ರಾಜ್ಯಸಭೆ ಮೂಲಕ ದೇವೇಗೌಡರ ಎರಡನೇ ಇನಿಂಗ್ಸ್?

Update: 2020-01-12 03:55 GMT

ಬೆಂಗಳೂರು, ಜ.12: ಜೆಡಿಎಸ್ ಮುಖಂಡ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿ ರಾಜಕೀಯದ ಎರಡನೇ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ.

1991ರಿಂದ 2014ರವರೆಗೆ ಐದು ಬಾರಿ ಲೋಕಸಭೆಗೆ ಆಯ್ಕೆ ಮಾಡಿದ್ದ ತಮ್ಮ ಸಾಂಪ್ರದಾಯಿಕ ಹಾಸನ ಕ್ಷೇತ್ರವನ್ನು ಮೊಮ್ಮೊಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟು ಪಕ್ಕದ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ದೇವೇಗೌಡರು ಅಲ್ಲಿ ಪರಾಭವಗೊಂಡಿದ್ದರು.

ಅಜ್ಜನ ಕ್ಷೇತ್ರದಲ್ಲಿ ಪ್ರಜ್ವಲ್ ಗೆದ್ದರೆ, ದೇವೇಗೌಡರು ಬಿಜೆಪಿಯ ಜಿ.ಎಸ್.ಬಸವರಾಜ್ ವಿರುದ್ಧ 13 ಸಾವಿರ ಮತಗಳ ಅಂತರದ ಸೋಲು ಕಂಡಿದ್ದರು. 28 ಲೋಕಸಭಾ ಕ್ಷೇತ್ರಗಳ ಪೈಕಿ 25ನ್ನು ಬಿಜೆಪಿ ಗೆದ್ದಿತ್ತು. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನ ಗೆದ್ದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದವು.

ಈ ಜೂನ್‌ನಲ್ಲಿ ರಾಜ್ಯಸಭೆಯ ನಾಲ್ಕು ಸ್ಥಾನಗಳು ತೆರವಾಗಲಿದ್ದು, ಕಾಂಗ್ರೆಸ್‌ನ ರಾಜೀವ್ ಗೌಡ ಮತ್ತು ಬಿ.ಕೆ.ಹರಿಪ್ರಸಾದ್, ಬಿಜೆಪಿಯ ಪ್ರಭಾಕರ ಕೋರೆ ಹಾಗೂ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ನಿವೃತ್ತರಾಗಲಿದ್ದಾರೆ. ಇದರಿಂದಾಗಿ ಜೆಡಿಎಸ್ ಅಭ್ಯರ್ಥಿಯಾಗಿ ದೇವೇಗೌಡರ ಸಂಸತ್ ಮರುಪ್ರವೇಶಕ್ಕೆ ಹಾದಿ ಸುಗಮ ಎಂದು ಹೇಳಲಾಗುತ್ತಿದೆ.

224 ಸದಸ್ಯಬಲದ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 117, ಕಾಂಗ್ರೆಸ್ 68 ಹಾಗೂ ಜೆಡಿಎಸ್ 34 ಸದಸ್ಯರನ್ನು ಹೊಂದಿವೆ. ರಾಜ್ಯಸಭಾ ಸ್ಥಾನ ಗೆಲ್ಲಲು 44 ಶಾಸಕರ ಮತ ಪಡೆಯುವುದು ಅಗತ್ಯ. ಬಿಜೆಪಿ ಸುಲಭವಾಗಿ ಎರಡು ಸ್ಥಾನಗಳನ್ನು ಗೆಲ್ಲಲಿದ್ದು, ಕಾಂಗ್ರೆಸ್‌ಗೆ ಒಂದು ಸ್ಥಾನ ಖಚಿತ. ಜೆಡಿಎಸ್‌ಗೆ 10 ಶಾಸಕರ ಕೊರತೆ ಇದ್ದು, ಇತರ ಪಕ್ಷಗಳಿಂದ ಬೆಂಬಲ ಯಾಚಿಸಬೇಕಾಗುತ್ತದೆ.

ಇತ್ತೀಚೆಗೆ ನಡೆದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ವಕ್ತಾರ ತನ್ವೀರ್ ಅಹ್ಮದುಲ್ಲಾ ಅವರು, ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವಂತೆ ದೇವೇಗೌಡರಿಗೆ ಮನವಿ ಮಾಡಿದ್ದಾರೆ. ದೇವೇಗೌಡರ ಸ್ಪರ್ಧೆಯಿಂದ ಜೆಡಿಎಸ್‌ಗೆ ಅಗತ್ಯವಿರುವ ಹೆಚ್ಚುವರಿ ಮತಗಳನ್ನು ಸುಲಭವಾಗಿ ಪಡೆಯಬಹುದು ಎನ್ನುವ ಲೆಕ್ಕಾಚಾರ ಅವರದ್ದು.

ದೇವೇಗೌಡರು ಸ್ಪರ್ಧೆಗೆ ನಿರಾಕರಿಸಿದ್ದರೂ, ಕರ್ನಾಟಕದ ಹಿತಾಸಕ್ತಿ ಕಾಯುವ ದೃಷ್ಟಿಯಿಂದ ರಾಜ್ಯಸಭೆಯಲ್ಲಿ ಪ್ರಬಲ ಧ್ವನಿ ಬೇಕು ಎಂಬ ಕಾರಣಕ್ಕೆ ದೇವೇಗೌಡರ ಸ್ಪರ್ಧೆಗೆ ಒತ್ತಡ ತರಲಾಗುತ್ತಿದೆ ಎಂದು ಮತ್ತೊಬ್ಬ ಮುಖಂಡರು ಹೇಳಿದ್ದಾರೆ. ಕಾಂಗ್ರೆಸ್‌ನ ಒಂದು ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಹಾಗೂ ಮುದ್ದಹನುಮೇಗೌಡ ಹೆಸರುಗಳು ಕೇಳಿ ಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News