ದವೀಂದರ್ ಸಿಂಗ್ ಬಂಧನದ ಹಿಂದೆ ನಿಗೂಢತೆಗಳಿಲ್ಲವೇ?

Update: 2020-01-20 18:40 GMT

ಡಿವೈಎಸ್‌ಪಿಯನ್ನು ಭಯೋತ್ಪಾದಕರೆಂದು ಹೇಳಲ್ಪಟ್ಟವರ ಜೊತೆಗೆ ಬಂಧನದ ಹಿಂದೆ ಹಲವು ನಿಗೂಢತೆಗಳಿರುವ ಬಗ್ಗೆ ಮೇಲ್ನೋಟಕ್ಕೆ ಗೊತ್ತಾಗುವ ವಿಚಾರ. ಇಂತಹವುಗಳನ್ನು ಮಾಡಬೇಕಾದರೆ ಒಬ್ಬ ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಯೊಬ್ಬರಿಂದ ಮಾತ್ರ ಸಾಧ್ಯವಾಗಲಾರದು ಎನ್ನುವುದು ಕೂಡ ಮೇಲ್ನೋಟದಲ್ಲೇ ಯಾರಿಗಾದರೂ ಗೊತ್ತಾಗುವ ಸಂಗತಿ. ಇವುಗಳ ಹಿಂದಿನ ಶಕ್ತಿಗಳು ಬಹಿರಂಗವಾಗಬೇಕಿದೆ. ದೇಶದ ಜನರು ಇವನ್ನೆಲ್ಲಾ ಅರಿಯಬೇಕಾದುದು ಅತ್ಯಗತ್ಯವಾಗಿದೆ.

 ಹಿಂದೆ ದಿಲ್ಲಿಯತ್ತ ಹೊರಟಿದ್ದ ಕಾಶ್ಮೀರದ ಡಿವೈಎಸ್‌ಪಿ ದವೀಂದರ್ ಸಿಂಗ್ ಬಂಧನ ಈಗ ಒಂದು ಮಟ್ಟದ ಸುದ್ದಿಗೆ ಕಾರಣವಾಗಿದೆ. ‘‘ಆತನ ಜೊತೆಯಲ್ಲಿ ಉಗ್ರವಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದವರಿದ್ದರು. ಅವರು ಹಿಜ್ಬುಲ್ ಮುಜಾಹಿದೀನ್ ಎಂಬ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ. ಅವರ ಮನೆಯಲ್ಲಿ ಎಕೆ-47ನಂತಹ ಬಂದೂಕು ಹಾಗೂ ಎರಡು ಪಿಸ್ತೂಲುಗಳು ದೊರೆತಿವೆ. ತನ್ನ ಮನೆಯಲ್ಲಿ ಉಗ್ರವಾದಿ ಸಂಘಟನೆಗಳ ಸದಸ್ಯರಿಗೆ ಆಶ್ರಯ ಕಲ್ಪಿಸಿದ್ದರು. ಅವರು ದೇಶದ ರಾಜಧಾನಿ ದಿಲ್ಲಿಯಲ್ಲಿ ಬಾಂಬ್ ಸ್ಫೋಟ ಮೊದಲಾದ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಯೋಜನೆ ಹೆಣೆದಿದ್ದರು’’ ಎನ್ನುವುದು ಸುದ್ದಿಯ ಮುಖ್ಯ ವಿಚಾರವಾಗಿದೆ. ಜನವರಿ 26ರ ಗಣರಾಜ್ಯ ದಿನೋತ್ಸವದಂದು ವಿಧ್ವಂಸಕ ಕೃತ್ಯಗಳ ಯೋಜನೆ ಅವರದಾಗಿತ್ತೇ ಎಂಬ ಬಗ್ಗೆ ತನಿಖೆಯಾಗಲಿದೆಯೆಂದು ವರದಿಯಾಗಿದೆ. ಅದಕ್ಕಿಂತಲೂ ಮುಖ್ಯವಾಗಿರುವ ಮತ್ತೊಂದು ವಿಚಾರವಿದೆ. ಅದೇನೆಂದರೆ ಇದೇ ದವೀಂದರ್ ಸಿಂಗ್ ತನ್ನನ್ನು ವಶಕ್ಕೆ ತೆಗೆದುಕೊಂಡು ಚಿತ್ರಹಿಂಸೆ ನೀಡಿ ಸಂಸತ್ ಭವನದ ಮೇಲಿನ ದಾಳಿಯಲ್ಲಿ ಪಾಲ್ಗೊಂಡವರಲ್ಲಿ ಒಬ್ಬನಿಗೆ ದಿಲ್ಲಿಗೆ ಕರೆದುಕೊಂಡು ಹೋಗಿ ವಸತಿ ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯಿಸಿದ್ದರು ಎಂದು ಅಫ್ಝಲ್ ಗುರು ತನ್ನ ವಕೀಲರಿಗೆ ಬರೆದ ಪತ್ರದಲ್ಲಿ ಹೇಳಿಕೊಂಡಿದ್ದರು. ಆ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಫ್ಝಲ್ ಗುರುವನ್ನು ಸಂಸತ್ ಭವನದ ದಾಳಿಯ ಒಬ್ಬ ರೂವಾರಿಯೆಂದು ಗಲ್ಲು ಶಿಕ್ಷೆ ನೀಡಿ ಫೆಬ್ರವರಿ 2013ರಲ್ಲಿ ನೇಣಿಗೆ ಹಾಕಲಾಗಿತ್ತು.

 ಅದು 2001ನೇ ಇಸವಿ, ವಿಶ್ವದ ದೊಡ್ಡಣ್ಣನೆಂದು ಇಂಡಿಯಾದ ಮಾಧ್ಯಮಗಳಿಂದ ಬಿಂಬಿಸಿಕೊಳ್ಳುವ ಅಮೆರಿಕ ಭಾರೀ ದಾಳಿಗೆ ಈಡಾಗಿತ್ತು. ಸೆಪ್ಟಂಬರ್ ತಿಂಗಳ 11ರಂದು ಅಮೆರಿಕದ ಪ್ರತಿಷ್ಠಿತ ಹಾಗೂ ಭಾರೀ ಭದ್ರತೆಯಿರುವ ವರ್ಲ್ಡ್ ಟ್ರೇಡ್ ಸೆಂಟರ್ ಹಾಗೂ ಪೆಂಟಗನ್ ಮೇಲೆ ಸರಣಿಯಾಗಿ ನಾಲ್ಕು ದಾಳಿಯಾಯಿತು. ವೈಟ್ ಹೌಸ್ ಮೇಲೂ ದಾಳಿಯ ಪ್ರಯತ್ನವಾಗಿದ್ದರೂ ಅದನ್ನು ಅಮೆರಿಕದ ಭದ್ರತಾ ಪಡೆಗಳು ತಡೆದವು ಎಂದು ಹೇಳಲಾಯಿತು. ನಾಲ್ಕು ವಿಮಾನಗಳನ್ನು ಸ್ಫೋಟಕಗಳೊಂದಿಗೆ ಆ ಕಟ್ಟಡಗಳೊಳಗೆ ನುಗ್ಗಿಸಿ ಈ ದಾಳಿಗಳನ್ನು ನಡೆಸಲಾಗಿತ್ತು. ಈ ದಾಳಿಯಲ್ಲಿ ಸುಮಾರು 3,000 ಜನರ ಸಾವುಗಳು ಸಂಭವಿಸಿ, ಸುಮಾರು 25,000 ಜನರು ಗಾಯಾಳುಗಳಾದರೆಂದು ವರದಿಯಿದೆ. ಸುಮಾರು ಹತ್ತು ಬಿಲಿಯನ್ ಡಾಲರುಗಳ ಮೂಲಸೌಲಭ್ಯಗಳ ನಷ್ಟ ಅಮೆರಿಕಕ್ಕೆ ಆಗಿತ್ತು ಎಂಬ ಒಂದು ಅಂದಾಜಿದೆ. ಅಮೆರಿಕ ಹಿಂದೆಂದೂ ಆ ಮಟ್ಟದ ದಾಳಿಗೆ ಈಡಾಗಿರಲಿಲ್ಲ ಎನ್ನಬಹುದು. ಈ ದಾಳಿಯನ್ನು ಅಲ್ ಖಾಯಿದಾದ ಉಸಾಮಾ ಬಿನ್ ಲಾದೆನ್ ಮಾಡಿದ್ದೆಂದೂ ಅಮೆರಿಕ ಹೇಳಿತು. ಆರಂಭದಲ್ಲಿ ಉಸಾಮಾ ಬಿನ್ ಲಾದೆನ್ ಈ ದಾಳಿ ತಾನು ಮಾಡಿದ್ದಲ್ಲವೆಂದು ಹೇಳುವ, ನಂತರ 2004ರಲ್ಲಿ ಅದನ್ನು ತಾನೇ ಮಾಡಿದ್ದೆಂದು ಹೇಳುವ ಒಸಾಮಾ ಬಿನ್ ಲಾದೆನ್ ನದೆಂದು ಹೇಳಲಾದ ವೀಡಿಯೊ ಹಾಗೂ ಆಡಿಯೊ ಸಂದೇಶವಿರುವ ತುಣುಕುಗಳು ಬಿತ್ತರವಾಗಿದ್ದವು.

