ಜೈಲಿನಿಂದ ಬಿಡುಗಡೆಗೊಳ್ಳುತ್ತಲೇ ನೇರ ಸಿಎಎ ಪ್ರತಿಭಟನಾ ಸ್ಥಳಕ್ಕೆ ತೆರಳಿದ ವಕೀಲ

Update: 2020-01-20 06:04 GMT
ಫೋಟೊ : scroll.in

ಲಕ್ನೋ : ನಾಗರಿಕ ಹಕ್ಕುಗಳ ಸಂಘಟನೆ 'ರಿಹಾಯಿ ಮಂಚ್' ಮುಖ್ಯಸ್ಥರೂ, ವಕೀಲರೂ ಆಗಿರುವ  72 ವರ್ಷದ ಮುಹಮ್ಮದ್ ಶೋಯೆಬ್ ಅವರನ್ನು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದಕ್ಕಾಗಿ ಡಿ. 19ರ ರಾತ್ರಿ  ಬಂಧಿಸಲಾಗಿತ್ತು.

ಜ.17ರಂದು ಅವರಿಗೆ ಜಾಮೀನು ದೊರೆಯುತ್ತಲೇ ಅವರು ತಮ್ಮ ಪತ್ನಿ ಮಲ್ಕಾ ಬೀ ಅವರ ಜತೆಗೆ ಲಕ್ನೋ ಜಿಲ್ಲಾ ಕಾರಾಗೃಹದಿಂದ ನೇರವಾಗಿ ನಗರದ  ಘಂಟಾಘರ್ ಪ್ರದೇಶಕ್ಕೆ ತೆರಳಿ ಅಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರಿಗೆ ಬೆಂಬಲ ಸೂಚಿಸಲು ತಾವೂ ಪ್ರತಿಭಟನೆಯಲ್ಲಿ ಭಾಗಿಯಾದರು.

ದಲಿತರು, ಆದಿವಾಸಿಗಳು ಹಾಗೂ ಮುಸ್ಲಿಮರ ಕ್ಷೇಮಾಭಿವೃದ್ಧಿಗಾಗಿ ರಿಹಾಯಿ ಮಂಚ್ ನಡೆಸುತ್ತಿರುವ ಕೆಲಸಗಳನ್ನು ಸಹಿಸದ ಸರಕಾರ  ತನ್ನನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ''ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕಲು ಎಲ್ಲಾ ಸಾಧ್ಯ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ, ಆದರೆ ಜನರು- ಮಹಿಳೆಯರು ಅವರಿಗೆ ತಕ್ಕ ಉತ್ತರ  ನೀಡುತ್ತಿದ್ದಾರೆ,'' ಎಂದು ಶೋಯೆಬ್ ಹೇಳಿದರು.

ಶೋಯೆಬ್ ಅವರನ್ನು ಮಾಜಿ ಐಜಿಪಿ ಎಸ್ ಆರ್ ದಾರಾಪೌರಿ ಸಹಿತ ಹಲವಾರು ಹೋರಾಟಗಾರರ ಜತೆ ಡಿ. 19ರಂದು ಬಂಧಿಸಿದ್ದ ಪೊಲಿಸರು ಹಿಂಸೆಗೆ ಪ್ರೇರೇಪಣೆ,  ಕೊಲೆ ಉದ್ದೇಶ, ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿದ ಆರೋಪಗಳನ್ನು ಹೊರಿಸಿದ್ದಾರೆ. ಬಂಧನದ ವೇಳೆ ತಮ್ಮನ್ನು ಪೊಲೀಸರು ನಿಂದಿಸಿದ್ದಾರೆಂದು ಶೋಯೆಬ್ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News