ಡಾ.ಅಂಬೇಡ್ಕರ್ ಸಂವಿಧಾನ ಸಭೆಗೆ ಆಯ್ಕೆಯಾದ ಬಗೆ

Update: 2020-01-22 03:31 GMT

ಎರಡನೇ ಮಹಾಯುದ್ಧ(1945)ದ ನಂತರ ಭಾರತಕ್ಕೆ ಸ್ವಾತಂತ್ರ್ಯ ಕೊಡುವುದು ನಿರ್ಧಾರವಾಯಿತು. ಅದರಂತೆ ಬ್ರಿಟಿಷರು ಭಾರತದ ಸ್ವಾತಂತ್ರ್ಯ ಮತ್ತು ಅದರ ಪೂರಕ ವಿಚಾರಗಳ ಸಂಬಂಧ ನಿರ್ಧರಿಸಲು ಆಯೋಗವೊಂದನ್ನು ನೇಮಿಸಿ ಕಳುಹಿಸಿತು. ಬ್ರಿಟಿಷ್ ಮಂತ್ರಿಮಂಡಲ(ಕ್ಯಾಬಿನೆಟ್)ದ ಮೂವರು ಮಂತ್ರಿಗಳನ್ನು ಅಂದರೆ ಸರ್ ಸ್ಟಾಫರ್ಡ್ ಕ್ರಿಪ್ಸ್, ಎ.ವಿ.ಅಲೆಕ್ಸಾಂಡರ್ ಮತ್ತು ಲಾರ್ಡ್ ಪೆಥಿಕ್ ಲಾರೆನ್ಸ್‌ರನ್ನು ಒಳಗೊಂಡ ಸಮಿತಿ ಅದಾಗಿದ್ದರಿಂದ ಅದು ಕ್ಯಾಬಿನೆಟ್ ಮಿಷನ್ ಆಯೋಗ ಎಂದೇ ಪ್ರಸಿದ್ಧಿ ಪಡೆದಿತ್ತು. ಅದರಂತೆ ಕ್ಯಾಬಿನೆಟ್ ಮಿಷನ್ ಆಯೋಗ 1946 ಮಾರ್ಚ್ 16ರಂದು ತನ್ನ ಯೋಜನೆಗಳನ್ನು ಘೋಷಿಸಿತು. ಅದರ ಒಂದು ಯೋಜನೆ ಭಾರತವು ತನ್ನದೇ ಆದಂತಹ ಒಂದು ಸಂವಿಧಾನವನ್ನು ಹೊಂದಬೇಕು ಎಂಬುದಾಗಿತ್ತು.

ಬಾಬಾಸಾಹೇಬ್ ಅಂಬೇಡ್ಕರರು ಕ್ಯಾಬಿನೆಟ್ ಮಿಷನ್ ಆಯೋಗದ ಯೋಜನೆಗಳನ್ನು ವಿರೋಧಿಸಿದರು. ಯಾಕೆಂದರೆ ಅದುವರೆಗೆ ಪೂನಾ ಒಪ್ಪಂದ(1932)ದ ಅಡಿಯಲ್ಲಿ ಎಸ್ಸಿ/ಎಸ್ಟಿಗಳಿಗೆ ಸ್ಥಾನ ಮೀಸಲಾತಿ ನೀಡಲಾಗಿತ್ತು. ಆದರೆ ಆ ಸ್ಥಾನ ಮೀಸಲಾತಿ ಪ್ರಾಂತೀಯ ಅಸೆಂಬ್ಲಿಗಳಿಗೆ ಮುಂದುವರಿದಿತ್ತೇ ಹೊರತು ಭಾರತದ ಭವಿಷ್ಯದ ಲೋಕಸಭೆಯಾಗಬಹುದಾದ ಸಂವಿಧಾನ ಸಭೆಗೆ ಕ್ಯಾಬಿನೆಟ್ ಮಿಷನ್ ಆಯೋಗ ಪರಿಶಿಷ್ಟರಿಗೆ ಯಾವುದೇ ಬಗೆಯ ಸ್ಥಾನ ಮೀಸಲಾತಿ ನೀಡಿರಲಿಲ್ಲ. ಆದರೆ ಕ್ಯಾಬಿನೆಟ್ ಮಿಷನ್ ಮುಸ್ಲಿಮರು ಮತ್ತು ಸಿಖ್ಖರಿಗೆ ಅಂತಹ ಸ್ಥಾನ ಮೀಸಲಾತಿ ನೀಡಿತ್ತು. ಇದರ ಅಪಾಯ ಅರಿತ ಅಂಬೇಡ್ಕರರು ಮನವಿ ಮೂಲಕ ಬ್ರಿಟಿಷರಿಗೆ ಎಸ್ಸಿ/ಎಸ್ಟಿಗಳೂ ಕೂಡ ಮುಸ್ಲಿಮರು ಮತ್ತು ಸಿಖ್ಖರಂತೆ ಅಲ್ಪಸಂಖ್ಯಾತರಾಗಿದ್ದಾರೆ ಅವರಿಗೂ ಕೂಡ ಸಂವಿಧಾನ ಸಭೆಯಲ್ಲಿ ಸ್ಥಾನ ಮೀಸಲಾತಿ ನೀಡಿ ಎಂದು ಎಷ್ಟೇ ಕೇಳಿದರೂ, ಅಂದಿನ ಪ್ರಧಾನಿ ಕ್ಲೆಮೆಂಟ್ ಅಟ್ಲಿಯವರಿಗೆ ಪತ್ರ ಬರೆದರೂ ಆಯೋಗ ಅದನ್ನು ಒಪ್ಪಿರಲಿಲ್ಲ. ಬದಲಿಗೆ ಭಾರತದ ಸಂವಿಧಾನ ಸಭೆಗೆ ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರು ಈ ಮೂರೂ ಧರ್ಮಗಳಿಗೆ ಇಷ್ಟಿಷ್ಟು ಎಂದು ಸ್ಥಾನಗಳನ್ನು ನಿರ್ಧರಿಸಿ ಕ್ಯಾಬಿನೆಟ್ ಮಿಷನ್ ಆಯೋಗ ಕೈತೊಳೆದುಕೊಂಡಿತ್ತು. ಎಸ್ಸಿ/ಎಸ್ಟಿಗಳಿಗೆ ಅದು ಕೇಂದ್ರೀಯ ಸಂವಿಧಾನ ಸಭೆಯಲ್ಲಿ ಯಾವುದೇ ಸ್ಥಾನ ಮೀಸಲಾತಿ ನೀಡಿರಲಿಲ್ಲ. ಕ್ಯಾಬಿನೆಟ್ ಮಿಷನ್ ಆಯೋಗದ ಈ ಘೋಷಣೆಯನ್ನು ಅಂಬೇಡ್ಕರರು ‘‘ಅದು ಗಾಂಧೀಜಿಯವರ ಸೂತ್ರದ ಯಥಾವತ್ ಕಾಪಿಯಲ್ಲದೆ ಮತ್ತೇನೂ ಅಲ್ಲ’’ ಎನ್ನುತ್ತಾರೆ (Ambedkar: A critical study by W.N.Kuber, Pp.119). ಏಕೆಂದರೆ 1932ರ ಪೂನಾ ಒಪ್ಪಂದ ಮತ್ತು ದುಂಡುಮೇಜಿನ ಸಭೆಗಳಲ್ಲಿ ಅಸ್ಪಶ್ಯರಿಗೆ ಸ್ಥಾನ ಮೀಸಲಾತಿ ನೀಡಲಾಗಿತ್ತು. ಅದರಲ್ಲೂ ಮುಸ್ಲಿಮರು, ಸಿಖ್ಖರಂತೆ ಅಸ್ಪಶ್ಯ ಸಮುದಾಯಗಳೂ ಅಲ್ಪಸಂಖ್ಯಾತರು ಎಂದು ಗುರುತಿಸಲಾಗಿತ್ತು. ಆದರೆ ಅದನ್ನು ವಿರೋಧಿಸಿ ಗಾಂಧೀಜಿಯವರು ಆಮರಣಾಂತ ಉಪವಾಸ ಸತ್ಯಾಗ್ರಹ ಕುಳಿತದ್ದು ಎಲ್ಲರಿಗೂ ತಿಳಿದಿದೆ. ಈ ನಿಟ್ಟಿನಲ್ಲಿ 1932ರ ಪೂನಾ ಒಪ್ಪಂದದಲ್ಲಿ ಯಶ ಗಳಿಸಲಾಗದ್ದನ್ನು ಗಾಂಧೀಜಿಯವರು 1946ರ ಕ್ಯಾಬಿನೆಟ್ ಮಿಷನ್ ಆಯೋಗದ ಘೋಷಣೆಯಲ್ಲಿ ಗಳಿಸಿದ್ದರು. ಅಂತೆಯೇ ಪರಿಶಿಷ್ಟರಿಗೆ ಸಂವಿಧಾನ ಸಭೆಯಲ್ಲಿ ಯಾವುದೇ ಸ್ಥಾನ ಮೀಸಲಾತಿ ಸಿಗಲಿಲ್ಲ. ಅವರು ಸಾಮಾನ್ಯ ಕ್ಷೇತ್ರಗಳಲ್ಲಿಯೇ ಸ್ಪರ್ಧಿಸುವಂತಹ ಅನಿವಾರ್ಯತೆ ಸೃಷ್ಟಿಯಾಯಿತು. ಇಂತಹ ಸಂದರ್ಭದಲ್ಲಿ ಕ್ಯಾಬಿನೆಟ್ ಮಿಷನ್ ಘೋಷಣೆಗೆ ಅಂಬೇಡ್ಕರರ ವಿರೋಧದ ನಡುವೆಯೂ 1946ರ ಜೂನ್ ತಿಂಗಳಲ್ಲಿ ಸಂವಿಧಾನ ಸಭೆಗೆ ಚುನಾವಣೆಗಳು ನಡೆದವು. ಈಗಿನ ರಾಜ್ಯಸಭಾ ಚುನಾವಣಾ ಮಾದರಿಯಲ್ಲಿ ನಡೆದ ಆ ಚುನಾವಣೆಯಲ್ಲಿ ಅಂಬೇಡ್ಕರರು ತಮ್ಮ ಸ್ವಂತ ಪ್ರಾಂತ ಮುಂಬೈಯಿಂದ ಆಯ್ಕೆಗೊಳ್ಳಲು ಯತ್ನಿಸಿದರಾದರೂ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಜಂಟಿ ಯತ್ನದಿಂದ ಅದು ಸಾಧ್ಯ ಆಗಲಿಲ್ಲ. ಏಕೆಂದರೆ ಸರ್ದಾರ್ ವಲ್ಲಭಭಾಯ್ ಪಟೇಲರು ‘‘ಅಂಬೇಡ್ಕರರು ಆಯ್ಕೆ ಆಗಿ ಬರಲು ಇರುವ ಮುಂಬೈ ಶಾಸನ ಸಭೆಯ ಬಾಗಿಲುಗಳಿರಲಿ ಕಿಟಕಿಗಳು ಕೂಡ ಮುಚ್ಚಿರಬೇಕು. ಆ ಮೂಲಕ ಅಂಬೇಡ್ಕರರು ಸಂವಿಧಾನ ಸಭೆಗೆ ಆಯ್ಕೆಯಾಗದಂತೆ ನೋಡಿಕೊಳ್ಳಬೇಕು’’ ಎಂದಿದ್ದರು (My experiences and memories of Dr.Babasaheb Ambedkar By Shankarananda Shastri, Pp.40 ). ಈ ಸಂಬಂಧ ಪಟೇಲರು ಉಗ್ರವಾಗಿ ಪ್ರಚಾರ ಕೂಡ ಕೈಗೊಂಡಿದ್ದರು. ಪರಿಣಾಮ ಅಂಬೇಡ್ಕರರು ಮುಂಬೈನಿಂದ ಸಂವಿಧಾನ ಸಭೆಗೆ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳು ಕ್ಷೀಣವಾಗಿದ್ದವು. ಮುಂಬೈ ಇರಲಿ ಕಾಂಗ್ರೆಸ್‌ನ ಇಂತಹ ವಿರೋಧದ ಕಾರಣಕ್ಕೆ ಕಾಂಗ್ರೆಸ್ ಆಡಳಿತ ಇರುವ ಬೇರಾವುದೇ ಪ್ರಾಂತಗಳಿಂದಲೂ ಅವರು ಆಯ್ಕೆಯಾಗುವುದು ಕಷ್ಟವಾಗಿತ್ತು. ಆ ಕಾರಣಕ್ಕೆ ಅವರು ಕಾಂಗ್ರೆಸೇತರ ಸರಕಾರಗಳಿರುವ ಕಡೆ ಚಿತ್ತ ಹರಿಸುವ ಅನಿವಾರ್ಯತೆ ಸೃಷ್ಟಿಯಾಯಿತು. ಅದರಂತೆ 4 ಪ್ರಾಂತಗಳಲ್ಲಿ ಕಾಂಗ್ರೆಸ್ ಆಡಳಿತ ಇರಲಿಲ್ಲ. ಆ ಪ್ರಾಂತಗಳೆಂದರೆ ಪಂಜಾಬ್, ಸಿಂಧ್, ವಾಯುವ್ಯ ಗಡಿ ಪ್ರಾಂತ ಮತ್ತು ಬಂಗಾಳ. ಈ ನಾಲ್ಕು ಪ್ರಾಂತಗಳಲ್ಲೂ ಮುಸ್ಲಿಮ್ ಲೀಗ್ ಅಧಿಕಾರದಲ್ಲಿತ್ತು. ಈ ನಿಟ್ಟಿನಲ್ಲಿ ಈ ನಾಲ್ಕು ಪ್ರಾಂತಗಳಲ್ಲಿ ಬಂಗಾಳದಿಂದ ಆಯ್ಕೆಯಾಗಬಹುದೇ ಎಂದು ಅಂಬೇಡ್ಕರರು ಯೋಚಿಸಿದರು.

