ಬಿಜೆಪಿಯಿಂದ ಸಿಎಎ ಪರ ರ್ಯಾಲಿ: ಪಶ್ಚಿಬಂಗಾಳದಲ್ಲಿ ನಿಷೇಧಾಜ್ಞೆ ಜಾರಿ

Update: 2020-01-14 16:05 GMT

ಕೋಲ್ಕತ್ತಾ, ಜ. 14: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬಿಜೆಪಿ ರವಿವಾರದಿಂದ ನಿರಂತರ ನಡೆಸುತ್ತಿರುವ ರ್ಯಾಲಿ ನಿಲ್ಲಿಸಲು ಪಶ್ಚಿಮಬಂಗಾಳ ಸರಕಾರ ಮೊದಲ ಬಾರಿಗೆ ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.

 ನಿಷೇಧಾಜ್ಞೆ ಉಲ್ಲಂಘಿಸಿದ ಬಿಜೆಪಿ ನಾಯಕರ ವಿರುದ್ಧ ಪ್ರಕರಣಗಳನ್ನು ಕೂಡ ದಾಖಲಿಸುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಅಭಿನಂದನಾ ರ್ಯಾಲಿ ನಡೆಸಲು ಜನವರಿ 12ರಂದು ಸಿತಾಲ್ಕುಚಿ ಜಿಲ್ಲೆಗೆ ತೆರಳುತ್ತಿದ್ದ ಬಿಜೆಪಿಯ ಪಶ್ಚಿಮಬಂಗಾಳ ಘಟಕದ ಪ್ರಧಾನ ಕಾರ್ಯದರ್ಶಿ ಸಾಯಂತನ ಬಸು ಹಾಗೂ ಪಕ್ಷದ ಕೂಚ್‌ಬೆಹಾರ್ ಜಿಲ್ಲೆಯ ಅಧ್ಯಕ್ಷೆ ಮಾಲತಿ ರೇವಾ ರಾಯ್ ಅವರನ್ನು ತಡೆಯಲಾಗಿದೆ.

‘‘ಅಶಾಂತಿ ಉಂಟಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ ಎಂದು ಆಡಳಿತ ನಮಗೆ ಮಾಹಿತಿ ನೀಡಿದೆ. ಆದರೆ, ನಾವು ಮುಂದುವರಿಯಲಿದ್ದೇವೆ. ನಮ್ಮನ್ನು ತಡೆದ ಸ್ಥಳದಲ್ಲೇ ಸಭೆ ನಡೆಸಲಿದ್ದೇವೆ. ಸರಕಾರದ ಈ ತಂತ್ರದ ವಿರುದ್ಧ ನಾವು ಕೋಲ್ಕತ್ತಾ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಿದ್ದೇವೆ. ತೃಣಮೂಲ ಕಾಂಗ್ರೆಸ್ ನಮಗೆ ಅಡ್ಡಿಪಡಿಸಲು ಸಾಧ್ಯವಿಲ್ಲ’’ ಎಂದು ಬಸು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News