9/11 ದಾಳಿ ಎಂದು ಕರೆಯಲ್ಪಡುವ ಈ ದಾಳಿಯ ನಂತರ ಭಯೋತ್ಪಾದನೆ ವಿರುದ್ಧ ಜಾಗತಿಕ ಸಮರಕ್ಕೆ ಅಮೆರಿಕ ಕರೆ ನೀಡಿತು. ಅದರ ಭಾಗವಾಗಿ ಉಸಾಮಾ ಬಿನ್ ಲಾದೆನ್‌ಗೆ ರಕ್ಷಣೆ ಒದಗಿಸುತ್ತಿದೆ ಎಂದು ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿ ಅಲ್ಲಿನ ತಾಲಿಬಾನ್ ಸರಕಾರವನ್ನು ಅಮೆರಿಕ ಬೀಳಿಸಿ ತನ್ನ ಕೈಗೊಂಬೆ ಸರಕಾರವನ್ನು ಸ್ಥಾಪಿಸಿತು. ನಂತರ ಸಮೂಹ ನಾಶಕ ರಾಸಾಯನಿಕ ಅಸ್ತ್ರಗಳನ್ನು ಹೊಂದಿರುವ ಆರೋಪ ಹೊರಿಸಿ ಇರಾಕಿನ ಮೇಲೆ ದಾಳಿ ಮಾಡಿ ಸದ್ದಾಮ್ ಹುಸೈನ್ ಆಡಳಿತವನ್ನು ಬೀಳಿಸಿದ್ದಲ್ಲದೆ ಸದ್ದಾಮ್ ಹುಸೈನ್‌ರನ್ನು ಸೆರೆಹಿಡಿದು ವಿಚಾರಣೆಯ ನಾಟಕ ಮಾಡಿ ನೇಣಿಗೆ ಏರಿಸಿ ಕೊಂದು ಹಾಕಿತು. ನಂತರ ಅಮೆರಿಕ ಲಿಬಿಯಾದ ಮೇಲೆ ಯುದ್ಧ ಸಾರಿ ಲಿಬಿಯಾದ ಅಧ್ಯಕ್ಷರಾಗಿದ್ದ ಕರ್ನಲ್ ಮುಅಮ್ಮರ್ ಗದ್ದಾಫಿಯನ್ನು ಸೆರೆ ಹಿಡಿದು ಕೊಂದು ಹಾಕಿತು. ಇದರಿಂದಾಗಿ ಲಕ್ಷಾಂತರ ಜನರು ಸಾವಿಗೀಡಾಗಿ ಅದಕ್ಕಿಂತಲೂ ಹೆಚ್ಚಿನ ಜನರು ಗಾಯಾಳುಗಳಾದರು. ಈಗಲೂ ಈ ಪ್ರದೇಶಗಳು ಆಂತರಿಕ ಕದನಗಳ ತಾಣಗಳಾಗಿ ಅರಾಜಕತೆಯ ಬೀಡಾಗಿದೆ. ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ಕೂಡ ಸಾಕಷ್ಟು ಪ್ರಾಣಹಾನಿ ಹಾಗೂ ಸಂಪನ್ಮೂಲಗಳ ನಷ್ಟವನ್ನು ಅನುಭವಿಸಬೇಕಾಯಿತು. ಅಲ್ಲದೇ ಆ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿ ಅಲ್ಲಿನ ತೈಲ ಸಂಪತ್ತಿನ ಮೇಲೆ ಹಿಡಿತ ಸಾಧಿಸುವ ಅವುಗಳ ಬಯಕೆಗಳು ಈಗಲೂ ಈಡೇರದೇ ಹೋಗಿವೆ.

ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಹಾಗೂ ಪೆಂಟಗನ್ ಮೇಲಿನ ದಾಳಿಯ ಹೊಣೆ ಹೊರಿಸಿ ಪಾಕಿಸ್ತಾನದ ಒಬಾಟಾಬಾದ್‌ನಲ್ಲಿದ್ದ ಉಸಾಮಾ ಬಿನ್ ಲಾದೆನ್‌ನನ್ನು ಮೇ 2, 2011ರಂದು ಅಮೆರಿಕ ಕೊಂದು ಹಾಕಿತು. ಅಲ್ಲಿ ಪಾಕಿಸ್ತಾನದ ಸಾರ್ವಭೌಮತ್ವವನ್ನು ಅಮೆರಿಕ ಗಣನೆಗೇ ತೆಗೆದುಕೊಂಡಿರಲಿಲ್ಲ.

  ‘‘ಕಳೆದ 2019ರ ಜನವರಿ 9ರಂದು ಆ ದಾಳಿಯನ್ನು ನಡೆಸಿದ್ದು ಉಸಾಮಾ ಬಿನ್ ಲಾದೆನ್ ಅಲ್ಲ. ತಪ್ಪುಮಾಹಿತಿಯಿಂದಾಗಿ ಉಸಾಮಾರನ್ನು ಕೊಂದೆವು ನಮ್ಮಿಂದ ತಪ್ಪಾಗಿದೆ’’ ಎಂದು ಕ್ಷಮಾಪಣೆ ಕೇಳಿ ಮಿಲಿಯಾಂತರ ಡಾಲರುಗಳ ನಷ್ಟಪರಿಹಾರವನ್ನು ಉಸಾಮಾ ಬಿನ್ ಲಾದೆನ್ ಕುಟುಂಬಕ್ಕೆ ನೀಡುವುದಾಗಿ ಸಿಐಎಯ ಮೂಲಕ ಬಹಿರಂಗವಾಗಿ ಅಮೆರಿಕ ಹೇಳಿದ್ದ ವರದಿಯೊಂದು ಹರಿದಾಡಿತ್ತು. ಯಾಹೂ ಜಾಲತಾಣ ಕೂಡ ಅದೇ ಸುದ್ದಿಯನ್ನು ಬಿತ್ತರಿಸಿತ್ತು. ನಂತರ ಅದು ಸುಳ್ಳು ವರದಿಯೆಂದೂ, ‘ಆನಿಯನ್’ ಎಂಬ ವ್ಯಂಗ್ಯ ಜಾಲತಾಣದ ಕಲ್ಪಿತ ಸುದ್ದಿಯದು ಎಂದು 2019ರ ಜೂನ್ ತಿಂಗಳಲ್ಲಿ ಒಂದೆರಡು ಜಾಲತಾಣಗಳು ಹೇಳಿದವು.