ಏಕೆಂದರೆ ಬಂಗಾಳದಿಂದ ಅವರದೇ ಪಕ್ಷ ಪರಿಶಿಷ್ಟ ಜಾತಿಗಳ ಒಕ್ಕೂಟ(ಎಸ್. ಸಿ.ಎಫ್.) ಪಕ್ಷದಿಂದ ನಾಮಶೂದ್ರ ಸಮುದಾಯದ ಜೋಗೇಂದ್ರನಾಥ ಮಂಡಲ್ ಬಂಗಾಳ ಅಸೆಂಬ್ಲಿಗೆ ಆಯ್ಕೆಯಾಗಿದ್ದರು. ಅಂಬೇಡ್ಕರ್‌ರಂತೆ ಬ್ಯಾರಿಸ್ಟರ್ ಪದವೀಧರರಾಗಿದ್ದ ಜೋಗೇಂದ್ರನಾಥ ಮಂಡಲ್ ಬಂಗಾಳದ ಪರಿಶಿಷ್ಟರ ನೇತಾರರೂ ಆಗಿದ್ದರು. ಅಲ್ಲದೆ ಬಂಗಾಳದ ಅಂದಿನ ಮುಸ್ಲಿಮ್‌ಲೀಗ್ ಪಕ್ಷದೊಂದಿಗೆ ಮಂಡಲ್ ಉತ್ತಮ ಬಾಂಧವ್ಯ ಸಹ ಹೊಂದಿದ್ದರು. ಈ ಪರಿಸ್ಥಿತಿಯನ್ನು ಅಂಬೇಡ್ಕರ್ ಬಳಸಿಕೊಳ್ಳಲು ನಿರ್ಧರಿಸಿದರು. ಮುಸ್ಲಿಮ್‌ಲೀಗ್ ಸಹ ಪರಿಶಿಷ್ಟರ ಹಿತರಕ್ಷಣೆಯನ್ನು ತಾನು ಬೆಂಬಲಿಸುವುದಾಗಿ ಭರವಸೆ ನೀಡಿತ್ತು (Ambedkar writings and speeches, Vol.17. Part 2, Pp.241). ಅಂದಹಾಗೆ 1946 ಜೂನ್ ತಿಂಗಳ ಆ ಹೊತ್ತಿನಲ್ಲಿ ಅಂಬೇಡ್ಕರ್ ಬ್ರಿಟಿಷ್ ವೈಸರಾಯ್ ಕೌನ್ಸಿಲ್‌ನಲ್ಲಿ ಮಂತ್ರಿಯಾಗಿದ್ದರು. ಹಾಗಿದ್ದರೂ ಮೊದಲೇ ಹೇಳಿದಂತೆ ಕ್ಯಾಬಿನೆಟ್ ಮಿಷನ್ ಆಯೋಗ ಪರಿಶಿಷ್ಟರ ಹಕ್ಕುಗಳನ್ನು ನಿರ್ಲಕ್ಷಿಸಿದ್ದಕ್ಕೆ ಅವರು ಆಕ್ರೋಶಗೊಂಡಿದ್ದರು. ಇಂತಹ ಆಕ್ರೋಶದ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಮಿಷನ್, ಆ ಮೂಲಕ ಕಾಂಗ್ರೆಸ್, ಆ ಮೂಲಕ ಹಿಂದೂಗಳ ವಿರುದ್ಧ ದೇಶದಾದ್ಯಂತ ಸತ್ಯಾಗ್ರಹಕ್ಕೆ ಅವರು ಕರೆ ನೀಡಿದ್ದರು. ಇದರ ಭಾಗವಾಗಿ ಅವರು ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲಿ, ವಿರೋಧ ಪಕ್ಷದ ನೇತಾರ ವಿನ್‌ಸ್ಟನ್ ಚರ್ಚಿಲ್... ಹೀಗೆ ಎಲ್ಲರಿಗೂ ಪತ್ರ ಬರೆದು ತಮ್ಮ ಆಕ್ರೋಶವನ್ನು ಹೊರಗೆಡಹಿದ್ದರು.

ಈ ನಡುವೆ ಸಂವಿಧಾನ ಸಭೆಗೆ ಆಯ್ಕೆಯಾಗಲೇ ಬೇಕು ಎಂಬ ದೃಢ ಸಂಕಲ್ಪಹೊಂದಿದ್ದ ಅವರು 1946 ಜೂನ್ 30ರಂದು ವೈಸ್‌ರಾಯ್ ಕೌನ್ಸಿಲ್‌ಗೆ ರಾಜೀನಾಮೆ ಇತ್ತು ಸೀದಾ ಕೋಲ್ಕತಾಗೆ ತೆರಳಿದರು. (ಶಂಕರಾನಂದ ಶಾಸ್ತ್ರಿ, ಪು.40). ಸಂವಿಧಾನ ಸಭೆಗೆ ಆಯ್ಕೆಯಾಗದಿರುವುದರ ಬಗ್ಗೆ ಅಂಬೇಡ್ಕರರಿಗೆ ಆತಂಕವಿತ್ತು. ಹೇಗೆಂದರೆ ಸಂವಿಧಾನ ಸಭೆಯಲ್ಲಿ ಹಿಂದೂ ಜಾತಿವಾದಿಗಳು ಡಾಮಿನೆಂಟ್ ಮಾಡುವರು. ಆ ಮೂಲಕ ಅದುವರೆಗೆ ಪೂನಾ ಒಪ್ಪಂದದ ಮೂಲಕ ತಾವು ಗಳಿಸಿದ್ದ ಅಸ್ಪಶ್ಯರ ರಕ್ಷಣೆಗೆ ಇದ್ದ ಹಕ್ಕುಗಳನ್ನು ಅವರು ಕಸಿದುಕೊಳ್ಳುವರು ಎಂದು. