ಲಾಲ್‌ಬಾಗ್‌ನಲ್ಲಿ ಜ.17ರಿಂದ 26ರವರೆಗೆ ಫಲಪುಷ್ಪ ಪ್ರದರ್ಶನ

Update: 2020-01-14 16:37 GMT

ಬೆಂಗಳೂರು, ಜ.14: ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್ ಸಿದ್ಧವಾಗಿದ್ದು, ಜ.17 ರಿಂದ 26 ರವರೆಗೆ ಇಲ್ಲಿನ ಗಾಜಿನ ಮನೆಯಲ್ಲಿ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಬಿ.ವೆಂಕಟೇಶ್ ತಿಳಿಸಿದ್ದಾರೆ.

ನಗರದ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ 157 ನೇ ಜನ್ಮದಿನೋತ್ಸವ ಹಾಗೂ ಅವರ ಐತಿಹಾಸಿಕ ಚಿಕಾಗೋ ಸರ್ವಧರ್ಮ ಸಮ್ಮೇಳನದ ದಿಗ್ವಿಜಯಕ್ಕೆ 127 ವರ್ಷಗಳು ಸಂದುತ್ತಿರುವ ಹಿನ್ನೆಲೆಯಲ್ಲಿ, ಅವರ ಸ್ಮರಣಾರ್ಥ ಈ ಬಾರಿಯ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ಹೇಳಿದರು. ವಿವೇಕಾನಂದರ ತತ್ವ, ಸಿದ್ಧಾಂತಗಳನ್ನು ಬಣ್ಣ ಬಣ್ಣದ ಪುಷ್ಪಗಳಿಂದ ಯುವ ಸಮೂಹ ಹಾಗೂ ಸಮಾಜಕ್ಕೆ ತಿಳಿಸಲು ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘಗಳು ಮುಂದಾಗಿವೆ. ವಿವೇಕಾನಂದರ ಸಂದೇಶಗಳು, ಯುವ ಸಮೂಹಕ್ಕೆ ನೀಡಿದ ಕೊಡುಗೆಗಳನ್ನು ಫಲಪುಷ್ಪದ ಮೂಲಕ ಸಾಮಾನ್ಯ ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ. ಹಾಗಾಗಿ, ವಿವೇಕಾನಂದರ ಇಡೀ ಜೀವನವನ್ನು ಅನಾವರಣಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸ್ವಾಮಿ ವಿವೇಕಾನಂದರ ಹೂವಿನ ಆಕರ್ಷಕ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಸ್ವಾಮಿ ವಿವೇಕಾನಂದರು ಮತ್ತು ಅವರ ಚಿಂತನೆಗಳನ್ನು ಲಾಲ್‌ಬಾಗ್‌ನಲ್ಲಿ ಪ್ರತಿನಿಧಿಸಲು ನಿರ್ಧರಿಸಲಾಗಿದೆ. ಸ್ವಾಮಿ ವಿವೇಕಾನಂದರ ಪ್ರತಿಮೆಯು ಗಾಜಿನ ಮನೆಯಲ್ಲಿ ಮುಖ್ಯ ಆಕರ್ಷಣೆಯಾಗಿ ಬಿಂಬಿತಗೊಳ್ಳಲಿದೆ ಎಂದರು.

ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ತೋಟಗಾರಿಕೆ ಇಲಾಖೆ ಸಚಿವ ವಿ.ಸೋಮಣ್ಣ, ಶಾಸಕ ಉದಯ್ ಬಿ. ಗರುಡಾಚಾರ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಗಾಜಿನ ಮನೆಯ ಹೃದಯ ಭಾಗದಲ್ಲಿ ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದರ 80x40 ಅಡಿ ಅಳತೆಯ ಪುಷ್ಪ ಮಾದರಿ ಸ್ಥಾಪನೆಯಾಗಲಿದೆ. ಅಲ್ಲದೆ, 16 ಅಡಿ ಎತ್ತರದ ಆಕರ್ಷಕ ಪ್ರತಿಮೆಯೂ ಅನಾವರಣವಾಗಲಿದೆ. ದೇವಸ್ಥಾನ ಮಾದರಿ 21 ಅಡಿ ಉದ್ದ, 17 ಅಡಿ ಎತ್ತರ, 8 ಅಡಿ ಅಗಲವಿರಲಿದೆ. ದೇವಾಲಯ ಮಾದರಿಗೆ 75 ಸಾವಿರ ಕೆಂಪು, ಬಿಳಿ, ಹಳದಿ ಗುಲಾಬಿ, 75 ಸಾವಿರ ಸೇವಂತಿ, 3 ಸಾವಿರ ವಿವಿಧ ಎಲೆಗಳು ಬಳಸಲಾಗುತ್ತಿದೆ.

