ಜ.19ರಂದು ಭಾರತಕ್ಕೆ ಶ್ರೀಲಂಕಾ ಮೊದಲ ಎದುರಾಳಿ

Update: 2020-01-16 05:38 GMT

  ಹೊಸದಿಲ್ಲಿ, ಜ.15: ಪ್ರಿಯಂ ಗರ್ಗ್ ನಾಯಕತ್ವದ ಭಾರತದ ಅಂಡರ್-19 ಕ್ರಿಕೆಟ್ ತಂಡ ರವಿವಾರ(ಜ.19)ದಕ್ಷಿಣ ಆಫ್ರಿಕಾದ ಬ್ಲೋಮ್‌ಫೊಂಟೇನ್‌ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸುವ ಮೂಲಕ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಹಾಲಿ ಚಾಂಪಿಯನ್ ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ನ್ಯೂಝಿಲ್ಯಾಂಡ್, ಶ್ರೀಲಂಕಾ ಹಾಗೂ ಮೊದಲ ಬಾರಿ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿರುವ ಜಪಾನ್ ತಂಡವನ್ನು ಲೀಗ್ ಹಂತದಲ್ಲಿ ಎದುರಿಸಲಿದೆ. ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ. ಈ ವರೆಗೆ ನಾಲ್ಕು ಬಾರಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. 2018ರ ಆವೃತ್ತಿಯ ವಿಶ್ವಕಪ್‌ನಲ್ಲಿ ಪೃಥ್ವಿ ಶಾ ನೇತೃತ್ವದ ಭಾರತ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿತ್ತು. ಟೂರ್ನಿಯಲ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿತ್ತು. ಜ.19ರಂದು ಮೊದಲ ಗ್ರೂಪ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿರುವ ಭಾರತ ಜನವರಿ 21ರಂದು ಜಪಾನ್ ತಂಡವನ್ನು ಎದುರಿಸಲಿದೆ. ಜ.24ರಂದು ಕೊನೆಯ ಗ್ರೂಪ್ ಪಂದ್ಯದಲ್ಲಿ ಭಾರತ ನ್ಯೂಝಿಲ್ಯಾಂಡ್ ತಂಡವನ್ನು ಮುಖಾಮುಖಿಯಾಗಲಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್ ಲೀಗ್ ಹಂತಕ್ಕೆ ತೇರ್ಗಡೆಯಾಗಲಿವೆ. ಟೂರ್ನಮೆಂಟ್‌ನ ಫೈನಲ್ ಪಂದ್ಯ ಫೆ.9ರಂದು ಪಾಶೆಸ್ಟ್ರೂಮ್‌ನಲ್ಲಿ ನಡೆಯಲಿದೆ.

ಭಾರತದ ವೇಳಾಪಟ್ಟಿ

► ಜ.19: ಮಧಾಹ್ನ 1:30ಕ್ಕೆ, ಶ್ರೀಲಂಕಾ ವಿರುದ್ಧ, ಸ್ಥಳ: ಬ್ಲೋಮ್‌ಫೋಂಟೇನ್

► ಜ.21: ಮಧ್ಯಾಹ್ನ 1:30ಕ್ಕೆ, ಜಪಾನ್ ವಿರುದ್ಧ, ಸ್ಥಳ: ಬ್ಲೋಮ್‌ಫೋಂಟೇನ್

► ಜ.24: ಮಧ್ಯಾಹ್ನ 1:30ಕ್ಕೆ, ನ್ಯೂಝಿಲ್ಯಾಂಡ್ ವಿರುದ್ಧ, ಸ್ಥಳ: ಬ್ಲೋಮ್‌ಫೋಂಟೇನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News