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.17, ಭಾಗ 2, ಪು.275). ‘‘ಆ ಕಾರಣಕ್ಕಾಗಿ ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಂವಿಧಾನಿಕ ಮಾರ್ಗದಲ್ಲಿ ಮುನ್ನಡೆಯುವೆ. ಅಕಸ್ಮಾತ್ ಸಾಂವಿಧಾನಿಕ ಮಾರ್ಗ ವಿಫಲವಾದರೆ ನಂತರವಷ್ಟೇ ಇತರ ಮಾರ್ಗಗಳ ಬಗ್ಗೆ ಚಿಂತಿಸುವೆ’’ ಎಂದು ಅವರು ಪತ್ರಕರ್ತರ ಜೊತೆಯೂ ಹೇಳಿಕೊಂಡಿದ್ದರು (ಟೈಮ್ಸ್ ಆಫ್ ಇಂಡಿಯಾ, 1946, ನವೆಂಬರ್ 16). ಈ ನಿಟ್ಟಿನಲ್ಲಿ ಕೋಲ್ಕತಾಗೆ ಬಂದ ಅವರು ಮೊದಲಿಗೆ ಯೂರೋಪಿಯನ್ ಸದಸ್ಯರನ್ನು ತಮ್ಮ ಪರ ಮತ ಚಲಾಯಿಸುವಂತೆ ಕೋರಿದರು. ಆದರೆ ಯೂರೋಪಿಯನ್ ಸದಸ್ಯರು ತಾವು ಮತದಾನದಿಂದ ದೂರ ಉಳಿಯಲು ನಿರ್ಧರಿಸಿರುವುದಾಗಿ ತಿಳಿಸಿದಾಗ ಅಂಬೇಡ್ಕರ್‌ರವರು ತಮ್ಮ ಪಕ್ಷ ಪರಿಶಿಷ್ಟ ಜಾತಿಗಳ ಒಕ್ಕೂಟ(ಎಸ್.ಸಿ.ಎಫ್.) ದಿಂದ ಬಂಗಾಳ ಶಾಸನಸಭೆಗೆ ಗೆದ್ದಿದ್ದ ಅಲ್ಲಿನ ಮುಖಂಡ, ಅದರಲ್ಲೂ ಅಲ್ಲಿನ ಬಹುಸಂಖ್ಯಾತ ಪರಿಶಿಷ್ಟ ಸಮುದಾಯ ನಾಮಶೂದ್ರ ಸಮುದಾಯದ ನೇತಾರ ಮಹಾಪ್ರಾಣ್ ಬ್ಯಾರಿಸ್ಟರ್ ಜೋಗೇಂದ್ರನಾಥ್ ಮಂಡಲ್‌ರಿಗೆ ತಾನು ಸಂವಿಧಾನ ಸಭೆಗೆ ಆಯ್ಕೆಯಾಗಲೇಬೇಕಾದ ಅನಿವಾರ್ಯತೆಯನ್ನು ಮನವರಿಕೆಮಾಡಿಕೊಟ್ಟಾಗ, ಅಂಬೇಡ್ಕರ್‌ರ ಅಸಹಾಯಕತೆಯನ್ನು ಅರ್ಥಮಾಡಿಕೊಂಡ ಅಂಬೇಡ್ಕರ್‌ರ ಅಪ್ಪಟ ಅನುಯಾಯಿಯಾದ ಮಂಡಲ್‌ರವರು ಬಾಬಾಸಾಹೇಬರನ್ನು ತಾನು ಬಂಗಾಳದಿಂದಲೇ ಆಯ್ಕೆಮಾಡುವೆನು ಎಂದು ದೃಢ ನಿಶ್ಚಯ ವ್ಯಕ್ತಪಡಿಸಿದರು. ಅಂತೆಯೇ ಬಂಗಾಳದ ಜೈಸೂರ್ ಮತ್ತು ಕುಲ್ನಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅವರು ಅಂಬೇಡ್ಕರ್‌ರನ್ನು ಕೇಳಿಕೊಂಡರು.

