ಬಿಎಸ್‌ಎಫ್ ನೇಮಕಾತಿ ಹಗರಣ: 163 ಯೋಧರ ವಿರುದ್ಧ ಆರೋಪಪಟ್ಟಿ ದಾಖಲು

Update: 2020-01-14 16:40 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜ.14: ಕರ್ನಾಟಕದಲ್ಲಿ ಗಡಿಭದ್ರತಾ ಪಡೆಗೆ ಯೋಧರ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವುದನ್ನು ಪತ್ತೆಹಚ್ಚಿರುವ ಸಿಬಿಐ 163 ಯೋಧರ ವಿರುದ್ಧ ಆರೋಪಪಟ್ಟಿ ದಾಖಲಿಸಿದೆ.

163 ಅನರ್ಹ ಅಭ್ಯರ್ಥಿಗಳು ಗಡಿಭದ್ರತಾ ಪಡೆಗೆ ಕರ್ನಾಟಕ ರಾಜ್ಯದಿಂದ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ನಕಲಿ ದಾಖಲೆಪತ್ರ ಸಲ್ಲಿಸಿ ಉದ್ಯೋಗ ಪಡೆದಿದ್ದಾರೆ ಎಂದು ಹೊಸದಿಲ್ಲಿಯ ಸಿಬಿಐ ವಿಶೇಷ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 163 ಬಿಎಸ್‌ಎಫ್ ಯೋಧರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ ಮತ್ತು ಇವರ ವಿರುದ್ಧ ಕಾನೂನುಕ್ರಮ ಜರಗಿಸಿ ಜೈಲುಶಿಕ್ಷೆ ವಿಧಿಸುವ ನಿರೀಕ್ಷೆಯಿದೆ.

2016ರಲ್ಲಿ ಈ ಅವ್ಯವಹಾರ ನಡೆದಿದೆ. ಸುದೀರ್ಘ ತನಿಖೆಯ ಬಳಿಕ ಬಿಎಸ್‌ಎಫ್ ತರಬೇತಿ ವಿಭಾಗದ ಕಾನ್‌ಸ್ಟೇಬಲ್ ಚಂದ್ರಶೇಖರ್, ಬೆಂಗಳೂರು ವಿದ್ಯಾರಣ್ಯಪುರದ ಗುಡ್‌ವಿಲ್ ಕೋಚಿಂಗ್ ಸೆಂಟರ್‌ನ ಮಾಲಕ ಸತ್ಯಪ್ರಕಾಶ್ ಸಿಂಗ್, ಬೆಂಗಳೂರು(ಉತ್ತರ) ತಾಲೂಕು ಕಚೇರಿಯ ಉದ್ಯೋಗಿ ವಿಕೆ ಕಿರಣ್ ಕುಮಾರ್, ಬೆಂಗಳೂರು ನಿವಾಸಿ ಸುರೇಂದ್ರ ಕಟೋಚ್ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂಬುದು ದೃಢಪಟ್ಟಿದೆ. ಆರೋಪಪಟ್ಟಿಯಲ್ಲಿ 163 ಯೋಧರ ಜೊತೆಗೆ ಈ ನಾಲ್ವರ ಹೆಸರನ್ನೂ ಸೇರಿಸಲಾಗಿದೆ.

ಹಣ ನೀಡಿದರೆ ನಕಲಿ ದಾಖಲೆಪತ್ರ ಒದಗಿಸುವುದಾಗಿ ಏಜೆಂಟರು ಹೇಳಿದ್ದರು . ಸತ್ಯಪ್ರಕಾಶ್ ಸಿಂಗ್ ಪ್ರತಿಯೊಬ್ಬರಿಂದಲೂ 3ರಿಂದ 4 ಲಕ್ಷ ರೂ. ಪಡೆದಿದ್ದಾನೆ ಎಂದು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಸಿಂಗ್ ಮತ್ತು ಸುರೇಂದ್ರ ಈ ಹಿಂದೆಯೂ ನಕಲಿ ಸೀಲು ಮತ್ತು ದಾಖಲೆ ಪತ್ರ ತಯಾರಿಸಿ ಹಲವರಿಗೆ ಮಾರಾಟ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News