ಬೆಂಗಳೂರು: ಅನುಮತಿ ನೀಡಿ, ನಿರಾಕರಿಸಿದ ಪೊಲೀಸರು; ಬೀದಿಗಿಳಿದು 'ಆಝಾದಿ' ಕೂಗು ಮೊಳಗಿಸಿದ ಪ್ರತಿಭಟನಾಕಾರರು

Update: 2020-01-20 15:07 GMT

ಬೆಂಗಳೂರು, ಜ.20: ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಪ್ರಕ್ರಿಯೆ ವಿರೋಧಿಸಿ ನಡೆಸಲು ಉದ್ದೇಶಿಸಿದ್ದ ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದರೂ, ಸಾಗರೋಪಾದಿಯಲ್ಲಿ ಜಮಾಯಿಸಿದ ಜನರು, ಆಝಾದಿ ಘೋಷಣೆಗಳನ್ನು ಮೊಳಗಿಸಿ ಗಮನ ಸೆಳೆದರು.

ಸೋಮವಾರ ಇಲ್ಲಿನ ಗಂಗೊಂಡನಹಳ್ಳಿಯ ಸರಕಾರಿ ಆಟದ ಮೈದಾನದಲ್ಲಿ ಮಸೀದಿ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಸಿಎಎ ವಿರೋಧಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರು ಅನುಮತಿ ನೀಡಿದ್ದರು. ಆದರೆ, ಏಕಾಏಕಿ ರವಿವಾರ ತಡರಾತ್ರಿ ಅನುಮತಿ ವಾಪಸ್ಸು ಪಡೆದು, ಅಘೋಷಿತ ನಿಷೇಧಾಜ್ಞೆ ಹೇರಲಾಗಿತ್ತು ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಗಂಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇನ್ನು, ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ. ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಗಳಿವೆ ಎಂದಿದ್ದರು. ಆದರೆ, ಇದನ್ನು ಲೆಕ್ಕಿಸದೆ, ಗಂಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ಜಮಾಯಿಸಿದ ಸಾವಿರಾರು ಮಂದಿ, ರಸ್ತೆಯಲ್ಲಿಯೇ ಕುಳಿತು, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಎಂದು ಸಮಿತಿ ಆಯೋಜಕ ಮುಹಮ್ಮದ್ ಸೈಫುಲ್ಲಾ ಮಾಹಿತಿ ನೀಡಿದರು.

ಬಿಜೆಪಿ ಒತ್ತಡ: ಎರಡು ದಿನಗಳ ಹಿಂದಷ್ಟೇ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಿದ್ದರು. ಈ ಸಂಬಂಧ ಅಧಿಕೃತ ಪತ್ರವನ್ನು ಆಯೋಜಕರಿಗೆ ನೀಡಿ, ಯಾವುದೇ ರೀತಿಯ ಕಾನೂನು ಉಲ್ಲಂಘನೆ ಆಗದಂತೆ ನೋಡಿಕೊಳ್ಳಿ ಎಂದು ತಿಳಿಸಿದ್ದರು. ಆದರೆ, ಇಂದು ಬೆಳಗ್ಗೆ ದಿಢೀರ್ ಅನುಮತಿ ರದ್ದುಗೊಳಿಸಿದ್ದರು. ಇದಕ್ಕೆ ಸ್ಥಳೀಯ ಶಾಸಕರೂ ಆಗಿರುವ ಸಚಿವ ವಿ.ಸೋಮಣ್ಣ ಕಾರಣ. ಅವರೇ ಒತ್ತಡ ಹಾಕಿ ಪ್ರತಿಭಟನೆ ನಡೆಯದಂತೆ ನೋಡಿಕೊಂಡಿದ್ದಾರೆಂದು ಸ್ಥಳೀಯರು ಆರೋಪ ಮಾಡಿದರು.

ಆಕ್ರೋಶ: ದೇಶದಲ್ಲಿ ಬಡತನ, ನಿರುದ್ಯೋಗ ಹೆಚ್ಚಾಗುತ್ತಿದೆ. ಅದಕ್ಕಾಗಿ ಕೇಂದ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೆಲಸಕ್ಕೆ ಬಾರದ ಕಾಯ್ದೆ ಜಾರಿಗೆ ತಂದು ಅಶಾಂತಿ ವಾತಾವರಣ ನಿರ್ಮಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಶಾಂತಿ ಪ್ರಿಯರ ದೇಶ ನಮ್ಮದು. ಸೂಫಿಸಂತರ ನಾಡು ನಮ್ಮದು. ಇದುವರೆಗೂ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ ಕೆಲಸಕ್ಕೆ ಆಸ್ಪದ ಸಿಕ್ಕಿರಲಿಲ್ಲ. ಇಂದಿನ ಕೇಂದ್ರ ಸರಕಾರ ಮಾತ್ರ ಅಂಥ ಕೆಲಸ ಮಾಡುತ್ತಿದೆ ಎಂದು ದೂರಿದರು.

ನಿಮ್ಮ ಅಪ್ಪನ ರಾಜ್ಯವೇ?

ಜ.6ರಂದು ಗಂಗೊಂಡನಹಳ್ಳಿಯಲ್ಲಿ ಪ್ರತಿಭಟನೆ ನಡೆಸಲು ಪೊಲೀಸರಿಂದ ಅನುಮತಿ ಪಡೆಯಲಾಗಿತ್ತು. ಸ್ಥಳೀಯ ನಿವಾಸಿಗಳಿಗೆ ಸಂದೇಶವೂ ರವಾನೆಯಾಗಿತ್ತು. ಅದರಂತೆ, ಸೋಮವಾರ ಪ್ರತಿಭಟನೆ ನಡೆಯಬೇಕಿತ್ತು. ಆದರೆ, ಏಕಾಏಕಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಇದು ನಿಮ್ಮ ಅಪ್ಪನ ರಾಜ್ಯವೇ? ನಮಗೆ ಪೊಲೀಸರ ಮೇಲೆ ಗೌರವ ಇದೆ. ಆದರೆ, ಪ್ರತಿಭಟನೆ ನಿಲ್ಲಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ.

-ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಮಾಜಿ ಸಚಿವ

‘ಬಿಜೆಪಿ ಒತ್ತಡ, ಕಾನೂನು ಹೋರಾಟ’

ಸಚಿವ ವಿ.ಸೋಮಣ್ಣ ಪ್ರತಿನಿಧಿಸುವ ಗೋವಿಂದರಾಜನಗರದಲ್ಲಿಯೇ ಗಂಗೊಂಡನಹಳ್ಳಿ ಇದೆ. ಹಾಗಾಗಿಯೇ, ಇಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸದಂತೆ ಬಿಜೆಪಿ ನಾಯಕರು ಪೊಲೀಸರ ಮೇಲೆ ಒತ್ತಡ ಹೇರಿ, ನಿಲ್ಲಿಸುವಂತೆ ಮಾಡಿದ್ದಾರೆ. ಈ ಸಂಬಂಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನೆ ಸಂಘಟಿಸಿದ್ದ ಮುಖಂಡರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News