ಟ್ವೆಂಟಿ -20 ವಿಶ್ವಕಪ್‌ನ ಬಳಿಕ ಪಾಕಿಸ್ತಾನದ ಹಫೀಝ್ ನಿವೃತ್ತಿ

Update: 2020-01-17 18:49 GMT

ಲಾಹೋರ್, ಜ.17: ಪಾಕ್ ತಂಡಕ್ಕೆ ವಾಪಸಾಗಿರುವ ಆಲ್‌ರೌಂಡರ್ ಮುಹಮ್ಮದ್ ಹಫೀಝ್ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

38ರ ಹರೆಯದ ಹಫೀಝ್ ಬಾಂಗ್ಲಾದೇಶ ವಿರುದ್ಧ ಜ.24ರಂದು ಸ್ವದೇಶದಲ್ಲಿ ನಡೆಯಲಿರುವ ಟ್ವೆಂಟಿ-20 ಸರಣಿಗೆ ಆಯ್ಕೆಯಾಗಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಗೂ ಉಪಯುಕ್ತ ಆಫ್-ಸ್ಪಿನ್ನರ್ ಆಗಿರುವ ಹಫೀಝ್ ಪಾಕಿಸ್ತಾನದ ಓರ್ವ ಪ್ರಮುಖ ಆಟಗಾರನಾಗಿದ್ದಾರೆ. 2003ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಕ್ರಿಕೆಟ್‌ಗೆ ಕಾಲಿಟ್ಟಿರುವ ಹಫೀಝ್ ಆಗಾಗ ಬೌಲಿಂಗ್ ಶೈಲಿಯ ಕುರಿತು ಪ್ರಶ್ನೆ ಎದುರಿಸಿದ್ದರು. 2015ರಲ್ಲಿ 12 ತಿಂಗಳ ಕಾಲ ಬೌಲಿಂಗ್ ನಿಷೇಧಕ್ಕೆ ಒಳಗಾಗಿದ್ದರು. ಕ್ರಿಕೆಟ್‌ನಲ್ಲಿನ ಅಪಾರ ಜ್ಞಾನದಿಂದಾಗಿ ಪ್ರೊಫೆಸರ್ ಎಂದು ಕರೆಸಿಕೊಳ್ಳುತ್ತಿರುವ ಹಫೀಝ್,‘‘ನಾನು ಪಾಕಿಸ್ತಾನದ ಪರ 17 ವರ್ಷಗಳ ಕಾಲ ಆಡಿದ್ದೇನೆ. ನನಗೆ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡಬೇಕೆಂಬ ಇಚ್ಛೆಯಿದೆ. ಆ ಬಳಿಕ ಪಾಕಿಸ್ತಾನದ ಅಂತರ್‌ರಾಷ್ಟ್ರೀಯ ತಂಡದಿಂದ ನಿರ್ಗಮಿಸಲು ಬಯಸಿದ್ದೇನೆ’’ ಎಂದರು.

 ಹಫೀಝ್ 2018ರ ಡಿಸೆಂಬರ್‌ನಲ್ಲಿ 55 ಟೆಸ್ಟ್ ಪಂದ್ಯಗಳನ್ನಾಡಿದ ಬಳಿಕ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಸೀಮಿತ ಓವರ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಆಟಗಾರನಾಗಿರುವ ಹಫೀಝ್ 218 ಏಕದಿನ ಪಂದ್ಯಗಳಲ್ಲಿ 6,614 ರನ್ ಹಾಗೂ 139 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಳೆದ ವರ್ಷ ವಿಶ್ವಕಪ್‌ನ ವೇಳೆ ಕೊನೆಯ ಏಕದಿನ ಪಂದ್ಯ ಆಡಿದ್ದಾರೆ. ಆ ನಂತರ ಏಕದಿನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ. 89 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿರುವ ಹಫೀಝ್ 54 ವಿಕೆಟ್‌ಗಳು ಹಾಗೂ 1,908 ರನ್ ಗಳಿಸಿದ್ದಾರೆ.

 29 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಪಾಕ್‌ನ ನಾಯಕತ್ವವಹಿಸಿಕೊಂಡಿದ್ದ ಹಫೀಝ್ 17ರಲ್ಲಿ ಗೆಲುವು, 11ರಲ್ಲಿ ಸೋಲು ಹಾಗೂ ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿತ್ತು.

ಟ್ವೆಂಟಿ-20 ವಿಶ್ವಕಪ್ ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News