ಮಂಡಲ್‌ರವರು ಅಂಬೇಡ್ಕರ್‌ರವರನ್ನು ಹೀಗೆ ಗೆಲ್ಲಿಸುವ ನಿರ್ಧಾರ ಕೈಗೊಂಡಾಗ, ಆಗ ಚುನಾವಣೆಗೆ ಮೂರು ವಾರಗಳಷ್ಟೇ ಬಾಕಿ ಇತ್ತು. ಅದರಂತೆ ಡಾ.ಅಂಬೇಡ್ಕರ್ ಅವರಿಂದ ನಾಮಪತ್ರಕ್ಕೆ ಸಹಿ ಪಡೆದ ಶಾಸಕ ಜೋಗೇಂದ್ರನಾಥ್ ಮಂಡಲ್ ಅವರು ಸ್ವತಃ ಅವರೇ ಅಂಬೇಡ್ಕರರ ಉಮೇದುವಾರಿಕೆಯನ್ನು ಸೂಚಿಸಿದರೆ ಮತ್ತೊಬ್ಬ ಶಾಸಕರಾದ ಅದರಲ್ಲೂ ಕಾಂಗ್ರೆಸ್ ಪಕ್ಷದಿಂದಲೇ ಗೆದ್ದಿದ್ದ ಗಯಾನಾಥ್ ಬಿಸ್ವಾಸ್ ಅಂಬೇಡ್ಕರರ ಉಮೇದುವಾರಿಕೆಯನ್ನು ಅನುಮೋದಿಸಿದರು. ನಾಮಪತ್ರ ಸಲ್ಲಿಕೆಯ ಈ ಪ್ರಕ್ರಿಯೆ ಮುಗಿದಂತೆ ಜೋಗೇಂದ್ರನಾಥ್ ಮಂಡಲ್ ಮತ್ತು ಅವರ ಇತರ ಅನುಯಾಯಿಗಳು ಪರಿಶಿಷ್ಟಜಾತಿಗೆ ಸೇರಿದ ಎಲ್ಲಾ ಶಾಸಕರ ಮನೆಗೂ ಭೇಟಿ ನೀಡಿ ಅವರನ್ನು ಅಂಬೇಡ್ಕರರ ಪರ ಮತ ಚಲಾಯಿಸುವಂತೆ ಮನವೊಲಿಸಲು ಮುಂದಾದರು ಮತ್ತು ಪಕ್ಷಾತೀತವಾಗಿ ಅಂಬೇಡ್ಕರರನ್ನು ಸಂವಿಧಾನ ಸಭೆಗೆ ಆಯ್ಕೆಗೊಳಿಸಲೇಬೇಕಾದ ಅನಿವಾರ್ಯತೆಯನ್ನು ಅವರಿಗೆಲ್ಲ ಜೋಗೇಂದ್ರನಾಥ್ ಮಂಡಲ್ ಮತ್ತು ಮಿತ್ರರು ಮನವರಿಕೆಮಾಡಿಕೊಟ್ಟರು. (ಮಹಾಪ್ರಾಣ್ ಶ್ರೀ ಜೋಗೇಂದ್ರನಾಥ್ ಮಂಡಲ್, ಲೇಖಕರು: ನಾಗ ಸಿದ್ಧಾರ್ಥ ಹೊಲೆಯಾರ್, ಪುಟ: 44ರಿಂದ 46).

ಮೊದಲೇ ಹೇಳಿದಂತೆ ಈಗಿನ ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆ ಮಾಡುವ ಮಾದರಿಯಲ್ಲಿ ನಡೆದ ಆ ಚುನಾವಣೆಯಲ್ಲಿ ಸಂವಿಧಾನಸಭೆಗೆ ಅಭ್ಯರ್ಥಿಯೊಬ್ಬ ಗೆಲ್ಲಲು ಕನಿಷ್ಠ 5 ಮತಗಳನ್ನು ಗಳಿಸಬೇಕಿತ್ತು. ಈ ನಿಟ್ಟಿನಲ್ಲಿ ಜೋಗೇಂದ್ರನಾಥ್ ಮಂಡಲ್ ಮತ್ತು ಸ್ನೇಹಿತರು ಅಂಬೇಡ್ಕರ್‌ರ ಪರ ಚುನಾವಣಾ ಪ್ರಚಾರಕ್ಕೆ ಹೊರಟಾಗ ರಂಗ್‌ಪುರ ಕ್ಷೇತ್ರದ ಪಕ್ಷೇತರ ಶಾಸಕ ಪರಿಶಿಷ್ಟ ಜಾತಿಯಲ್ಲಿ ಬರುವ ರಾಜವಂಶಿ ಸಮುದಾಯಕ್ಕೆ ಸೇರಿದ ನಾಗೇಂದ್ರ ನಾರಾಯಣರಾವ್ ತಾನು ಅಂಬೇಡ್ಕರ ಪರವಾಗಿ ಮತ ಚಲಾಯಿಸುವುದಾಗಿ ಪ್ರಪ್ರಥಮವಾಗಿ ಘೋಷಿಸಿದರು. ಆ ಮೂಲಕ ಮಂಡಲ್‌ರವರಿಗೆ ಅಂಬೇಡ್ಕರರ ಪರ ಮೊದಲ ಯಶಸ್ಸು ಸಿಕ್ಕಿತ್ತು. ಈ ಹಂತದಲ್ಲಿ ಬೆಚ್ಚಿಬಿದ್ದಿತು. ಹೇಗೆಂದರೆ ಕಾಂಗ್ರೆಸ್ ಅಂಬೇಡ್ಕರರ ಗೆಲುವನ್ನು ತಡೆಯಲು ತನ್ನೆಲ್ಲಾ ಸದಸ್ಯರಿಗೆ ವಿಪ್ ಜಾರಿಮಾಡಿ ತನ್ನ ಪಕ್ಷದ ಸದಸ್ಯರನ್ನು ಹೊರತುಪಡಿಸಿ ಬೇರಾರಿಗೂ ಮತ ಚಲಾಯಿಸದಂತೆ ಆದೇಶಿಸಿತು.

