ ಕೇದಾರ್ ಜಾಧವ್‌ರನ್ನು ಕೈಬಿಡಬೇಕೆಂಬ ತೀವ್ರ ಒತ್ತಡವಿದೆ. ನ್ಯೂಝಿಲ್ಯಾಂಡ್‌ನಲ್ಲಿ ಜಾಧವ್ ಅವರ ತಾಂತ್ರಿಕ ಸಾಮರ್ಥ್ಯ ಒರೆಗೆ ಹಚ್ಚಲ್ಪಡಲಿದೆ. ಭಾರತ ತಾಂತ್ರಿಕವಾಗಿ ಶಕ್ತಿಶಾಲಿಯಾಗುವತ್ತ ಗಮನ ಹರಿಸಿದರೆ ಅಜಿಂಕ್ಯ ರಹಾನೆ ತಂಡಕ್ಕೆ ವಾಪಸಾಗಬಹುದು. ಟೀಮ್ ಮ್ಯಾನೇಜ್‌ಮೆಂಟ್ ಟ್ವೆಂಟಿ-20 ಸರಣಿಯನ್ನು 50 ಓವರ್ ಪಂದ್ಯಗಳ ಮುಂದುವರಿದ ಭಾಗ ಎಂದು ಯೋಚಿಸಿದರೆ 5 ಹಾಗೂ ಆರನೇ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್ ಒಂದು ಆಯ್ಕೆಯಾಗಬಹುದು. ಸೂರ್ಯ ಹಾಗೂ ಸಂಜು ಸ್ಯಾಮ್ಸನ್ ಭಾರತ ‘ಎ’ ತಂಡದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News