ಅದೇನೆ ಇರಲಿ ಅಂತಹ ದೊಡ್ಡ ಪ್ರಮಾಣದ ದಾಳಿಯೊಂದನ್ನು ಉಸಾಮಾ ಬಿನ್ ಲಾದೆನ್ ಮತ್ತಾತನ ಸಂಘಟನೆ ನಡೆಸಲು ಸಾಧ್ಯವಿದೆಯೇ ಎಂಬ ಪ್ರಶ್ನೆಯಂತೂ ಈಗಲೂ ಜಗತ್ತಿನ ಸಾಕಷ್ಟು ಜನರಿಗೆ ಕಾಡುತ್ತಿರುವುದು ನಿಜ. ಕಾರಣ ಲಾದೆನ್‌ನ ಅಲ್ ಖಾಯಿದಾಗೆ ಅಮೆರಿಕದಲ್ಲೇ 5 ವಿಮಾನಗಳನ್ನು ಅಪಹರಿಸಿ, ಅದರಲ್ಲಿ ಸ್ಫೋಟಕವಿಟ್ಟುಕೊಂಡು, ಅಲ್ಲಿನ ರಾಡಾರ್ ಜಾಲ ಸೇರಿದಂತೆ ಇನ್ನಿತರ ಭದ್ರತಾ ಜಾಲಗಳನ್ನೆಲ್ಲಾ ಭೇದಿಸಿ ಸರಣಿ ದಾಳಿಗಳನ್ನು ಆ ಮಟ್ಟದಲ್ಲಿ ಸಂಘಟಿಸಲು ಅಮೆರಿಕದ ಆಡಳಿತ ವಲಯದ ಗಟ್ಟಿಬೆಂಬಲವಿಲ್ಲದೆ ಸಾಧ್ಯವಿಲ್ಲವೆಂದು ಸಾಮಾನ್ಯವಾಗಿ ಒಂದಷ್ಟು ಗ್ರಹಿಕೆಯಿರುವವರಿಗೆ ಅನಿಸಲಾರದು. ಮಾಧ್ಯಮಗಳು ಲಾದೆನ್ ಹಾಗೂ ಆತನ ಸಂಘಟನೆ ಬಗ್ಗೆ ಏನೆಲ್ಲಾ ಹೇಳಿದ್ದರೂ ಅವುಗಳಲ್ಲಿ ಹುರುಳಿಲ್ಲದವೇ ಹೆಚ್ಚಿವೆ ಎನ್ನುವುದು ಈಗೀಗ ಸಾಕಷ್ಟು ಜನರಿಗೆ ಅರ್ಥವಾಗಿರುವ ವಿಚಾರ. ಅಮೆರಿಕ ಮತ್ತದರ ಮಿತ್ರಕೂಟ ಇರಾಕಿನಲ್ಲಿ ಸಮೂಹ ನಾಶಕ ರಾಸಾಯನಿಕ ಅಸ್ತ್ರಗಳ ಆರೋಪ ಮಾಡಿದ್ದು ಸುಳ್ಳಾಗಿತ್ತು ಎಂದು ಅದರ ಮಿತ್ರ ಹಾಗೂ ಯುದ್ಧದ ಪಾಲುದಾರ ಯುನೈಟೆಡ್ ಕಿಂಗ್‌ಡಂನ ಪ್ರಧಾನಿಯಾಗಿದ್ದ ಟೋನಿ ಬ್ಲೇರ್ ಬಹಿರಂಗವಾಗಿಯೇ ಹೇಳಿದ್ದರು. ಅವರು ಅದಕ್ಕೆ ಆಂಶಿಕವಾಗಿ ಕ್ಷಮೆಯನ್ನೂ ಕೇಳಿದ್ದರು. ಅಲ್ಲದೇ ಇರಾಕಿನಿಂದ ಯಾವುದೇ ರೀತಿಯ ಸಮೂಹ ನಾಶಕ ರಾಸಾಯನಿಕ ಅಸ್ತ್ರಗಳ ಪತ್ತೆ ಹಚ್ಚಲು ಕೂಡ ಸಾಧ್ಯವಾಗಿರಲಿಲ್ಲ. ಲಿಬಿಯಾದ ಮೇಲಿನ ಅಮೆರಿಕ ಆಕ್ರಮಣಕ್ಕೆ ಲಿಬಿಯಾದ ನಾಗರಿಕರನ್ನು ಗದ್ದಾಫಿ ಸರಕಾರದ ದಾಳಿಗಳಿಂದ ರಕ್ಷಿಸುವ ನೆಪ ಹೇಳಲಾಗಿತ್ತು. ವಾಸ್ತವ ಮಾತ್ರ ಅದಾಗಿರಲಿಲ್ಲ. ಈಗ ಬೊಲಿವಿಯಾದಲ್ಲಿ, ವೆನಜುವೆಲಾದಲ್ಲಿ ಅಮೆರಿಕ ಇವೇ ನೆಪ ಹೇಳುತ್ತಾ ತನ್ನ ಹಸ್ತಕ್ಷೇಪ ಮಾಡುತ್ತಿದೆ. ಅವೆಲ್ಲವೂ ಸುಳ್ಳು ಎನ್ನುವುದು ಅಮೆರಿಕದ ಆಡಳಿತದ ಇತಿಹಾಸವೇ ಹೇಳುತ್ತದೆ. ನಂತರ 13 ಡಿಸೆಂಬರ್ 2001ರ ಇಂಡಿಯಾದ ಸಂಸತ್ ಭವನದ ಮೇಲೆ ದಾಳಿಯೊಂದು ನಡೆಯಿತು. ಅಂತಹ ದಾಳಿ ಇಂಡಿಯಾದ ಚರಿತ್ರೆಯಲ್ಲೇ ಮೊದಲಿನದು ಎಂದು ಹೇಳಬಹುದು. ಭಾರೀ ಸ್ಫೋಟಕ ತುಂಬಿದ್ದ ಬಿಳಿಯ ಅಂಬಾಸಿಡರ್ ಕಾರಿನೊಂದಿಗೆ ಐವರು ಭಯೋತ್ಪಾದಕರು ಸಂಸತ್ ಭವನಕ್ಕೆ ನುಗ್ಗಲು ಯತ್ನಿಸಿದಾಗ ಭದ್ರತಾ ಪಡೆಗಳು ತಡೆದರು. ಆಗ ಗುಂಡಿನ ಕಾಳಗ ನಡೆದು ದಾಳಿಗೆ ಬಂದಿದ್ದ ಐವರು, ಒಬ್ಬರು ಉದ್ಯಾನವನ ಪರಿಪಾಲಕ, ಇಬ್ಬರು ಸಂಸತ್ ಭವನದ ಕಾವಲುಗಾರರು, ಒಬ್ಬ ಪತ್ರಕರ್ತ, ಐದು ಜನ ದಿಲ್ಲಿ ಪೊಲೀಸರು, ಒಬ್ಬರು ಸಿಆರ್‌ಪಿಎಫ್ ಮಹಿಳಾ ಪೇದೆ ಸೇರಿದಂತೆ ಒಟ್ಟು 15 ಜನರು ಸಾವಿಗೀಡಾದರು. ದಾಳಿಕೋರರು ಬಳಸಿದ ಕಾರಿನಲ್ಲಿ ಸ್ಫೋಟಕಗಳೊಂದಿಗೆ, ಬಂದೂಕುಗಳು, ಮೊಬೈಲು ಫೋನುಗಳು, ಫೋನ್ ಸಂಖ್ಯೆಗಳು, ಗುರುತಿನ ಚೀಟಿಗಳು, ಒಣಗಿದ ಹಣ್ಣುಗಳು, ಜೊತೆಗೆ ಒಂದು ಪ್ರೇಮಪತ್ರ ಕೂಡ ಇತ್ತೆಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯ ಹೊಣೆ ಲಷ್ಕರೆ ತಯ್ಯಿಬಾ ಹಾಗೂ ಜೈಶೆ ಮುಹಮ್ಮದ್ ಎಂಬ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳದು ಎಂದು ಹೇಳಲಾಯಿತು. ರೂವಾರಿಗಳೆಂದು ಅಫ್ಝಲ್ ಗುರು, ದಿಲ್ಲಿ ವಿವಿಯ ಫ್ರೊಫೆಸರ್ ಎಸ್.ಎ.ಆರ್. ಗೀಲಾನಿ ಮೊದಲಾದವರನ್ನು ಬಂಧಿಸಲಾಯಿತು.

