ಖಾದಿ ಗ್ರಾಮೋದ್ಯೋಗದಿಂದ ಕಾರ್ಮಿಕರ ವಲಸೆ ತಡೆ: ಯಡಿಯೂರಪ್ಪ

Update: 2020-01-16 12:23 GMT

ಬೆಂಗಳೂರು, ಜ.16: ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡುವ ಮೂಲಕ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಡೆಯುವಲ್ಲಿ ಖಾದಿ ಗ್ರಾಮೋದ್ಯೋಗವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಯೂರಪ್ಪ ಅಭಿಪ್ರಾಯಿಸಿದರು.

ಫ್ರೀಡಂಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಆಯೋಜಿಸಿರುವ ಖಾದಿ ಉತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವ ಹಳ್ಳಿಯಲ್ಲಿ ಚರಕದ ಸದ್ದು ಕೇಳುತ್ತದೆಯೋ, ಅಲ್ಲಿ ಬಡತನ, ನಿರುದ್ಯೋಗದ ಸಮಸ್ಯೆ ಇರುವುದಿಲ್ಲ ಎಂದು ಗಾಂಧೀಜಿ ಹೇಳಿದ್ದರು. ಖಾದಿ ಬಟ್ಟೆಯ ಹಿಂದೆ ನೂರಾರು ಜನರ ಶ್ರಮವಿದೆ ಎಂದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಬಂದು 70ವರ್ಷವಾದರೂ ಬಡವರು ಬಡವರಾಗಿಯೇ ಇದ್ದಾರೆ. ಆಡಳಿತ ವರ್ಗವೂ ಶ್ರೀಮಂತರಿಗೆ ಮಣೆ ಹಾಕುತ್ತಾ ಉಚಿತ ತೆರಿಗೆ, ನೀರು, ಭೂಮಿ ಎಲ್ಲವನ್ನೂ ನೀಡುತ್ತಿದೆ. ಆದರೆ, ಬಡವರನ್ನು ಹಸಿವಿನಲ್ಲಿ ಇಡುತ್ತಿದೆ. ಇವತ್ತಿನ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದ್ದು, ಬಡವರಿಗೆ ಬದುಕುವ ಹಕ್ಕು ನೀಡಿ, ಬೆಲೆ ಏರಿಕೆ ನಿಯಂತ್ರಣಕ್ಕೆ ಸರಕಾರ ಮುಂದಾಗಬೇಕು ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರ ಖಾದಿಯನ್ನು ರಾಷ್ಟ್ರಪ್ರೇಮದ ಪ್ರತೀಕವಾಗಿ ನೋಡಬೇಕು. ಬೃಹತ್ ಮತ್ತು ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸುವ ರೀತಿ ಖಾದಿ ಉದ್ಯಮವನ್ನು ಪ್ರೋತ್ಸಾಹಿಸುವುದಕ್ಕೆ ಪ್ರತ್ಯೇಕ ನಿಗಮ ಮತ್ತು ನಿರ್ದೇಶಕರನ್ನು ನೇಮಿಸಬೇಕು. ಮೊದಲಿನಂತೆ ಸರಕಾರವೇ ಖಾದಿಯನ್ನು ಖರೀದಿಸಬೇಕು ಎಂದು ಅವರು ಒತ್ತಾಯಿಸಿದರು.

ಖಾದಿ ಕಾರ್ಮಿಕರಿಗೆ ಮಹಾತ್ಮಗಾಂಧಿ ರೋಝ್‌ಗಾರ್ ಯೋಜನೆಯಡಿ 170 ದಿನಗಳಿಗೆ ನೀಡಲಾಗುತ್ತಿರುವ ಗೌರವಧನವನ್ನು 365 ದಿನಗಳಿಗೆ ವಿಸ್ತರಿಸಬೇಕು. ಖಾದಿ ಉದ್ಯಮ ಸಂಕಷ್ಟದಲ್ಲಿದೆ. ಖಾದಿ ಕಾರ್ಮಿಕರು ಅರೆಹೊಟ್ಟೆಯಲ್ಲಿ ಬದುಕುತ್ತಿದ್ದಾರೆ. ಖಾದಿ ನಂಬಿದವರನ್ನು ಸರಕಾರ ಕೈಬಿಡಬಾರದು.
-ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News