ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಡಿಕೆಶಿ ವಾಗ್ದಾಳಿ

Update: 2020-01-20 14:30 GMT

ಬೆಂಗಳೂರು, ಜ.20: ಬಿಜೆಪಿ ನಾಯಕರಿಗೆ ರಾಜ್ಯದ ಮಹಾದಾಯಿ, ಕಾವೇರಿ, ಕೃಷ್ಣಾ ನದಿಯ ವಿಚಾರಗಳು ಬೇಕಾಗಿಲ್ಲ. ಈಗ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಬಗ್ಗೆ ಮಾತನಾಡಲು ರಾಜ್ಯಕ್ಕೆ ಬಂದಿದ್ದಾರೆ ಎಂದು ಪರೋಕ್ಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದೇ ದಿನದಲ್ಲಿ ಮಹಾದಾಯಿ ಸಮಸ್ಯೆಯನ್ನು ಬಗೆಹರಿಸುವುದಾಗಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ಆಶ್ವಾಸನೆ ನೀಡಿದ್ದರು. ಆದರೆ, ಈವರೆಗೆ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಮಾಡಿಲ್ಲ ಎಂದು ಟೀಕಿಸಿದರು.

ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ ಮಹಾದಾಯಿ ಸಮಸ್ಯೆ ಬಗೆಹರಿಸುವ ವಿಚಾರದಲ್ಲಿ ಒಂದೇ ಒಂದು ಮಾತನ್ನು ಆಡಲಿಲ್ಲ ಎಂದು ಟೀಕಿಸಿದ ಅವರು, ರಾಜ್ಯದ ಬಿಜೆಪಿ ಸರಕಾರವು ನಮ್ಮ ಸರಕಾರದ ಅವಧಿಯಲ್ಲಿ ಮಂಜೂರಾಗಿರುವ ಯೋಜನೆಗಳು, ಕೆಲಸಗಳಿಗೆ ಕಡಿವಾಣ ಹಾಕುತ್ತಿದೆ. ಪ್ರತಿಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಬಿಜೆಪಿ ಸರಕಾರಕ್ಕೆ ಬೇಕಾಗಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದಲ್ಲಿನ ಸ್ಥಾನಮಾನದ ವಿಚಾರದ ಬಗ್ಗೆ ನಾನು ಏನು ಹೇಳುವುದಿಲ್ಲ. ಯಾರು ಯಾರು ಏನು ಏನು ಮಾತನಾಡುತ್ತಿದ್ದಾರೆ ಎಂಬುದನ್ನೆಲ್ಲ ಮಾಧ್ಯಮಗಳ ಮೂಲಕ ಗಮನಿಸುತ್ತಿದ್ದೇನೆ. ನಾನು ವ್ಯಕ್ತಿ ಪೂಜೆ ಮಾಡುವವನಲ್ಲ, ಪಕ್ಷ ಪೂಜೆ ಮಾಡುವವನು. ನಾನು ಯಾವುದೇ ಬಣಕ್ಕೂ ಸೇರಿಲ್ಲ, ನನ್ನದು ಕಾಂಗ್ರೆಸ್ ಬಣ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News