ನಿಗೂಢ ಕಾಯಿಲೆಗೆ 10 ಮಕ್ಕಳು ಬಲಿ,6 ಮಂದಿ ಗಂಭೀರ

Update: 2020-01-18 14:12 GMT
ಫೈಲ್ ಚಿತ್ರ

ಜಮ್ಮು,ಜ.18: ಜಮ್ಮು-ಕಾಶ್ಮೀರದ ಉಧಮಪುರ ಜಿಲ್ಲೆಯಲ್ಲಿ ನಿಗೂಢ ಕಾಯಿಲೆಯಿಂದಾಗಿ 10 ಮಕ್ಕಳು ಮೃತಪಟ್ಟಿದ್ದು, ಆರು ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಹಿರಿಯ ಅಧಿಕಾರಿಯೋರ್ವರು ಶನಿವಾರ ತಿಳಿಸಿದರು. ಈ ಮಾರಣಾಂತಿಕ ಕಾಯಿಲೆಗೆ ಕಾರಣವನ್ನು ತಿಳಿಯಲು ವೈದ್ಯರ ಹಲವಾರು ತಂಡಗಳು ಪೀಡಿತ ಪ್ರದೇಶದಲ್ಲಿ ಬೀಡು ಬಿಟ್ಟಿವೆ.

ಕಳೆದ 15 ದಿನಗಳಿಂದ ಜಿಲ್ಲೆಯ ರಾಮನಗರ ಬ್ಲಾಕ್‌ನ 40 ಕಿ.ಮೀ.ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಿಂದ 10 ಮಕ್ಕಳ ಸಾವುಗಳು ವರದಿಯಾಗಿವೆ. ಮಕ್ಕಳು ಜ್ವರ,ವಾಂತಿಯ ಬಗ್ಗೆ ದೂರಿಕೊಂಡಿದ್ದರು,ಈ ಮಕ್ಕಳಲ್ಲಿ ಮೂತ್ರ ವಿಸರ್ಜನೆ ಪ್ರಮಾಣವೂ ಕಡಿಮೆಯಾಗಿತ್ತು. ನಾಲ್ಕು ವರ್ಷಕ್ಕಿಂತ ಕಡಿಮೆ ಪ್ರಾಯದ ಇತರ ಆರು ಮಕ್ಕಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉಧಮಪುರದ ಮುಖ್ಯ ವೈದ್ಯಾಧಿಕಾರಿ ಕೆ.ಸಿ.ಡೋಗ್ರಾ ಅವರು ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲಾಡಳಿತವು ಪೀಡಿತ ಪ್ರದೇಶದಲ್ಲಿನ ಕುಡಿಯುವ ನೀರಿನ ಸ್ಯಾಂಪಲ್‌ಗಳನ್ನು ಪ್ರಯೋಗಾಲಯ ಪರೀಕ್ಷೆಗೆ ರವಾನಿಸಿದ್ದು,ಜನರಿಗೆ ಸುರಕ್ಷಿತವಾದ ಕುಡಿಯುವ ನೀರು ಲಭ್ಯವಾಗುವಂತೆ ಕ್ರಮಗಳನ್ನು ಕೈಗೊಂಡಿದೆ.

ಆತಂಕಕ್ಕೊಳಗಾಗದಂತೆ ಮತ್ತು ಮಕ್ಕಳಲ್ಲಿ ಜ್ವರ,ವಾಂತಿ,ಕಡಿಮೆ ಮೂತ್ರದ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ತೆರಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಜನರನ್ನು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News