ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್: ಇಂಗ್ಲೆಂಡ್ ಜಯಭೇರಿ

Update: 2020-01-21 03:45 GMT

ಪೋರ್ಟ್ ಎಲಿಝಬೆತ್, ಜ.20: ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿದ ಇಂಗ್ಲೆಂಡ್ ತಂಡ ಪಂದ್ಯವನ್ನು ಇನಿಂಗ್ಸ್ ಹಾಗೂ 53 ರನ್ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

 ಇಂಗ್ಲೆಂಡ್‌ಗೆ ವಿದೇಶದಲ್ಲಿ 500ನೇ ಟೆಸ್ಟ್ ಪಂದ್ಯವನ್ನು ಜಯಿಸಲು ಸೋಮವಾರ ನಾಲ್ಕು ವಿಕೆಟ್‌ಗಳ ಅಗತ್ಯವಿತ್ತು. ಕೇಶವ ಮಹಾರಾಜ್(71) ಹಾಗೂ ಪ್ಯಾಟರ್ಸನ್(39) ಇನಿಂಗ್ಸ್ ಅಂತ್ಯದಲ್ಲಿ ಒಂದಷ್ಟು ಪ್ರತಿರೋಧ ಒಡ್ಡಿದರು. ಈ ಪ್ರತಿರೋಧವನ್ನು ಹಿಮ್ಮೆಟ್ಟಿದ ಇಂಗ್ಲೆಂಡ್ ತಂಡ ಭೋಜನ ವಿರಾಮಕ್ಕೆ 10 ನಿಮಿಷ ಬಾಕಿ ಇರುವಾಗ ಗೆಲುವಿನ ವಿಧಿವಿಧಾನ ಪೂರೈಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 499 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 209 ರನ್ ಗಳಿಸಿ ಆಲೌಟಾಗಿ ಫಾಲೋ-ಆನ್‌ಗೆ ಸಿಲುಕಿತು. ದ್ವಿತೀಯ ಇನಿಂಗ್ಸ್ ನಲ್ಲಿ 237 ರನ್ ಗಳಿಸಿ ಆಲೌಟಾದ ದ.ಆಫ್ರಿಕಾ ಹೀನಾಯವಾಗಿ ಸೋಲೊಪ್ಪಿಕೊಂಡಿತು.

ಕೇಶವ ಮಹಾರಾಜ್(71, 106 ಎಸೆತ, 10 ಬೌಂಡರಿ,3 ಸಿಕ್ಸರ್) ಹಾಗೂ ಚೊಚ್ಚಲ ಪಂದ್ಯ ಆಡಿದ ಪ್ಯಾಟರ್ಸನ್(ಔಟಾಗದೆ 39, 40 ಎಸೆತ, 6 ಬೌಂಡರಿ) ಕೊನೆಯ ವಿಕೆಟ್ ಜೊತೆಯಾಟದಲ್ಲಿ 99 ರನ್ ಗಳಿಸಿ ಟೆಸ್ಟ್ ನಲ್ಲಿ ದಾಖಲೆ ನಿರ್ಮಿಸಿದರು. ಈ ಮೂಲಕ ಇಂಗ್ಲೆಂಡ್ ಬೌಲರ್‌ಗಳಿಗೆ ನಿರಾಸೆವುಂಟು ಮಾಡಿದರು. ದ.ಆಫ್ರಿಕಾವನ್ನು 2ನೇ ಇನಿಂಗ್ಸ್ ನಲ್ಲಿ 237 ರನ್‌ಗೆ ನಿಯಂತ್ರಿಸಿದ ಇಂಗ್ಲೆಂಡ್ 2011ರ ಬಳಿಕ ಮೊದಲ ಬಾರಿ ವಿದೇಶದಲ್ಲಿ ಇನಿಂಗ್ಸ್ ಅಂತರದ ಜಯ ದಾಖಲಿಸಿತು. 9 ವರ್ಷಗಳ ಹಿಂದೆ ಸಿಡ್ನಿಯಲ್ಲಿ ಈ ಸಾಧನೆ ಮಾಡಿತ್ತು.

ಐದನೇ ದಿನವಾದ ಸೋಮವಾರ ದಕ್ಷಿಣ ಆಫ್ರಿಕಾ ತಂಡ 6 ವಿಕೆಟ್ ನಷ್ಟಕ್ಕೆ 102 ರನ್‌ನಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿತು. ಆಟ ಆರಂಭವಾದ ತಕ್ಷಣ ಸ್ಟುವರ್ಟ್ ಬ್ರಾಡ್ ಅವರು ವೆರ್ನಾನ್ ಫಿಲ್ಯಾಂಡರ್(14)ವಿಕೆಟನ್ನು ಪಡೆದು ಶಾಕ್ ನೀಡಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ವಲ್ಲಿ ಪೋಪ್ ಪಂದ್ಯದಲ್ಲಿ ಆರನೇ ಕ್ಯಾಚ್ ಪಡೆದರು.

