ಸಿಎಎ-ಎನ್‌ಆರ್‌ಸಿ, ಎನ್ ಪಿಆರ್ ವಿರುದ್ಧ ಶಿವಾಜಿ ನಗರದಲ್ಲಿ ಬೃಹತ್ ಪ್ರತಿಭಟನೆ

Update: 2020-01-21 11:35 GMT

ಬೆಂಗಳೂರು, ಜ.21: ಸಿಎಎ, ಎನ್‌ಆರ್‌ಸಿ, ಎನ್ ಪಿಆರ್ ವಿರೋಧಿಸಿ ಇಲ್ಲಿನ ಶಿವಾಜಿ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.

ಕೇಂದ್ರ ಸರಕಾರದ ಸಂವಿಧಾನ ವಿರೋಧಿ ನೀತಿಯನ್ನು ಖಂಡಿಸಿ ರಸಲ್ ಮಾರುಕಟ್ಟೆ, ಅಂಗಡಿ ಮುಂಗ್ಗಟ್ಟು, ಫುಟ್ಪಾತ್ ವ್ಯಾಪಾರ ಸಂಪೂರ್ಣ ಬಂದ್ ಆಗಿದೆ. ಐದು ಸಾವಿರ ಮಳಿಗೆಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಜಮಾಯಿಸಿದ್ದರು.

ಹಿಂದೂ-ಮುಸ್ಲಿಮ್, ಸಿಖ್-ಬೌದ್ಧ, ದಲಿತ, ದಮನಿತರು, ಆದಿವಾಸಿಗಳು, ಮಹಿಳೆಯರು ಎಲ್ಲರೂ ಒಂದೇ. ನಾವೆಲ್ಲರೂ ಈ ದೇಶದ ನಿವಾಸಿಗಳು. ಈ ದೇಶ ನಮ್ಮದು, ನಮ್ಮ ದೇಶಕ್ಕಾಗಿ ನಾವು ಸಾಯಲು ಸಿದ್ದರಿದ್ದೇವೆ ಎಂದು ಘೋಷಣೆಗಳು ಕೂಗಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಶಾಂತಿಯ ನಾಡು ನಮ್ಮದು, ಭಗತ್ ಸಿಂಗ್, ಅಂಬೇಡ್ಕರ್, ನೆಹರು, ಗಾಂಧಿಯ ಭಾರತ ಇದಾಗಿದೆ. ಇಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ನಮ್ಮ ಹಕ್ಕನ್ನು ಕಸಿಯಲಾಗದು ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಹೋರಾಟಗಾರ ಡಾ.ಎಚ್.ವಿ.ವಾಸು, ಸಿಎಎ-ಎನ್‌ಆರ್‌ಸಿ ಎಲ್ಲರನ್ನೂ ಸಮಾನವಾಗಿ ಕಾಣುವ ಸಂವಿಧಾನಕ್ಕೆ ಕೊಡಲಿ ಪೆಟ್ಟು ನೀಡುವ ಕ್ರಮವಾಗಿದೆ.‌ ಇದರ ವಿರುದ್ಧದ ಧ್ವನಿ ಇನ್ನಷ್ಟು ಹೆಚ್ಚಾಗಬೇಕಿದೆ ಎಂದರು. ಜ.30ಕ್ಕೆ ದೇಶಾದ್ಯಂತ ಮಾನವ ಸರಪಳಿ ಮೂಲಕ ಪ್ರತಿಭಟನೆ ನಡೆಯಲಿದೆ ಎಂದವರು ತಿಳಿಸಿದರು.

ಈ ಸಂವಿಧಾನ ವಿರೋಧಿ ಸಿಎಎ-ಎನ್‌ಆರ್‌ಸಿ ವಿರುದ್ಧ ಇಂದು ದೇಶಾದ್ಯಂತ ಜನರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಆದರೆ, ಬೆಂಗಳೂರಿನ ಸಂಸದನೊಬ್ಬ ಎದೆ ಸೀಳದರೆ ನಾಲ್ಕು ಅಕ್ಷರ ಬರದವರು ಹೋರಾಟ ಮಾಡ್ತಿದಾರೆ ಎಂಬ ಅಸಂಬದ್ಧ ಹೇಳಿಕೆ ನೀಡುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ.ನಾಡಗೌಡ ಮಾತನಾಡಿ, ಹಿಂದೆ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ನಮಗೆ ಅವಕಾಶ ಸಿಕ್ಕಿಲ್ಲ‌. ಆದರೆ, ಈಗ ನಡೆಯುತ್ತಿರುವ ಹೊಸ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾವೆಲ್ಲರೂ ಪಾಲ್ಗೊಳ್ಳುವಂತೆ ಮೋದಿ ಮಾಡಿದ್ದಾರೆ ಎಂದು ಹೇಳಿದರು.

ಪ್ರಧಾನಿ ಮೋದಿಗೆ ಇನ್ನೂ ಭಾರತ ಅರ್ಥವಾಗಿಲ್ಲ. ನಮ್ಮ ದೇಶ ಬಹು ಸಂಸ್ಕೃತಿ, ಆಚಾರ, ವಿಚಾರ, ಧರ್ಮ, ಪೂಜಾ ವಿಧಾನಗಳನ್ನು ಅನುಸರಿಸುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳದೇ, ಜನರನ್ನು ವಿಭಜಿಸುವಂತಹ ಕೆಲಸ ಮಾಡಲು ಹೊರಟಿದ್ದಾರೆ‌ ಎಂದರು.

ಈ ವೇಳೆ ಹಲವು ಮುಸ್ಲಿಮ್ ನಾಯಕರು ಪಾಲ್ಗೊಂಡಿದ್ದರು. ಇಲ್ಲಿನ ಕಂಟೋನ್ಮೆಂಟ್ ನ 9 ಮಾರುಕಟ್ಟೆಗಳು, ಬೀಫ್ ಮಾರುಕಟ್ಟೆ, ತರಕಾರಿ ಹಾಗೂ ಹಣ್ಣು ಮಾರುಕಟ್ಟೆ, ಸಂಜೆ ಬಝಾರ್ ಮಾರುಕಟ್ಟೆ, ಗುಜರಿ ಮಾರುಕಟ್ಟೆ, ಸೆಂಟ್ರಲ್ ಸ್ಟ್ರೀಟ್ ಮಾರುಕಟ್ಟೆ ಸೇರಿದಂತೆ ಇಡೀ ಶಿವಾಜಿ ನಗರ ಹಾಗೂ ಕಂಟೋನ್ಮೆಂಟ್ ಸ್ತಬ್ಧಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News