ಉಕ್ಕೇರುತ್ತಿರುವ ವಿದ್ಯಾರ್ಥಿ ಪ್ರತಿರೋಧಗಳು

Update: 2020-01-16 18:14 GMT

ಯಾವುದೇ ಶಿಕ್ಷಾಭೀತಿಯಿಲ್ಲದ ರೀತಿಯಲ್ಲಿ ನಡೆದಿರುವ ದಾಳಿಗಳನ್ನು ನೋಡಿದರೆ ‘ಆಡಳಿತವರ್ಗ’ದ ಸಹಯೋಗ ಮತ್ತು ಮಾರ್ಗದರ್ಶನಗಳು ನಿಚ್ಚಳವಾಗಿ ಎದ್ದುಕಾಣುತ್ತದೆ. ಜೆಎನ್‌ಯುನ ಆಡಳಿತವರ್ಗದ ಹಠಮಾರಿ ಮತ್ತು ಬಲಪ್ರಯೋಗದ ಧೋರಣೆಗಳು ಹಾಲಿ ಸರಕಾರದ ಯಾವುದೇ ಸಂವಾದ ಅಥವಾ ಸಮಾಲೋಚನೆಗಳಿಗೆ ಬದಲಾಗಿ ದಮನಕಾರಿ ನೀತಿಯನ್ನೇ ಅನುಸರಿಸುವ ಜಾಡಿನ ಪಡಿಯಚ್ಚಿನಂತಿದೆ.


2020ರ ಜನವರಿ 5ರಂದು ಜೆಎನ್‌ಯು ಆವರಣದಲ್ಲಿ ಒಂದು ಶಾಂತಿಸಭೆಯನ್ನು ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ಮುಸುಕುಧಾರಿ ದಾಳಿಕೋರರ ಗುಂಪೊಂದು ಭೀಕರವಾಗಿ ದಾಳಿ ಮಾಡಿತು. ಈ ದಾಳಿಯ ಉದ್ದೇಶ ವಿದ್ಯಾರ್ಥಿ ಮತ್ತು ಅಧ್ಯಾಪಕರ ಮೇಲೆ ದೈಹಿಕದಾಳಿ ನಡೆಸುವುದು ಮಾತ್ರವಲ್ಲದೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಶಾಶ್ವತವಾದ ಭೀತಿ ಮತ್ತು ಭಯವನ್ನು ಸೃಷ್ಟಿಸುವುದಾಗಿತ್ತು. ಜೆಎನ್‌ಯುನಿಂದ ಬರುತ್ತಿರುವ ಹಾಗೂ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಚಿತ್ರಗಳು ಹಲವಾರು ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಚಿಂದಿಛಿದ್ರವಾದ ಕೊಠಡಿಗಳು, ಚೆಲ್ಲಾಪಿಲ್ಲಿಯಾದ ಪುಸ್ತಕಗಳು ಹಾಗೂ ಅಗ್ಗದ ದಿನಬಳಕೆಯ ವಸ್ತುಗಳು, ಹಳೆ ಮಾದರಿಯ ಸ್ಟವ್ ಮತ್ತು ಹೀಟರ್‌ಗಳು, ಹರಿದು ಚಿಂದಿಯಾದ ಹಾಸಿಗೆ, ಹೊದಿಕೆಗಳು. ಯಾರ ಕೊಠಡಿಯ ಬಾಗಿಲ ಮೇಲೆ ಅಂಬೇಡ್ಕರ್ ಚಿತ್ರಗಳಿತ್ತೋ ಅಥವಾ ಯಾವ ಕೊಠಡಿಯಲ್ಲಿ ನಿರ್ದಿಷ್ಟ ಸಾಮಾಜಿಕ ಹಿನ್ನೆಲೆಯ ವಿದ್ಯಾರ್ಥಿಗಳು ವಾಸಿಸುತ್ತಿದ್ದರೋ ಅಂತಹ ಕೊಠಡಿಗಳೇ ವಿಶೇಷವಾದ ದಾಳಿಗೆ ಗುರಿಯಾದವೆಂದು ಮಾಧ್ಯಮಗಳ ವರದಿಗಳು ಹೇಳುತ್ತವೆ. 