ಅನುಚಿತ ವರ್ತನೆಯಿಂದಾಗಿ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆಡುವುದರಿಂದ ವಂಚಿತರಾಗಿರುವ ಕಾಗಿಸೊ ರಬಾಡ 24 ಎಸೆತಗಳಲ್ಲಿ 16 ರನ್ ಗಳಿಸಿ ವುಡ್‌ಗೆ ವಿಕೆಟ್ ಒಪ್ಪಿಸಿದರು. ನೊರ್ಟ್ಜೆ(5)ಔಟಾದ ಬಳಿಕ ಪ್ಯಾಟರ್ಸನ್ ಜೊತೆ ಕೈಜೋಡಿಸಿದ ಮಹಾರಾಜ್ ಇಂಗ್ಲೆಂಡ್‌ಗೆ ಗೆಲುವನ್ನು ವಿಳಂಬಗೊಳಿಸಿದರು. ಈ ವೇಳೆ ಮಹಾರಾಜ್ ಟೆಸ್ಟ್‌ನಲ್ಲಿ 2ನೇ ಬಾರಿ ಅರ್ಧಶತಕ ಗಳಿಸಿದರು. ರವಿವಾರ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದ ರೂಟ್ ಇಂದು ಟೆಸ್ಟ್ ನಲ್ಲಿ ಮೊದಲ ಬಾರಿ ಐದು ವಿಕೆಟ್ ಗೊಂಚಲು ಕಬಳಿಸುವ ಪ್ರಯತ್ನದಲ್ಲಿ ಸತತ 10 ಓವರ್‌ಗಳ ಬೌಲಿಂಗ್ ಮಾಡಿದರು. ಆದರೆ, ಅವರಿಗೆ ವಿಕೆಟ್ ದಕ್ಕಲಿಲ್ಲ.

 ರೂಟ್ ಹೊಸ ಚೆಂಡಿನಲ್ಲಿ ತನ್ನ ಅದೃಷ್ಟ ಪರೀಕ್ಷಿಸಲು ಮುಂದಾದರು. ಆದರೆ, ಮಹಾರಾಜ್ ಅವರು ರೂಟ್ ಓವರ್‌ನಲ್ಲಿ ಸತತ ನಾಲ್ಕು ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಸಿಡಿಸಿದರು. ಆ ಬಳಿಕ ಇಂಗ್ಲೆಂಡ್ ನಾಯಕ ಮತ್ತೆ ಬೌಲಿಂಗ್ ಮಾಡಲು ಮುಂದಾಗಲಿಲ್ಲ. ಮಹಾರಾಜ್ 88.5ನೇ ಓವರ್‌ನಲ್ಲಿ ಕರನ್‌ಗೆ ರನೌಟಾಗುವ ಮೂಲಕ ದಕ್ಷಿಣ ಆಫ್ರಿಕಾದ ಹೋರಾಟಕ್ಕೆ ತೆರೆ ಬಿತ್ತು. ದಕ್ಷಿಣ ಆಫ್ರಿಕಾ ಪ್ರಿಟೋರಿಯದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 107 ರನ್ ಅಂತರದಿಂದ ಗೆದ್ದುಕೊಂಡಿತ್ತು. ಆದರೆ, ಕೇಪ್‌ಟೌನ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯವನ್ನು 187 ರನ್‌ನಿಂದ ಗೆದ್ದುಕೊಂಡಿರುವ ಇಂಗ್ಲೆಂಡ್ ತಿರುಗೇಟು ನೀಡಿತು. ಇದೀಗ 3ನೇ ಪಂದ್ಯವನ್ನು ಜಯಿಸಿರುವ ಇಂಗ್ಲೆಂಡ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

ಸರಣಿಯ ನಿರ್ಣಾಯಕ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜೋಹಾನ್ಸ್‌ಬರ್ಗ್‌ನಲ್ಲಿ ಶುಕ್ರವಾರ ಆರಂಭವಾಗಲಿದೆ.

ಚೊಚ್ಚಲ ಶತಕ ಹಾಗೂ ಆರು ಕ್ಯಾಚ್‌ಗಳನ್ನು ಪಡೆದಿರುವ ಒಲಿವೆರ್ ಪೋಪ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್

► ಇಂಗ್ಲೆಂಡ್ ಮೊದಲ ಇನಿಂಗ್ಸ್: 499/9 ಡಿಕ್ಲೇರ್

► ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್: 209 ರನ್‌ಗೆ ಆಲೌಟ್

► ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್: 237 ರನ್‌ಗೆ ಆಲೌಟ್

(ಮಹಾರಾಜ್ 71, ಪ್ಯಾಟರ್ಸನ್ ಔಟಾಗದೆ 39, ಪ್ಲೆಸಿಸ್ 36, ಮಾರ್ಕ್ ವುಡ್ 3-32, ರೂಟ್ 4-87)

► ಪಂದ್ಯಶ್ರೇಷ್ಠ: ಒಲ್ಲಿ ಪೋಪ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News