ಈ ತಂತ್ರದ ಭಾಗವೋ ಏನೋ ಅಂಬೇಡ್ಕರರ ಉಮೇದುವಾರಿಕೆಯನ್ನು ಅನುಮೋದಿಸಿದ್ದ ಅಂಬೇಡ್ಕರರ ಅನುಯಾಯಿ ಕಾಂಗ್ರೆಸ್ ಪಕ್ಷದ ಶಾಸಕ ಗಯಾನಾಥ್ ಬಿಸ್ವಾಸ್‌ರ ಅಪಹರಣವಾಯಿತು. ಆದರೆ ಬಿಸ್ವಾಸ್‌ರ ಸಂಬಂಧಿಕರೊಬ್ಬರು ಗಯಾನಾಥ್ ಬಿಸ್ವಾಸ್‌ರನ್ನು ಅಪಹರಿಸಿ ಬಚ್ಚಿಟ್ಟಿರುವ ಸ್ಥಳವನ್ನು ಜೋಗೇಂದ್ರನಾಥ್ ಮಂಡಲ್‌ರಿಗೆ ತಿಳಿಸಲಾಗಿ ಈ ಸಂದರ್ಭದಲ್ಲಿ ಅಲ್ಲಿಯ ಮುಸ್ಲಿಮ್ ಲೀಗ್‌ನ ನೆರವು ಪಡೆದ ಮಂಡಲ್‌ರವರು ಅಪಹರಣಗೊಂಡಿದ್ದ ಗಯಾನಾಥ್ ಬಿಸ್ವಾಸ್‌ರನ್ನು ಸುರಕ್ಷಿತವಾಗಿ ವಾಪಸ್ ಕರೆತಂದರು ಮತ್ತು ಅವರನ್ನು ಅಂಬೇಡ್ಕರರ ಪರವಾಗಿಯೇ ಮತ ಚಲಾಯಿಸುವಂತೆ ಮನವೊಲಿಸುವಲ್ಲಿ ಮಂಡಲ್ ಯಶಸ್ವಿಯಾದರು. ಸಂದರ್ಭದಲ್ಲಿ ತಿಳಿಯಲೇಬೇಕಾದ ಒಂದು ವಿಚಾರ. ಅದೆಂದರೆ, ಬಂಗಾಳ ಶಾಸನಸಭೆಗೆ ಆಗ ಪರಿಶಿಷ್ಟ ಜಾತಿಯ ಒಟ್ಟು 25 ಶಾಸಕರು ಆರಿಸಿ ಬಂದಿದ್ದರು. ತಲಾ ಐವರಿಗೆ ಒಬ್ಬರಂತೆ ಆ 25 ಶಾಸಕರಿಂದ 5 ಮಂದಿ ಕೇಂದ್ರೀಯ ಸಂವಿಧಾನಸಭೆಗೆ ಆಯ್ಕೆಯಾಗುವ ಅವಕಾಶವಿತ್ತು. ಆ ನಿಟ್ಟಿನಲ್ಲಿ ಜೈಸೂರ್ ಮತ್ತು ಕುಲ್ನಾ ಕ್ಷೇತ್ರದಿಂದ ಸಂವಿಧಾನಸಭೆಗೆ ಸ್ಪರ್ಧಿಸುವಂತೆ ಮುಸ್ಲಿಮ್‌ಲೀಗ್ ಪಕ್ಷದ ಬೆಂಬಲದ ಮೂಲಕ ನಾಮನಿರ್ದೇಶಿತಗೊಂಡಿದ್ದವರು ಕುಲ್ನಾ ಕ್ಷೇತ್ರದ ಪಕ್ಷೇತರ ಶಾಸಕ ನಾಮಶೂದ್ರ ಸಮುದಾಯದ ಮುಕುಂದ್ ಬಿಹಾರಿ ಮಲ್ಲಿಕ್‌ರವರು. ಆದರೆ ಯಾವಾಗ ಅಂಬೇಡ್ಕರ್‌ರವರು ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ತಿಳಿಯಿತೋ ಆಗ ನಾಮನಿರ್ದೇಶಿತಗೊಂಡಿದ್ದ ಮುಕುಂದ್ ಬಿಹಾರಿ ಮಲ್ಲಿಕ್‌ರವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದು ಅಂಬೇಡ್ಕರರನ್ನು ಬೆಂಬಲಿಸಲು ಮುಂದಾದರು ಮತ್ತು ತಾನು ಹೀಗೆ ಅಂಬೇಡ್ಕರರನ್ನು ಬೆಂಬಲಿಸಲು ನಿರ್ಧರಿಸಿ ರುವ ವಿಷಯವನ್ನು ಸ್ವತಃ ಮಲ್ಲಿಕ್‌ರವರೇ ಮುಸ್ಲಿಮ್‌ಲೀಗ್ ಮುಖಂಡ ಖ್ವಾಜಾ ನಾಝಿಮುದ್ದೀನ್‌ರ ಸಹೋದರ ಖ್ವಾಜಾ ಶಹಾಬುದ್ದೀನ್‌ರ ಮೂಲಕ ಮಂಡಲ್‌ರವರಿಗೆ ತಿಳಿಸುತ್ತಾರೆ. ಆ ಮೂಲಕ 4ನೇ ಮತ ಕೂಡ ಮಲ್ಲಿಕ್‌ರವರ ರೂಪದಲ್ಲಿ ಅಂಬೇಡ್ಕರ್‌ರವರ ಪರ ಖಚಿತಗೊಳ್ಳುತ್ತದೆ. ಇನ್ನು ಗೆಲುವಿಗೆ ಬೇಕಿದ್ದದ್ದು ಒಂದೇ ಮತ! ಅಂದಹಾಗೆ ಆ ಮತವನ್ನು ಕೂಡ ನಾಮಶೂದ್ರ ಸಮುದಾಯದ ಒತ್ತಾಯಕ್ಕೆ ಮಣಿದ ಸ್ವತಃ ಕಾಂಗ್ರೆಸ್‌ನಿಂದ ಗೆದ್ದಿದ್ದ ಶಾಸಕ ದ್ವಾರಕಾನಾಥ್ ಬರೂರಿ ಅವರು ಕೊಡಲು ಮುಂದೆ ಬರುತ್ತಾರೆ. ಒಟ್ಟಾರೆ 1. ಜೋಗೇಂದ್ರನಾಥ್ ಮಂಡಲ್ 2. ಮುಕುಂದ್ ಬಿಹಾರಿ ಮಲ್ಲಿಕ್ 3.ಗಯಾನಾಥ್ ಬಿಸ್ವಾಸ್ 4. ನಾಗೇಂದ್ರ ನಾರಾಯಣರಾವ್ 5. ದ್ವಾರಕಾನಾಥ್ ಬರೂರಿ ಅವರ ಒಟ್ಟು 5 ಪ್ರಥಮ ಪ್ರಾಶಸ್ತ್ಯದ ಮತಗಳ ಮೂಲಕ ಅಂಬೇಡ್ಕರ್‌ರವರ ಗೆಲುವು ಖಚಿತಗೊಳ್ಳುತ್ತದೆ.