ಜೆಎನ್‌ಯುನ ವಿದ್ಯಾರ್ಥಿಗಳು ಐಷಾರಾಮಿ ಜೀವನವನ್ನೇನು ನಡೆಸಲಾರರೆಂಬುದು ಸ್ಪಷ್ಟ. ಆದರೆ ಜೆಎನ್‌ಯು ಅತ್ಯಂತ ಶ್ರೀಮಂತ ಚಿಂತನೆಯ, ವಿಮರ್ಶಾತ್ಮಕ, ಸೃಜನಶೀಲ ಹಾಗೂ ಎಡಪಂಥೀಯತೆಯನ್ನೂ ಒಳಗೊಂಡಂತೆ ಹಲವಾರು ದೃಷ್ಟಿಕೋನಗಳನ್ನು ಪ್ರೋತ್ಸಾಹಿಸುವ ಮುಕ್ತ ಚಿಂತನಾ ಸಂಸ್ಕೃತಿಯನ್ನೂ ಒದಗಿಸುತ್ತದೆ. ಅದು ಘನತೆ ಮತ್ತು ಭರವಸೆಗಳನ್ನು ಒದಗಿಸುವ ಜೀವನವಾಗಿದೆ. ಅದು ಕೇವಲ ತರಬೇತಿಯ ಎಲ್ಲೆಗಳನ್ನು ದಾಟಿ ಶಿಕ್ಷಣವನ್ನು ಒದಗಿಸುವ ವಿಶ್ವವಿದ್ಯಾನಿಲಯವಾಗಿದೆ. ಅಲ್ಲಿ ವ್ಯಾಸಂಗ ಮಾಡುವ ಬಹುಪಾಲು ವಿದ್ಯಾರ್ಥಿಗಳು ದೇಶದ ಮೂಲೆಮೂಲೆಗಳಿಂದ ಮತ್ತು ದೂರದೂರದಿಂದ ಬಂದಿರುವ ಸೌಲಭ್ಯ ವಂಚಿತ ಸಾಮಾಜಿಕ ಹಿನ್ನೆಲೆಯವರಾಗಿದ್ದಾರೆ. ನಮ್ಮ ಸಮಾಜದಲ್ಲಿ ಮಾನವೀಯತೆ ಮತ್ತು ನೈತಿಕತೆಯನ್ನು ಕಾಪಾಡಿಕೊಳ್ಳಲು ಅತ್ಯಗತ್ಯವಾಗಿರುವ ತಿಳುವಳಿಕೆಯನ್ನು ಹುಟ್ಟಿಸಲು ಪೂರಕವಾದ ವಾಗ್ವಾದಗಳಲ್ಲಿ ಮತ್ತು ಕ್ರಿಯೆಗಳಲ್ಲಿ ಮುಕ್ತವಾಗಿ ಭಾಗವಹಿಸುವ ಸಂಪ್ರದಾಯವನ್ನು ಜೆಎನ್‌ಯು ಹೊಂದಿದೆ.

