ಜಾನ್ಸನ್ ಕಂಪೆನಿ ನೀಡಬೇಕಾದ ಪರಿಹಾರ ಮೊತ್ತದಲ್ಲಿ ಭಾರೀ ಇಳಿಕೆ

Update: 2020-01-18 15:43 GMT
file photo

ನ್ಯೂಯಾರ್ಕ್, ಜ. 18: ಅಮೆರಿಕದ ಔಷಧ ತಯಾರಿಕಾ ಕಂಪೆನಿ ಜಾನ್ಸನ್ ಆ್ಯಂಡ್ ಜಾನ್ಸನ್ ವ್ಯಕ್ತಿಯೊಬ್ಬರಿಗೆ ನೀಡಬೇಕಾದ 8 ಬಿಲಿಯ ಡಾಲರ್ (ಸುಮಾರು 56,800 ಕೋಟಿ ರೂಪಾಯಿ) ಪರಿಹಾರ ಮೊತ್ತವನ್ನು ಪೆನ್ಸಿಲ್ವೇನಿಯದ ನ್ಯಾಯಾಲಯವೊಂದು ಶುಕ್ರವಾರ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿದೆ.

ಮಾನಸಿಕ ನೆಮ್ಮದಿಯ ಔಷಧವೊಂದು ಪುರುಷರಲ್ಲಿ ಸ್ತನ ಬೆಳವಣಿಗೆಗೆ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನು ನೀಡಲು ಕಂಪೆನಿ ವಿಫಲವಾಗಿರುವುದಕ್ಕಾಗಿ ಸಂತ್ರಸ್ತ ದೂರುದಾರ ನಿಕೊಲಸ್ ಮರೆಗೆ ಬೃಹತ್ ಪ್ರಮಾಣದ ಪರಿಹಾರವನ್ನು ನೀಡುವಂತೆ ನ್ಯಾಯಮಂಡಳಿಯೊಂದು ಆದೇಶಿಸಿತ್ತು.

ಜಾನ್ಸನ್ ಆ್ಯಂಡ್ ಜಾನ್ಸನ್ ಈಗ ನಷ್ಟ ಪರಿಹಾರವಾಗಿ 6.8 ಮಿಲಿಯ ಡಾಲರ್ (ಸುಮಾರು 48 ಕೋಟಿ ರೂಪಾಯಿ) ನೀಡಿದರೆ ಸಾಕು ಎಂದು ಪೆನ್ಸಿಲ್ವೇನಿಯ ನ್ಯಾಯಾಲಯ ಹೇಳಿದೆ. ಆದರೆ, ನ್ಯಾಯಾಲಯದ ಹೊಸ ನಿರ್ಧಾರವನ್ನೂ ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಲು ಕಂಪೆನಿ ನಿರ್ಧರಿಸಿದೆ.

 ಸ್ಕೀರೊಫ್ರೀನಿಯ ಮತ್ತು ಖಿನ್ನತೆ ಚಿಕಿತ್ಸೆಯಲ್ಲಿ ನನಗೆ ನೀಡಲಾದ ‘ರಿಸ್ಪರ್‌ಡಾಲ್’ ಔಷಧದಿಂದಾಗಿ ನನ್ನ ಸ್ತನಗಳು ಬೆಳೆದಿವೆ ಎಂಬುದಾಗಿ ದೂರುದಾರರು ಅಕ್ಟೋಬರ್‌ನಲ್ಲಿ ಫಿಲಡೆಲ್ಫಿಯ ನ್ಯಾಯಾಲಯದ ನ್ಯಾಯಮಂಡಳಿಯಲ್ಲಿ ದೂರಿದ್ದರು. ಈ ಹಿನ್ನೆಲೆಯಲ್ಲಿ 8 ಬಿಲಿಯ ಡಾಲರ್ ಪರಿಹಾರ ನೀಡುವಂತೆ ನ್ಯಾಯಾಲಯವು ಕಂಪೆನಿಗೆ ಆದೇಶಿಸಿತ್ತು.

ಈ ಔಷಧಕ್ಕೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ 1993ರಲ್ಲಿ ಅಂಗೀಕಾರ ನೀಡಿತ್ತು. 2018ರಲ್ಲಿ 737 ಮಿಲಿಯ ಡಾಲರ್ (ಸುಮಾರು 5,235 ಕೋಟಿ ರೂಪಾಯಿ) ವೌಲ್ಯದ ‘ರಿಸ್ಪರ್‌ಡಾಲ್’ ಮಾತ್ರೆಗಳು ಮಾರಾಟವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News