ಈ ಘಟನೆಯ ನಂತರ ದೇಶಾದ್ಯಂತ ಮುಸ್ಲಿಮ್ ವಿರೋಧಿ ಸಮೂಹ ಸನ್ನಿಯನ್ನು ಭಯೋತ್ಪಾದನೆಯ ವಿರುದ್ಧದ ಸಮರದ ಹೆಸರಿನಲ್ಲಿ ವ್ಯಾಪಕವಾಗಿ ಬಿತ್ತಲಾಯಿತು. ಇಂಡಿಯಾ ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಅಮೆರಿಕದ ಜೊತೆಗೂಡಿ ನಿಂತಿತು. ಸಂಸತ್ ಭವನದ ದಾಳಿಕೋರರಲ್ಲಿ ಒಬ್ಬರನ್ನೂ ಕೂಡ ಜೀವಂತವಾಗಿ ಹಿಡಿಯಲಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸಾಂದರ್ಭಿಕ ಸಾಕ್ಷಿಯಿದೆ ಯೆಂದು ತೀರ್ಮಾನಿಸಿ ಆಪಾದಿತರಿಗೆ ಶಿಕ್ಷೆ ವಿಧಿಸಲಾಯಿತು. ಹತ್ತಾರು ತಿಂಗಳು ಕಾರಾಗೃಹದಲ್ಲಿರಬೇಕಾಗಿ ಬಂದ ಎಸ್.ಎ.ಆರ್.ಗೀಲಾನಿಯನ್ನು ಸರ್ವೋಚ್ಚ ನ್ಯಾಯಾಲಯ ಸಾಕ್ಷಿಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿತು. ಗಿಲಾನಿ ಇತ್ತೀಚೆಗೆ ಹೃದಯಾಘಾತದಿಂದ ಸಾವಿಗೀಡಾದರು.

ಸರ್ವೋಚ್ಚ ನ್ಯಾಯಾಲಯ ಅಫ್ಝಲ್ ಗುರುವಿಗೆ ಮರಣ ದಂಡನೆ ಶಿಕ್ಷೆಯನ್ನು ಎತ್ತಿಹಿಡಿಯಿತು. ಆ ದಾಳಿಯ ರೂವಾರಿಯಲ್ಲೊಬ್ಬರೆಂದು ಅಫ್ಝಲ್ ಗುರುವನ್ನು ನೇಣಿಗೇರಿಸಿ ಕೊಲ್ಲಲಾಯಿತು. ನ್ಯಾಯಾಲಯ ಶಿಕ್ಷೆ ನೀಡುವಾಗ ಇಂಡಿಯಾದ ಜನರ ಸಾಮೂಹಿಕ ಆತ್ಮಸಾಕ್ಷಿ (ಅಥವಾ ಬಯಕೆ) (collective conscience)ಯಂತೆ ಪ್ರತ್ಯಕ್ಷ ಸಾಕ್ಷಿಗಳಿಲ್ಲದಿದ್ದರೂ ಸಾಂದರ್ಭಿಕ ಸಾಕ್ಷಿಯನುಸಾರ ಈ ಶಿಕ್ಷೆ ವಿಧಿಸಲಾಗಿದೆ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದ್ದು ಒಂದು ಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿತ್ತು.

ಕೇವಲ ಸಾಂದರ್ಭಿಕ ಸಾಕ್ಷಿಯನ್ನಿಟ್ಟುಕೊಂಡು ವಿವಾದಾಸ್ಪದ ಸಾಮೂಹಿಕ ಆತ್ಮಸಾಕ್ಷಿಯನ್ನು ಮುಂದೊಡ್ಡಿ ಮರಣ ದಂಡನೆಯಂತಹ ಶಿಕ್ಷೆ ನೀಡುವುದು ಸರಿಯೇ ಎನ್ನುವುದು ವಿವಾದದ ಮುಖ್ಯ ವಿಚಾರವಾಗಿತ್ತು. ಸಂಘ ಪರಿವಾರ ಸಹಜವಾಗಿ ಅಂತಹ ಚರ್ಚೆಗಳನ್ನು ಧ್ವೇಷಿಸುತ್ತಾ ಪ್ರಶ್ನೆಗಳನ್ನೆತ್ತಿ ಚರ್ಚಿಸುವವರ ಮೇಲೆ ದೈಹಿಕ ಹಲ್ಲೆಯೂ ಸೇರಿದಂತೆ ದಾಳಿ ಮಾಡುತ್ತಾ ಬಂದಿತ್ತು. ಈಗ ಡಿವೈಎಸ್‌ಪಿ ಶ್ರೇಣಿಯ ಮುಸ್ಲಿಮೇತರ ಅಧಿಕಾರಿಯೊಬ್ಬರು ಉಗ್ರಗಾಮಿ ಚಟುವಟಿಕೆ ನಡೆಸುವವರೊಂದಿಗೆ ಕಾರಿನಲ್ಲಿ ಸಾಗುತ್ತಿದ್ದಾಗ ಬಂಧನಕ್ಕೀಡಾಗಿರುವುದು ಹಳೆಯ ಚರ್ಚೆಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ತಾನು ಅಫ್ಝಲ್ ಗುರುವಿಗೆ ವಶಕ್ಕೆ ಪಡೆದುಕೊಂಡು ಚಿತ್ರಹಿಂಸೆ ನೀಡಿರುವುದನ್ನು ಸಂದರ್ಶನವೊಂದರಲ್ಲಿ ಈ ಅಧಿಕಾರಿಯೇ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಇವೆಲ್ಲ ಬಹಳ ಗಂಭೀರವಾದ ಅನುಮಾನ ಹಾಗೂ ಪ್ರಶ್ನೆಗಳನ್ನು ಸಂಸತ್ ಭವನದ ಮೇಲಿನ ದಾಳಿಯಂತಹ ಘಟನೆಗಳ ಕುರಿತು ಹುಟ್ಟುಹಾಕುವುದು ಸಹಜವೇ ಆಗಿದೆ.