ಒಂದು ವಿಶ್ವವಿದ್ಯಾನಿಲಯವನ್ನು ನಡೆಸಲು ಅತ್ಯಗತ್ಯವಾಗಿರುವ ಮುಕ್ತ ಹಾಗೂ ಸುರಕ್ಷತೆಯುಳ್ಳ ವಾತಾವರಣವನ್ನು ಅಲ್ಲಿನ ವಾಸಿಗಳಿಗೆ ಒದಗಿಸಲು ಅದಕ್ಕೆ ಸಾಧ್ಯವಾಗಿದೆ. ಸಾಮಾನ್ಯರಿಗೂ ಎಟುಕಬಲ್ಲ ಹಾಗೂ ಗುಣಮಟ್ಟದ ಸಾರ್ವಜನಿಕ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳ ಅಧಿಕಾರವನ್ನು ಕಾಪಾಡಿಕೊಳ್ಳಲು ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಮತ್ತಷ್ಟು ವ್ಯಾಪಾರೀಕರಣವನ್ನು ತಡೆಗಟ್ಟಲೆಂದೇ ಜೆಎನ್‌ಯುವಿನ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಕಳೆದೆರಡು ತಿಂಗಳಿಂದ ಪ್ರಸ್ತಾವಿತ ಹಾಸ್ಟೆಲ್ ಶುಲ್ಕ ಏರಿಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸಮಸ್ಯೆಗೆ ಪರಿಹಾರ ಹುಡುಕುವ ಯಾವುದೇ ಪ್ರಯತ್ನಗಳನ್ನೂ ಜೆಎನ್‌ಯು ಆಡಳಿತ ವರ್ಗ ತಡೆಗಟ್ಟುತ್ತಿದೆ. ಈ ಹಿಂದೆಯೂ ಜೆಎನ್‌ಯುವಿನ ಸಾಮಾಜಿಕ-ಬೌದ್ಧಿಕ ಹಂದರವನ್ನು ಮೂಲೆಗುಂಪು ಮಾಡುವ ಪ್ರಯತ್ನಗಳ ಜೊತೆಜೊತೆಗೆ ಜೆಎನ್‌ಯುವಿನ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳೆಂದೂ, ಬಿಟ್ಟಿಜೀವಿಗಳೆಂದೂ ಹೀನಾಯಗೊಳಿಸುವ ಹಲವಾರು ಪ್ರಯತ್ನಗಳನ್ನು ಮಾಡಲಾಗಿತ್ತು. ವಿಶ್ವವಿದ್ಯಾನಿಲಯದ ಭದ್ರತಾ ವ್ಯವಸ್ಥೆಯ ಮೇಲೆ ಅದರ ಗ್ರಂಥಾಲಯದ ಮೇಲೆ ಮಾಡುವ ವೆಚ್ಚದ ನಾಲ್ಕು ಪಟ್ಟು ಅಂದರೆ 17 ಕೋಟಿ ರೂ.ಗಳಷ್ಟು ವೆಚ್ಚ ಮಾಡುತ್ತಿದ್ದರೂ ಇಂತಹ ದೊಡ್ಡ ಪ್ರಮಾಣದ ದೈಹಿಕ ದಾಳಿ ನಡೆಯಲು ಅವಕಾಶ ಮಾಡಿಕೊಡಲಾಯಿತು.

ಹಳೆಯ ಭದ್ರತಾ ವ್ಯವಸ್ಥೆಯ ಬದಲಿಗೆ ನಿವೃತ್ತ ಸೈನಿಕರನ್ನು ನೋಂದಾಯಿಸಿಕೊಳ್ಳುವ ಮತ್ತು ಹಾಲಿ ಅಧ್ಯಾಪಕರ ಸಂಘಕ್ಕೆ ಪರ್ಯಾಯವಾಗಿ ಆಡಳಿತರೂಢರ ಪರವಾದ ಕೈಗೊಂಬೆ ಅಧ್ಯಾಪಕರ ಸಂಘವನ್ನು ಹುಟ್ಟುಹಾಕುವಂತಹ ಕ್ರಮಗಳು ಹೇಗೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ದಮನಬಲದ ಪ್ರದರ್ಶನ ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತವೆ. ದಾಳಿಯ ಚಿತ್ರಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪರವಾದ ಒಲವುಳ್ಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಬ್ಬರೂ ಪಾಲ್ಗೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಯಾವುದೇ ಶಿಕ್ಷಾಭೀತಿಯಿಲ್ಲದ ರೀತಿಯಲ್ಲಿ ನಡೆದಿರುವ ದಾಳಿಗಳನ್ನು ನೋಡಿದರೆ ‘ಆಡಳಿತವರ್ಗ’ದ ಸಹಯೋಗ ಮತ್ತು ಮಾರ್ಗದರ್ಶನಗಳು ನಿಚ್ಚಳವಾಗಿ ಎದ್ದುಕಾಣುತ್ತದೆ. ಜೆಎನ್‌ಯುನ ಆಡಳಿತವರ್ಗದ ಹಠಮಾರಿ ಮತ್ತು ಬಲಪ್ರಯೋಗದ ಧೋರಣೆಗಳು ಹಾಲಿ ಸರಕಾರದ ಯಾವುದೇ ಸಂವಾದ ಅಥವಾ ಸಮಾಲೋಚನೆಗಳಿಗೆ ಬದಲಾಗಿ ದಮನಕಾರಿ ನೀತಿಯನ್ನೇ ಅನುಸರಿಸುವ ಜಾಡಿನ ಪಡಿಯಚ್ಚಿನಂತಿದೆ. ‘‘ಒಂದು ಇಂಚೂ ಹಿಂದೆ ಸರಿಯುವುದಿಲ್ಲ’’ ಎನ್ನುವ ಪದಪುಂಜಗಳ ಹಿಂದೆ ಅಧಿಕಾರರೂಢರು ಯಾವ ಹೊಣೆಗಾರಿಕೆಯೂ ಇಲ್ಲದ ಕ್ರೂರ ಬಲಪ್ರಯೋಗದ ಮತ್ತು ಸಂಸ್ಥೆಗಳ ಮೇಲೆ ದಾಳಿಗಳಿಗೆ ಪೂರಕವಾದ ಭಾಷೆಯನ್ನೇ ಮಾತನಾಡುತ್ತಿದ್ದಾರೆ.

