×
Ad

ಸಿಎಎ, ಎನ್‌ಆರ್‌ಸಿ ಜಾರಿ ಮಾಡದ 13 ರಾಜ್ಯ ಸರಕಾರಗಳನ್ನು 'ಕೇಂದ್ರ' ವಜಾ ಮಾಡುತ್ತಾ?: ಸಿದ್ದರಾಮಯ್ಯ ಪ್ರಶ್ನೆ

Update: 2020-01-20 18:19 IST

ಬೆಂಗಳೂರು, ಜ. 20: ‘ನಾಡಿದ್ದು 26ನೆ ತಾರೀಖಿಗೆ ಬಿಜೆಪಿ ಅಧಿಕಾರಕ್ಕೆ ಬಂದು 6 ತಿಂಗಳಾಗುತ್ತದೆ, ಆದರೆ ರಾಜ್ಯದಲ್ಲಿ ಸರಕಾರವೇ ಇಲ್ಲವೇನೋ ಎಂಬಂಥ ಪರಿಸ್ಥಿತಿ ಇದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನರಿಗೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ, ಇನ್ನೂ ಪೂರ್ಣ ಪ್ರಮಾಣದ ಮಂತ್ರಿಮಂಡಲವೇ ರಚನೆಯಾಗಿಲ್ಲ. ಹೀಗಾದರೆ ಅಭಿವೃದ್ಧಿ ಕೆಲಸ ಆಗುವುದು ಹೇಗೆ?’ ಎಂದು ಪ್ರಶ್ನಿಸಿದ್ದಾರೆ.

‘ಮಂತ್ರಿಮಂಡಲ ರಚನೆಗೆ ಸಂಬಂಧಿಸಿದಂತೆ ಮಾತುಕತೆಗೆ ಬಿಎಸ್‌ವೈ ಅವರಿಗೆ ಅಮಿತ್ ಶಾ ಭೇಟಿ ಮಾಡಲು ಅವಕಾಶವನ್ನೇ ನೀಡುತ್ತಿಲ್ಲ. ಅಂದು ಯಡಿಯೂರಪ್ಪ ನಾನು ಪ್ರಮಾಣವಚನ ಸ್ವೀಕರಿಸಿದ ದಿನವೇ ನಿಮ್ಮನ್ನು ಮಂತ್ರಿ ಮಾಡ್ತೀನಿ ಎಂದು ಅತೃಪ್ತರಿಗೆ ಹೇಳಿದ್ದರು. ಅಧಿಕಾರದಾಸೆಗೆ ಪಕ್ಷ ಬಿಟ್ಟು ಈಗ ಅತಂತ್ರರಾಗಿರುವವರನ್ನು ನೋಡಿದ್ರೆ ಅಯ್ಯೋ ಅನಿಸುತ್ತೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ರಾಜ್ಯ ಸರಕಾರದ ಹಲವು ಇಲಾಖೆಗಳು ಮಂತ್ರಿಗಳಿಲ್ಲದೆ ನಿಷ್ಕ್ರಿಯವಾಗಿವೆ. ಜನರ ಕಷ್ಟ ಕೇಳಲು ಜಿಲ್ಲಾ ಉಸ್ತುವಾರಿ ಮಂತ್ರಿಗಳು ತಮ್ಮ ಜಿಲ್ಲೆ ಕಡೆಗೆ ತಲೆ ಹಾಕುತ್ತಿಲ್ಲ. ಪ್ರವಾಹ ಬಂದು ಇಷ್ಟು ಸಮಯವಾದ್ರೂ ಇನ್ನೂ ಜನ ಬೀದಿಬದಿಯಲ್ಲೇ ವಾಸಿಸುತ್ತಾ ಇದ್ದಾರೆ. ಈ ಸರಕಾರ ಟೇಕ್ ಆಫ್ ಹಂತ ತಲುಪುವುದು ಬಿಡಿ, ಸತ್ತೇ ಹೋಗಿದೆ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ಹುಬ್ಬಳ್ಳಿಗೆ ಭೇಟಿ ನೀಡಿದ್ದ ಅಮಿತ್ ಶಾ ಅಲ್ಲಿನ ಮಹದಾಯಿ ಸಮಸ್ಯೆಯ ಬಗ್ಗೆ ಮಾತನಾಡೋದು ಬಿಟ್ಟು ಪಾಕಿಸ್ತಾನದ ಬಗ್ಗೆ ಮಾತಾಡುತ್ತಾರೆ. ಇದರಿಂದ ಹುಬ್ಬಳ್ಳಿ ಜನರ ಕಷ್ಟ ದೂರಾಗುತ್ತದೆಯೇ? ಪ್ರವಾಹ ಬಂದಾಗ ರಾಜ್ಯದ ಕಡೆ ಕಣ್ಣೆತ್ತಿ ನೋಡದ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಈಗ ಏಕೆ ಬಂದಿದ್ದಾರೆ? ಬಂದವರು ಜನರ ಸಮಸ್ಯೆಗೆ ಪರಿಹಾರ ಹೇಳಿದ್ರಾ?’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

‘ದೇಶದ 13 ರಾಜ್ಯಗಳು ಸಿಎಎ, ಎನ್‌ಆರ್‌ಸಿ ಜಾರಿ ಮಾಡಲ್ಲ ಎಂದು ಹೇಳುತ್ತಿವೆ, ಈ ಎಲ್ಲ ರಾಜ್ಯ ಸರಕಾರಗಳನ್ನು ಕೇಂದ್ರ ಸರಕಾರ ವಜಾ ಮಾಡುತ್ತಾ? ಸಿಎಎ ಜಾರಿ ಮಾಡಿ ಎಂದು ರಾಜ್ಯಪಾಲರು ಸರಕಾರಕ್ಕೆ ನಿರ್ದೇಶನ ನೀಡುವುದು ಅಸಂವಿಧಾನಿಕ. ರಾಜ್ಯಪಾಲರು ಚುನಾಯಿತ ಸರಕಾರದ ಮುಖ್ಯಸ್ಥರಲ್ಲ, ಅವರ ಮಾತನ್ನು ಸರಕಾರ ಕೇಳಲೇಬೇಕೆಂಬ ನಿಯಮವೂ ಇಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ಬಿಹಾರದಲ್ಲಿ ಬಿಜೆಪಿಯ ಸಮ್ಮಿಶ್ರ ಸರಕಾರವಿದ್ದರೂ ಸಿಎಎ, ಎನ್‌ಆರ್‌ಸಿ ಜಾರಿ ಮಾಡಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಹೇಳಿದ್ದಾರೆ. ಹಾಗಾದರೆ ಬಿಜೆಪಿಯವರು ಅಲ್ಲಿನ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಾಸು ಪಡೆಯಲಿ ನೋಡೋಣ. ಬಿಜೆಪಿ ಸರಕಾರ ಇರುವಲ್ಲೇ ಈ ಕಾಯ್ದೆ ಜಾರಿಯಾಗುತ್ತಿಲ್ಲ, ಬೇರೆ ಕಡೆಯದು ಆಮೇಲಿನ ಮಾತು’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News