ಐಸಿಸಿ ವರ್ಷದ ಏಕದಿನ, ಟೆಸ್ಟ್ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ

Update: 2020-01-16 05:31 GMT

ದುಬೈ, ಜ.15: ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಹ್ಲಿ ಬುಧವಾರ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ವರ್ಷದ ಏಕದಿನ ಹಾಗೂ ಟೆಸ್ಟ್ ತಂಡಗಳ ನಾಯಕನಾಗಿ ಆಯ್ಕೆಯಾಗಿದ್ದಾರೆ. ಕೊಹ್ಲಿ ಈ ಎರಡು ಮಾದರಿಯ ಕ್ರಿಕೆಟ್‌ನಲ್ಲಿ 2019ರ ಅಂತ್ಯದಲ್ಲಿ ನಂ.1 ಸ್ಥಾನದಲ್ಲಿದ್ದರು.

ಕೊಹ್ಲಿಯವರಲ್ಲದೆ ಇತರ ನಾಲ್ವರು ಭಾರತೀಯರು ಐಸಿಸಿ ವರ್ಷದ ಟೆಸ್ಟ್ ಹಾಗೂ ಏಕದಿನ ತಂಡಗಳಲ್ಲಿ ಆಯ್ಕೆಯಾಗಿದ್ದಾರೆ.

ಟೆಸ್ಟ್ ತಂಡದಲ್ಲಿ ದ್ವಿಶತಕ ವೀರ ಮಾಯಾಂಕ್ ಅಗರ್ವಾಲ್, ಏಕದಿನ ತಂಡದಲ್ಲಿ ಓಪನರ್ ರೋಹಿತ್ ಶರ್ಮಾ, ವೇಗದ ಬೌಲರ್ ಮುಹಮ್ಮದ್ ಶಮಿ ಹಾಗೂ ಎಡಗೈ ಸ್ಪಿನ್ನರ್ ಕುಲದೀಪ ಯಾದವ್ ಸ್ಥಾನ ಪಡೆದಿದ್ದಾರೆ.

  

ಕೊಹ್ಲಿ 2019ರಲ್ಲಿ ಎರಡು ಮಾದರಿಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. 31ರ ಹರೆಯದ ಕೊಹ್ಲಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಜೀವನಶ್ರೇಷ್ಠ 254 ರನ್ ಗಳಿಸುವ ಹಾದಿಯಲ್ಲಿ ಏಳನೇ ದ್ವಿಶತಕ ಸಿಡಿಸಿದ್ದರು. ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್ ಅಗರ್ವಾಲ್ ಪಾಲಿಗೂ 2019 ಯಶಸ್ವಿ ವರ್ಷವಾಗಿ ಪರಿಣಮಿಸಿತ್ತು. ಅಗರ್ವಾಲ್ 2 ದ್ವಿಶತಕ, ಒಂದು ಶತಕ ಹಾಗೂ ಎರಡು ಬಾರಿ ಅರ್ಧಶತಕ ಸಿಡಿಸಿದ್ದರು. ನವೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಜೀವನಶ್ರೇಷ್ಠ 243 ರನ್ ಗಳಿಸಿದ್ದರು. ಉಪ ನಾಯಕ ರೋಹಿತ್ ಶರ್ಮಾ ಏಕದಿನ ವಿಶ್ವಕಪ್‌ನಲ್ಲಿ ಅತ್ಯಮೋಘ ಪ್ರದರ್ಶನ ನೀಡಿದ್ದು, ಐದು ಶತಕ ಹಾಗೂ ಒಂದು ಅರ್ಧಶತಕ ಗಳಿಸಿದ್ದರು. ಕುಲದೀಪ್ ಪಾಲಿಗೂ ಕಳೆದ ವರ್ಷ ಸ್ಮರಣೀಯವಾಗಿದ್ದು, ಅವರು ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಡಿಸೆಂಬರ್‌ನಲ್ಲಿ ಎರಡನೇ ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ್ದರು. ಕಳೆದ 12 ತಿಂಗಳುಗಳಲ್ಲಿ ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯ ಲಾಭ ಪಡೆದಿದ್ದ ಮುಹಮ್ಮದ್ ಶಮಿ 21 ಏಕದಿನ ಪಂದ್ಯಗಳಲ್ಲಿ ಆಡಿ ಒಟ್ಟು 42 ವಿಕೆಟ್‌ಗಳನ್ನು ಕಬಳಿಸಿದ್ದರು. 2019ರ ಸಾಲಿನ ಐಸಿಸಿ ತಂಡಗಳು

ವರ್ಷದ ಏಕದಿನ ತಂ(ಬ್ಯಾಟಿಂಗ್ ಕ್ರಮಾಂಕ): ರೋಹಿತ್ ಶರ್ಮಾ, ಶೈ ಹೋಪ್, ವಿರಾಟ್ ಕೊಹ್ಲಿ(ನಾಯಕ), ಬಾಬರ್ ಆಝಂ, ಕೇನ್ ವಿಲಿಯಮ್ಸನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್(ವಿಕೆಟ್‌ಕೀಪರ್), ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಮುಹಮ್ಮದ್ ಶಮಿ, ಕುಲದೀಪ ಯಾದವ್.

► ವರ್ಷದ ಟೆಸ್ಟ್ ತಂಡ(ಬ್ಯಾಟಿಂಗ್ ಕ್ರಮಾಂಕ): ಮಾಯಾಂಕ್ ಅಗರ್ವಾಲ್, ಟಾಮ್ ಲಥಾಮ್, ಮಾರ್ನಸ್ ಲ್ಯಾಬುಶೆನ್, ವಿರಾಟ್ ಕೊಹ್ಲಿ(ನಾಯಕ), ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ಬಿಜೆ ವಾಟ್ಲಿಂಗ್(ವಿಕೆಟ್‌ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನೀಲ್ ವಾಗ್ನರ್, ನಥಾನ್ ಲಿಯೊನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News