ಜೆಎನ್‌ಯುನಲ್ಲಿ ನಡೆದ ಘಟನಾವಳಿಗಳ ಕ್ರಮಾವಳಿಯನ್ನು ಗಮನಿಸಿದರೆ ಹಿಂಸಾಚಾರಗಳು ಪೂರ್ವ ನಿಯೋಜಿತ ಎಂಬುದನ್ನು ಸೂಚಿಸುವುದು ಮಾತ್ರವಲ್ಲದೆ 2019ರ ಡಿಸೆಂಬರ್‌ನಲ್ಲಿ ದಿಲ್ಲಿಯಲ್ಲಿ ಮಾಡಿದ ಭಾಷಣದಲ್ಲಿ ಕೇಂದ್ರದ ಗೃಹಮಂತ್ರಿ ‘‘ತುಕ್ಡೆ ತುಕ್ಡೆ ಗ್ಯಾಂಗ್ ಅನ್ನು ಶಿಕ್ಷಿಸಬೇಕು’’ ಎಂದು ನೀಡಿದ ಕರೆಯಲ್ಲೂ ಅದರ ಮೂಲವಿರಬಹುದೆಂಬ ಸೂಚನೆಯನ್ನೂ ನೀಡುತ್ತದೆ. ದಾಳಿಕೋರರು ಸಮಾಜದ ವಿಭಜನೆಯನ್ನು ನಿಜಕ್ಕೂ ಮಾಡುತ್ತಿರುವವರು ಯಾರು ಎಂಬುದನ್ನು ಅರ್ಥಮಾಡಿಕೊಳ್ಳುವ ವ್ಯವಧಾನವನ್ನೇನೂ ತೋರಲಿಲ್ಲ. ದಿಲ್ಲಿ ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರೂ ಮುಸುಕುಧಾರಿ ದಾಳಿಕೋರರು ಕಿಂಚಿತ್ತೂ ಭಯವಿಲ್ಲದೆ ಆವರಣದಿಂದ ಅನಾಯಾಸವಾಗಿ ಹೊರಹೋಗಲು ಆವಕಾಶ ಮಾಡಿಕೊಟ್ಟರು.