ಬೇಲೂರು ಮಠ ಸ್ವಾಮಿ ವಿವೇಕಾನಂದ ದೇವಾಲಯ ಒಳಾವರಣದ ಪುಷ್ಪ ಮಾದರಿ, ಉದ್ಘಾಟನಾ ಪ್ರಯುಕ್ತ ವಿವೇಕಾನಂದರ ಪ್ರತಿಮೆ, ಚಿಕಾಗೋ ವಿವೇಕಾನಂದ ಸ್ಮಾರಕದ ಪುಷ್ಪ ಮಾದರಿ, ಆಕರ್ಷಕ ವರ್ಟಿಕಲ್ ಗಾರ್ಡನ್ ಮತ್ತು ಸ್ವಾಮಿ ವಿವೇಕಾನಂದರ ಬೆಂಗಳೂರು ಸ್ಮತಿ, ಹೂವಿನ ಪಿರಮಿಡ್ಡುಗಳು, ವಿವೇಕಾನಂದರ ಉಬ್ಬು ಶಿಲ್ಪಗಳು, ಆಕರ್ಷಕ ಹೂ ಜೋಡಣೆಯ ನಡುವೆ ವಿವೇಕಾನಂದರ ವಿವಿಧ ಭಂಗಿಯ ಪ್ರತಿಮೆಗಳು ಅನಾವರಣವಾಗಲಿವೆ.

ವಿದೇಶಿ ಹೂಗಳ ವಿಶೇಷ ಪ್ರದರ್ಶನ, ಪುಷ್ಪಗಳಿಂದರ ಅರಳಿದ ವಿವೇಕಾನಂದ ಹಾಗೂ ಪಾಯಿಸಿಟಿಯಾ ಹೂಗಳ ಆಕರ್ಷಕ ಲಂಬ ಜೋಡಣೆ, ಗಾಜಿನ ಮನೆಯಲ್ಲಿ ವೈವಿದ್ಯಮಯ ಪ್ರದರ್ಶನ, ವಾರ್ಷಿಕ ಹೂಗಳ ರಂಗು, ಬ್ಯಾಂಡ್‌ಗಳ ಹಿಮ್ಮೇಳ, ವಿವೇಕಾನಂದರ ಮಾಹಿತಿ ಪ್ರದರ್ಶನ, ಗಾಜಿನ ಮನೆ ಮುಂಭಾಗ ವಿವೇಕ ಗಾಯನ, ಉದ್ಘಾಟನಾ ದಿನದಂದು 1008 ಮಕ್ಕಳಿಂದ ವಿವೇಕಾನಂದರ ವೇಷ ಹಾಗೂ ಸಂದೇಶ ರವಾನೆ ನಡೆಯಲಿದೆ.

ಗಾಜಿನ ಮನೆಯ ಹೊರಾಂಗಣದ ವಿಶೇಷ: ವಿವೇಕ ವೃಕ್ಷ, ಗುರುವಿನೊಡನೆ ದೇವರೆಡೆಗೆ-ಪಂಚವಟಿ, ವಿವೇಕಾನಂದರ ಚಿತ್ರ ಪ್ರದರ್ಶನ, ಮೆಗಾ ಫ್ಲೋರಲ್ ಫ್ಲೋ, ನರ್ತಿಸುವ ರಾಷ್ಟ್ರಪಕ್ಷಿ, ಹೃದಯಾಕಾರದ ಹೂವಿನ ಕಮಾನು, ಬೃಹತ್ ಎಲೆ ಜಾತಿ ಮತ್ತು ಹೂ ಕುಂಡಗಳ ಪ್ರದರ್ಶನವಿರಲಿದೆ.

ಆಯ್ದ ಪ್ರದೇಶಗಳಲ್ಲಿ ವಿಶೇಷತೆಗಳು: ಸ್ವಾಮಿ ವಿವೇಕಾನಂದರ ಚಿತ್ರ ಪ್ರದರ್ಶನ, ವಿವೇಕಾನಂದರ ಸಾಕ್ಷಚಿತ್ರ ಪ್ರದರ್ಶನ, ವಿವೇಕಾನಂದರ ಕುರಿತ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಫಲಭರಿತ ತರಕಾರಿಗಳ ಆಕರ್ಷಣೆ, ಸಸ್ಯ ಸಂತೆ, ವಿಶೇಷ ರಚನೆಯಾಕಾರದಲ್ಲಿ ಹೂಗಳ ಪ್ರದರ್ಶನ, ವಿವೇಕಾನಂದರ ನೀತಿಗಳ ಕುರಿತ ದೃಶ್ಯ ಪ್ರಾತ್ಯಕ್ಷಿತೆ, ಘೋಷಣೆಗಳು-ಸೂಕ್ತಿಗಳು, ಜಲಪಾತ ಸೇರಿದಂತೆ ಹಲವು ಆಕರ್ಷಣೆಗಳನ್ನು ಕಣ್ಣು ತುಂಬಿಕೊಳ್ಳಬಹುದು.