ಕಳೆದ ವರ್ಷ ಕಾಶ್ಮೀರದ ಪುಲ್ವಾಮದಲ್ಲಿ ಭಾರೀ ಭದ್ರತಾ ವಲಯದಲ್ಲೇ ಸುಮಾರು 70ಕ್ಕೂ ಹೆಚ್ಚು ಟ್ರಕ್ಕುಗಳಲ್ಲಿ ಸಂಚರಿಸುತ್ತಿದ್ದ ಭದ್ರತಾ ಪಡೆಗಳ ಮೇಲೆಯೇ ದಾಳಿ ನಡೆದು ಹತ್ತಾರು ಜನರನ್ನು ಕೊಲ್ಲಲಾಯಿತು. ಅದೂ ಕೂಡ ಅನುಮಾನಾಸ್ಪದ ವಿಚಾರವಾಗಿಯೇ ಉಳಿದಿದೆ. ಕೆಲವು ರಾಜಕೀಯ ನಾಯಕರು ಅದನ್ನು ಕೇಂದ್ರ ಸರಕಾರವೇ ಮಾಡಿಸಿ ಜನರನ್ನು ಭಾವೋದ್ರೇಕಗೊಳಿಸಿ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎನ್ನುವಂತಹ ಮಾತುಗಳನ್ನು ಆಡಿದ್ದರು. ಆಯಾ ಸಮಯ ಸಂದರ್ಭಗಳ ಹಿನ್ನೆಲೆಗಳಲ್ಲಿಯೇ ಇವುಗಳನ್ನೆಲ್ಲಾ ವಿಶ್ಲೇಷಿಸಬೇಕಾಗುತ್ತದೆ.

ಡಿವೈಎಸ್‌ಪಿಯನ್ನು ಭಯೋತ್ಪಾದಕರೆಂದು ಹೇಳಲ್ಪಟ್ಟವರ ಜೊತೆಗೆ ಬಂಧನದ ಹಿಂದೆ ಹಲವು ನಿಗೂಢತೆಗಳಿರುವ ಬಗ್ಗೆ ಮೇಲ್ನೋಟಕ್ಕೆ ಗೊತ್ತಾಗುವ ವಿಚಾರ. ಇಂತಹವುಗಳನ್ನು ಮಾಡಬೇಕಾದರೆ ಒಬ್ಬ ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಯೊಬ್ಬರಿಂದ ಮಾತ್ರ ಸಾಧ್ಯವಾಗಲಾರದು ಎನ್ನುವುದು ಕೂಡ ಮೇಲ್ನೋಟದಲ್ಲೇ ಯಾರಿಗಾದರೂ ಗೊತ್ತಾಗುವ ಸಂಗತಿ. ಇವುಗಳ ಹಿಂದಿನ ಶಕ್ತಿಗಳು ಬಹಿರಂಗವಾಗಬೇಕಿದೆ. ದೇಶದ ಜನರು ಇವನ್ನೆಲ್ಲಾ ಅರಿಯಬೇಕಾದುದು ಅತ್ಯಗತ್ಯವಾಗಿದೆ.

ಮಿಂಚಂಚೆ: nandakumarnandana67@gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News