ಇಲ್ಲಿ ಅತ್ಯಂತ ಹಾಸ್ಯಾಸ್ಪದವಾಗಿಯೂ, ಅಸಮರ್ಥರಾಗಿಯೂ ಕಂಡುಬಂದ ಪೊಲೀಸರು ಜನವರಿ 9ರಂದು ವಿದ್ಯಾರ್ಥಿಗಳು ಮಾನವ ಸಂಪನ್ಮೂಲ ಇಲಾಖೆಯ ಮುಂದೆ ಪ್ರತಿಭಟಿಸುತ್ತಿದ್ದಾಗ ಮಾತ್ರ ಕೂಡಲೇ ಕಾರ್ಯಾಚರಣೆಗೆ ಇಳಿದು ವಿದ್ಯಾರ್ಥಿಗಳನ್ನು ಭೀಕರವಾಗಿ ಥಳಿಸಿದರು. ಆದರೆ ಇಷ್ಟೆಲ್ಲಾ ನಡೆದ ನಂತರವೂ, ಈ ವರೆಗೆ ಅಷ್ಟಾಗಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸದ ಜನವರ್ಗ ಮತ್ತು ವಿಶ್ವವಿದ್ಯಾನಿಲಯಗಳು ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ನಡೆಸುತ್ತಲೇ ಇರುವ ಪ್ರತಿರೋಧಗಳಲ್ಲಿ ಭೀತಿಯ ಬದಲು ಆಕ್ರೋಶ ಹಾಗೂ ಸ್ಥೈರ್ಯಗಳು ಎದ್ದು ಕಾಣುತ್ತಿವೆ. ಈ ಸಾಮೂಹಿಕ ಸ್ಫೂರ್ತಿಯಲ್ಲೇ ನಿಜವಾದ ಭರವಸೆಯಡಗಿದೆ. ಪ್ರತಿಭಟನಾಕಾರರು ಸರಕಾರದ ನೀತಿಗಳು ಮತ್ತು ಕ್ರಮಗಳಿಗೆ ಪ್ರತಿಯಾಗಿ ಸಮರ್ಥವಾದ ಪ್ರತಿಮಂಡನೆಗಳನ್ನು ಮುಂದಿಡುವ ಮೂಲಕ ಹೆಚ್ಚೆಚ್ಚು ಜನರನ್ನು ಬೀದಿಗೆ ತರುತ್ತಾ ಹೊಸಬಗೆಯ ಸೌಹಾರ್ದಗಳನ್ನು ಸಾಧ್ಯವಾಗಿಸುತ್ತಿದ್ದಾರೆ. ಅದರಲ್ಲಿ ಅವರು ಅಳವಡಿಸುತ್ತಿರುವ ವಿಡಂಬನಾ ಮಾದರಿ ಪ್ರತಿರೋಧಗಳು ಸಾಂಕ್ರಾಮಿಕವಾಗುತ್ತಾ ಹೆಚ್ಚೆಚ್ಚು ಜನರನ್ನು ಉತ್ತೇಜನಗೊಳಿಸುತ್ತಿದೆ. ತಮ್ಮ ಮಕ್ಕಳು ನಡೆಸುತ್ತಿರುವ ಪ್ರತಿಭಟನೆಗಳಲ್ಲಿ ಭಾಗವಹಿಸಲೇ ಬೇಕಾದ ಪರಿಸ್ಥಿತಿ ಬಂದುಬಿಟ್ಟಿತಲ್ಲಾ ಎಂಬಂತೆ ಪೋಷಕರು ವ್ಯಂಗ್ಯಾರ್ಥದಲ್ಲಿ ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಫೈಝ್‌ರ ‘‘ನಾವೂ ನೋಡಿಯೇ ಬಿಡುತ್ತೇವೆ’’ ಎಂಬ ಕವನವನ್ನು ವಾಚ್ಯಾರ್ಥದಲ್ಲಿ ಅರ್ಥಮಾಡಿಕೊಂಡದ್ದನ್ನು ವಿಡಂಬಿಸುತ್ತಾ ‘‘ಪೊಲೀಸರು ಕೇವಲ ನೋಡುತ್ತಾ ನಿಲ್ಲುತ್ತಾರೆ’’ ಎಂದು ಪ್ರತಿಭಟನಾಕಾರರು ಲೇವಡಿ ಮಾಡುತ್ತಿದ್ದಾರೆ. ಆದರೆ ತಾರಕಕ್ಕೆ ಮುಟ್ಟಿರುವ ದುರಹಂಕಾರ ಮತ್ತು ಪ್ರತೀಕಾರ ಧೋರಣೆ ಹೊಂದಿರುವ ಹಾಲಿ ಸರಕಾರ ಈ ವಿಡಂಬನೆಯನ್ನು ಮೆಚ್ಚಿಕೊಳ್ಳುವುದಿರಲಿ ಅರ್ಥಮಾಡಿಕೊಳ್ಳುವುದು ಕಷ್ಟ.