ಈ ಬಾರಿ ಲಪುಷ್ಪ ಪ್ರದರ್ಶನಕ್ಕೆ 1.9 ಕೋಟಿ ಖರ್ಚು ಮಾಡಲಾಗುತ್ತಿದೆ. ವಿವೇಕಾನಂದರ ಕುರಿತಾದ ಪ್ರದರ್ಶನವಾದ ಹಿನ್ನೆಲೆಯಲ್ಲಿ ಈ ಬಾರಿ 6 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಸಸ್ಯತೋಟದಲ್ಲಿ ಮುಂಜಾಗ್ರತಾ ಕ್ರಮವಾಗಿ ಆಂಬುಲೆನ್ಸ್, ಫೈಯರ್ ಬ್ರಿಗೇಡ್ ವ್ಯವಸ್ಥೆ ಮಾಡಲಾಗಿದೆ. ಜೇನುನೊಣಗಳ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. ಲಾಲ್‌ಬಾಗ್‌ನಲ್ಲಿನ ಮರಗಳ ಒಣಗಿದ ರೆಂಬೆಗಳು ಮತ್ತು ಅಪಾಯವನ್ನುಂಟು ಮಾಡುವ ರೆಂಬೆಗಳು ತೆರವು ಮಾಡಲಾಗಿದೆ.

ಪ್ರವೇಶ ಶುಲ್ಕ

ರಜೆ ಹಾಗೂ ಸಾಮಾನ್ಯ ದಿನಗಳು ಸೇರಿದಂತೆ ಎಲ್ಲಾ ದಿನಗಳಲ್ಲೂ ವಯಸ್ಕರಿಗೆ 70 ರೂ. ಹಾಗೂ ಮಕ್ಕಳಿಗೆ 20 ರೂ. ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಟಿಕೆಟ್ ಲಭ್ಯವಿರುತ್ತದೆ.

ಪ್ರದರ್ಶನದ ಸಮಯ

ಬೆಳಗ್ಗೆ 9 ರಿಂದ ಸಂಜೆ 6.30ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಪಾರ್ಕಿಂಗ್ ವ್ಯವಸ್ಥೆ

ಲಾಲ್‌ಬಾಗ್‌ನೊಳಗೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಡಬ್ಬಲ್ ರೋಡ್ ಗೇಟ್‌ನಲ್ಲಿ ಕೇವಲ ಶಾಲಾ ಮಕ್ಕಳ ವಾಹನ, ವಿಕಲಚೇತನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಉಳಿದಂತೆ ಶಾಂತಿನಗರ ಬಸ್ ನಿಲ್ದಾಣ, ಜೆ.ಸಿ. ರಸ್ತೆಯ ಮಯೂರ ರೆಸ್ಟೋರೆಂಟ್ ಬಳಿಯಿರುವ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣದಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಜತೆಗೆ ಆಲ್‌ಅಮೀನ್ ಕಾಲೇಜಿನ ಮೈದಾನದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಉಚಿತ ಪ್ರವೇಶ

ಶಾಲಾ ಮಕ್ಕಳಿಗಾಗಿ ಜ.18, 20, 21, 22, 23 ಮತ್ತು 24 ರಂದು ಉಚಿತ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಈ ದಿನಗಳಲ್ಲಿ ಬೆ.9 ರಿಂದ ಸಂತೆ 5 ಗಂಟೆವರೆಗೆ ಖಾಸಗಿ ಹಾಗೂ ಸರಕಾರಿ ಶಾಲಾ ಮಕ್ಕಳು ಭೇಟಿ ನೀಡಬಹುದಾಗಿದೆ.

ಹೈಲೆಟ್ಸ್....

* 105 ಸಿಸಿ ಕ್ಯಾಮರಾಗಳ ಅಳವಡಿಕೆ

* ಸಿಂಗಲ್ ಯೂಸ್ ನೀರಿನ ಬಾಟೆಲ್‌ಗಳು, ಊಟ ನಿಷೇಧ

* ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಡೋರ್ ಪ್ರೇಂ ಮೆಟಲ್ ಡಿಟೆಕ್ಟರ್, ಹ್ಯಾಂಡ್‌ಹೆಲ್ಡ್ ಮೆಟಲ್ ಡಿಟೆಕ್ಟರ್‌ಗಳ ಅಳವಡಿಕೆ

* ಕುಡಿಯುವ ನೀರಿನ ಘಟಕ, ಮೊಬೈಲ್ ಶೌಚಾಲಯ ವ್ಯವಸ್ಥೆ

* ಪ್ರತಿ 20 ನಿಮಿಷಕ್ಕೊಮ್ಮೆ ನೀರಿನ ಜಲಪಾತದ ವೀಕ್ಷಣೆ ವ್ಯವಸ್ಥೆ

* 400ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಮತ್ತು 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News