ಸಿಎಎ-ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ: ಶಿವಾಜಿನಗರದಲ್ಲಿ ಅಘೋಷಿತ ಬಂದ್

Update: 2020-01-21 18:44 GMT

ಬೆಂಗಳೂರು, ಜ.21: ಪೌರತ್ವ (ತಿದ್ದುಪಡಿ) ಕಾಯ್ದೆ, ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ವಿರೋಧಿಸಿ ಶಿವಾಜಿನಗರದಲ್ಲಿ ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.

ಕಂಟೋನ್ಮೆಂಟ್ ಪೀಪಲ್ಸ್ ಫೋರಂ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಸಹಯೋಗದೊಂದಿಗೆ ಆಯೋಜಿಸಿದ್ದ ಪ್ರತಿಭಟನಾ ಪ್ರದರ್ಶನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಇದಕ್ಕೆ ಕಂಟೋನ್ಮೆಂಟ್‌ನ ಸುತ್ತಲಿನ 9 ಮಾರುಕಟ್ಟೆಗಳು, ಶಿವಾಜಿನಗರದ ರಸೆಲ್‌ ಮಾರುಕಟ್ಟೆ, ಬೀಪ್ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಸಂಜೆ ಮಾರುಕಟ್ಟೆ, ಸೆಂಟ್ರಲ್ ಸ್ಟ್ರೀಟ್‌ಮಾರುಕಟ್ಟೆ, ಬಜಾರ್ ಮಾರುಕಟ್ಟೆ ಸೇರಿದಂತೆ ಇಡೀ ಶಿವಾಜಿನಗರವೇ ಸ್ತಬ್ಧಗೊಂಡು, ಅಘೋಷಿತ ಬಂದ್‌ನಂತೆ ಕಾಣುತ್ತಿತ್ತು.

ಹಿಂದೂ-ಮುಸ್ಲಿಮ್, ಸಿಖ್-ಬೌದ್ಧ, ದಲಿತ-ದಮನಿತರು, ಆದಿವಾಸಿಗಳು, ಮಹಿಳೆಯರು ಎಲ್ಲರೂ ಒಂದೇ. ನಾವೆಲ್ಲರೂ ಈ ದೇಶದ ನಿವಾಸಿಗಳು. ಈ ದೇಶ ನಮ್ಮದು, ನಮ್ಮ ದೇಶಕ್ಕಾಗಿ ನಾವು ಸಾಯಲು ಸಿದ್ಧರಿದ್ದೇವೆ ಎಂದು ಘೋಷಣೆಗಳು ಕೂಗಿದರು.

ಶಾಂತಿಯ ನಾಡು ನಮ್ಮದು, ಭಗತ್ ಸಿಂಗ್, ಅಂಬೇಡ್ಕರ್, ನೆಹರು, ಗಾಂಧಿಯ ಭಾರತ ಇದಾಗಿದೆ. ಇಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ನಮ್ಮ ಸಾಂವಿಧಾನಿಕ ಹಕ್ಕನ್ನು ಕಸಿಯಲು ನಾವು ಬಿಡುವುದಿಲ್ಲ ಎಂದು ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಹೋರಾಟಗಾರ ಡಾ.ಎಚ್.ವಿ.ವಾಸು, ಸಿಎಎ, ಎನ್‌ಆರ್‌ಸಿ ಎಲ್ಲರನ್ನೂ ಸಮಾನವಾಗಿ ಕಾಣುವ ಸಂವಿಧಾನಕ್ಕೆ ಕೊಡಲಿ ಪೆಟ್ಟು ನೀಡುವ ಕ್ರಮವಾಗಿದೆ. ಇದರ ವಿರುದ್ಧದ ಧ್ವನಿ ಇಡೀ ದೇಶವೇ ಮಾತನಾಡುತ್ತಿದೆ. ಲಕ್ಷಾಂತರ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

ಇತ್ತೀಚಿಗೆ ಸಿಎಎ ಪರ ಹೋರಾಟದಲ್ಲಿ ಪಾಲ್ಗೊಂಡಿದ್ದ ಸಂಸದ ತೇಜಸ್ವಿ ಸೂರ್ಯ ಎದೆ ಸೀಳಿದರೆ ನಾಲ್ಕು ಅಕ್ಷರವಿಲ್ಲದ ಪಂಚರ್ ಹಾಕುವವರು ಸಿಎಎ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಅಸಂಬದ್ಧ ಹೇಳಿಕೆ ನೀಡಿದ್ದಾರೆ. ನಿಜವಾಗಿಯೂ ಅವರು ದೇಶದ ಆರ್ಥಿಕತೆಯ ವಿರುದ್ಧ ಪಂಚರ್ ಹಾಕ್ತಿದ್ದಾರೆ. ಅಲ್ಲದೆ, ಸಂವಿಧಾನ ನಾಶ ಮಾಡುವುದನ್ನು ತಡೆಯಲು ಪಂಚರ್ ಹಾಕುತ್ತಿದ್ದಾರೆ. ಇವರು ನಿಜವಾದ ದೇಶಪ್ರೇಮಿಗಳು ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ.ನಾಡಗೌಡ ಮಾತನಾಡಿ, ಹಿಂದೆ ನಡೆದ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳಲು ನಮಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ಈಗ ನಡೆಯುತ್ತಿರುವ ಹೊಸ ಸ್ವಾತಂತ್ರ ಸಂಗ್ರಾಮದಲ್ಲಿ ನಾವೆಲ್ಲರೂ ಪಾಲ್ಗೊಳ್ಳುವಂತೆ ಮೋದಿ ಮಾಡಿದ್ದಾರೆ ಎಂದು ನುಡಿದರು.

ಮೌಲ್ವಿ ಝುಲ್ಫಿಕರ್ ನೂರಿ ಮಾತನಾಡಿ, ಕೇಂದ್ರ ಸರಕಾರವು ಬಲವಂತವಾಗಿ ಸಿಎಎ ಹಾಗೂ ಎನ್‌ಆರ್‌ಸಿಯನ್ನು ದೇಶದ ಜನರ ಮೇಲೆ ಹೇರಲು ಮುಂದಾಗಿದೆ. ಇಂದು ಮುಸ್ಲಿಮರು, ನಾಳೆ ದಲಿತರನ್ನು ದೇಶದಿಂದ ಹೊರ ಹಾಕುವ ಹುನ್ನಾರ ಮಾಡಲಾಗಿದೆ. ಸರಕಾರ ಕೂಡಲೇ ಇದನ್ನು ವಾಪಸ್ಸು ಪಡೆಯಬೇಕು. ಪ್ರಧಾನಿ ಮೋದಿ ನಮ್ಮ ಮೇಲೆ ಆಕ್ರಮಣ ಮಾಡುವುದು ನಿಲ್ಲಿಸಬೇಕು. ಇಲ್ಲದಿದ್ದರೆ ನಮ್ಮ ರಕ್ತದಿಂದ ಸಿಂಧೂರ ಇಡಬೇಕಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ಜಮೀರ್ ಪಾಶಾ, ಮೌಲಾನಾ ಇಸ್ಲಾಂ ಅಂಜುಮ್, ವಕೀಲ ನರಸಿಂಹಮೂರ್ತಿ, ಮನೋಹರ್ ಇಲವರ್ತಿ, ಮೌಲಾನಾ ಆಜಾದ್ ನಜ್ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೂರ್ವ ಭಾಗದ ಡಿಸಿಪಿ ಡಾ.ಎಸ್.ಡಿ. ಶರಣಪ್ಪ ನೇತೃತ್ವದಲ್ಲಿ ನೂರಾರು ಜನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News