ಎಸ್‌ಡಿಪಿಐಗೂ ಮುನ್ನ ಆರೆಸ್ಸೆಸ್-ಬಜರಂಗದಳ ನಿಷೇಧಿಸಿ: ಝಮೀರ್ ಅಹ್ಮದ್ ಖಾನ್

Update: 2020-01-20 13:45 GMT

ಬೆಂಗಳೂರು, ಜ.20: ರಾಜ್ಯ ಬಿಜೆಪಿ ಸರಕಾರವು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ನಿಷೇಧಿಸಲು ಮುಂದಾಗಿದೆ. ಆದರೆ, ಅದಕ್ಕೂ ಮುನ್ನ ಆರೆಸ್ಸೆಸ್ ಹಾಗೂ ಬಜರಂಗದಳವನ್ನು ನಿಷೇಧಿಸಲಿ ಎಂದು ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಆಗ್ರಹಿಸಿದರು.

ಸೋಮವಾರ ಇಲ್ಲಿನ ಪುಲಿಕೇಶಿನಗರದ ಫುಟ್ಬಾಲ್ ಮೈದಾನದಲ್ಲಿ ಜಂಟಿ ಕ್ರಿಯಾ ಸಮಿತಿ ಆಯೋಜಿಸಿದ್ದ ಎನ್‌ಆರ್‌ಸಿ, ಸಿಎಎ ಹಾಗೂ ಎನ್‌ಪಿಆರ್ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಆರೆಸ್ಸೆಸ್ ಹಾಗೂ ಬಜರಂಗ ದಳದ ಮುಖಂಡರು ನೀಡುವಂತಹ ಹೇಳಿಕೆಗಳ ಮಾದರಿಯಲ್ಲಿ ಎಸ್‌ಡಿಪಿಐ ನಾಯಕರು ಎಲ್ಲಾದರೂ ಒಂದೇ ಒಂದು ಹೇಳಿಕೆ ನೀಡಿರುವ ಉದಾಹರಣೆಯನ್ನು ತೋರಿಸಿ ಎಂದು ಝಮೀರ್ ಅಹ್ಮದ್ ಖಾನ್ ಸವಾಲು ಹಾಕಿದರು.

ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ ಹಾಗೂ ನೆಮ್ಮದಿಯಿಂದ ಬಾಳಬೇಕಾದರೆ, ಎಸ್‌ಡಿಪಿಐ ನಿಷೇಧದಿಂದ ಅದು ಸಾಧ್ಯವಾಗುವುದಿಲ್ಲ. ಮೊದಲು ಆರೆಸೆಸ್ಸ್ ಹಾಗೂ ಬಜರಂಗ ದಳವನ್ನು ನಿಷೇಧಿಸುವಂತೆ ನಾನು ಸರಕಾರಕ್ಕೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮಾದರಿಯಲ್ಲಿ ಎಸ್‌ಡಿಪಿಐ ಸಹ ಒಂದು ರಾಜಕೀಯ ಪಕ್ಷ. ಅದರಲ್ಲಿರುವ ಕೆಲವು ಕಾರ್ಯಕರ್ತರು ತಪ್ಪು ಮಾಡಿದ್ದರೆ, ಅವರನ್ನು ಕಾನೂನು ರೀತಿ ಶಿಕ್ಷೆಗೆ ಒಳಪಡಿಸಿ, ಅದನ್ನು ಬಿಟ್ಟು ನೇರವಾಗಿ ಎಸ್‌ಡಿಪಿಐ ನಿಷೇಧಿಸಲು ಮುಂದಾಗುವುದು ಸರಿಯಲ್ಲ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಈ ಸಂದರ್ಭದಲ್ಲಿ ಪುಲಿಕೇಶಿನಗರ ಶಾಸಕ ಆರ್.ಅಖಂಡ ಶ್ರೀನಿವಾಸಮೂರ್ತಿ, ಮಾಜಿ ಮೇಯರ್ ಸಂಪತ್ ರಾಜ್, ಪಾಲಿಕೆ ಸದಸ್ಯ ಎ.ಆರ್.ಝಾಕಿರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉಬೇದುಲ್ಲಾ ಶರೀಫ್, ಮುಖಂಡರಾದ ಅಲ್ತಾಫ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News