ಅದರ ಬದಲಿಗೆ ಅದು ಇನ್ನಷ್ಟು ಪ್ರತೀಕಾರ ಧೋರಣೆಯಿಂದಲೇ ಈ ಧ್ವನಿಗಳನ್ನು ಹತ್ತಿಕ್ಕಲು ಮುಂದಾಗುತ್ತಿದೆ. ಜೆಎನ್‌ಯುನಲ್ಲಿ ನಡೆದ ಹಿಂಸಾಚಾರಗಳು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಮತ್ತು ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯಗಳಲ್ಲಿ ಹಾಗೂ ಉತ್ತರಪ್ರದೇಶಗಳಲ್ಲಿ ನಡೆದ ದಮನಕಾಂಡದ ಮುಂದುವರಿಕೆಯೇ ಆಗಿದೆ. ಈ ಹಿಂದಿನ ಪ್ರಕರಣಗಳಲ್ಲಿ ಖಾಕಿಧಾರಿ ಪೊಲೀಸರೇ ವಿದ್ಯಾರ್ಥಿಗಳಿಗೆ ಗುಂಡಿಕ್ಕಲೂ ಹಾಗೂ ಗ್ರಂಥಾಲಯಗಳ ಮೇಲೆ ದಾಳಿ ನಡೆಸಲೂ ಹಿಂಜರಿಯಲಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಖಾಸಗಿ ಗುಂಪೊಂದು ವಿದ್ಯಾರ್ಥಿಗಳ ಮೇಲೆ ಕಬ್ಬಿಣದ ಬಡಿಗೆ ಇನ್ನಿತರ ಆಯುಧಗಳ ಮೂಲಕ ದಾಳಿ ಮಾಡಲು ಅವಕಾಶ ಮಾಡಿಕೊಟ್ಟರು. 2016ರಲ್ಲೂ ಇದೇ ಬಗೆಯಲ್ಲಿ ಕೆಲವು ಮುಸುಕುಧಾರಿಗಳು ಘೋಷಣೆಗಳನ್ನು ಕೂಗಿದ್ದನ್ನೇ ಜೆಎನ್‌ಯು ವಿರುದ್ಧ ಅಪಪ್ರಚಾರ ಮಾಡಲು ಬಳಸಿಕೊಳ್ಳಲಾಗಿತ್ತು. ಆ ಮುಸುಕುಧಾರಿಗಳು ಈವರೆಗೆ ಪತ್ತೆಯಾಗಿಲ್ಲ. ಆದರೆ ದಾಳಿಕೋರರು ಮುಸುಕುಧಾರಿಗಳಾಗಿದ್ದರೂ ಜನರು ಅವರನ್ನು ಪತ್ತೆಹಚ್ಚಬಲ್ಲರು.

ಅವರು ಹಾಕಿರುವ ದಿರಿಸುಗಳನ್ನು ನೋಡಿಯಲ್ಲ. ಬದಲಿಗೆ ಯಾವುದೇ ಶಿಕ್ಷಾಭೀತಿಯಿಲ್ಲದೆ ನಗ್ನವಾಗಿ ನಡೆದಿರುವ ದಾಳಿಗಳ ಸ್ವರೂಪವನ್ನು ನೋಡಿ ದಾಳಿಕೋರರು ಯಾರೆಂದು ಸುಲಭವಾಗಿ ಪತ್ತೆಮಾಡಬಹುದಾಗಿದೆ. ಇಂತಹ ದಾಳಿಗಳು ಹಿಂದೆಂದೂ ನಡೆದಿರಲಿಲ್ಲ. ಮತ್ತದಕ್ಕೆ ವಿಶೇಷವಾಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಯಾವುದೇ ಭಿನ್ನಮತದ ಧ್ವನಿಗಳನ್ನು ಇಲ್ಲದಂತೆ ಮಾಡುವ ಉದ್ದೇಶವಿದೆ. ಏಕೆಂದರೆ ಇತರ ಎಲ್ಲಾ ಪ್ರತಿರೋಧಗಳಿಗಿಂತ ವಿದ್ಯಾರ್ಥಿ ಪ್ರತಿರೋಧಗಳು ಪ್ರಮಾಣದಲ್ಲಿ ಮತ್ತು ನಿರಂತರತೆಯಲ್ಲಿ ಅಧಿಕವಾಗಿದ್ದು ಸರಕಾರಕ್ಕೆ ಗಂಭೀರವಾದ ಸವಾಲನ್ನು ಒಡ್ಡುತ್ತಿವೆ. 

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News