ಇದಲ್ಲದೆ ಚುನಾವಣಾ ದಿನ ಅಂದರೆ ಜುಲೈ 29, 1946ರಂದು ಪರಿಶಿಷ್ಟ ಜಾತಿಗಳ ಒಕ್ಕೂಟ(ಎಸ್.ಸಿ.ಎಫ್.) ಪಕ್ಷದ ಯುವ ಮುಖಂಡ ಚುನಿಲಾಲ್ ಬಿಸ್ವಾಸ್ ಬಂಗಾಳದ ಅಸೆಂಬ್ಲಿ ಹೊರಗಡೆ ನಡೆಸಿದ ಅಂತಿಮ ಕ್ಷಣಗಳ ಪ್ರಯತ್ನದ ಫಲವಾಗಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಪರಿಶಿಷ್ಟ ಬುಡಕಟ್ಟು ಸಮುದಾಯದ ಬೀರ್ ಬುರ್ಸಾರವರು ಅಂಬೇಡ್ಕರರ ಪರವಾಗಿ ತಮ್ಮ ಎರಡನೇ ಪ್ರಾಶಸ್ತ್ಯದ ಮತವನ್ನು ಚಲಾಯಿಸುತ್ತಾರೆ. ಹಾಗೆಯೇ ಮತ್ತೋರ್ವ ಕಾಂಗ್ರೆಸ್ ಶಾಸಕ ಪರಿಶಿಷ್ಟ ಜಾತಿಯ (ರಾಜವಂಶಿ) ಕ್ಷೇತ್ರನಾಥ್ ಸಿಂಗ್ ಕೂಡ ತಮ್ಮ ಎರಡನೇ ಪ್ರಾಶಸ್ತ್ಯದ ಮತವನ್ನು ಅಂಬೇಡ್ಕರರ ಪರ ಚಲಾಯಿಸುತ್ತಾರೆ. ಅಂತಿಮವಾಗಿ ಅಂಬೇಡ್ಕರ್‌ರವರು ಎಲ್ಲರಿಗಿಂತ ಅತಿ ಹೆಚ್ಚು ಒಟ್ಟು 7 ಮತಗಳನ್ನು ಪಡೆಯುವ ಮೂಲಕ 5 ಮತಗಳನ್ನು ಪಡೆದಿದ್ದ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸುಭಾಷ್ ಚಂದ್ರ ಬೋಸ್‌ರ ತಮ್ಮ ಶರತ್ ಚಂದ್ರ ಬೋಸ್‌ರನ್ನು 2 ಮತಗಳ ಅಂತರದಿಂದ ಸೋಲಿಸುತ್ತಾರೆ.

ವಾಸ್ತವವಾಗಿ ಬಾಬಾಸಾಹೇಬ್ ಅಂಬೇಡ್ಕರರು ಕೇವಲ 6 ಮತ ಪಡೆದಿದ್ದರೂ ಸಾಕಿತ್ತು. ಆದರೆ ನಾಮಶೂದ್ರ ಮತ್ತು ರಾಜವಂಶಿ ಪರಿಶಿಷ್ಟ ಜಾತಿಗಳ ಕಡೆಯಿಂದ 6 ಮತ ಮತ್ತು ಪರಿಶಿಷ್ಟ ಬುಡಕಟ್ಟಿನ ಒಬ್ಬ ಸದಸ್ಯನಿಂದ 1 ಮತ, ಒಟ್ಟಾರೆ ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಬುಡಕಟ್ಟು(ಎಸ್ಟಿ) ಸದಸ್ಯರ ಒಗ್ಗಟ್ಟಿನಿಂದ ಅವರು ತಮ್ಮ ಗೆಲುವಿಗೆ ಅಗತ್ಯವಿದ್ದ ಮತಕ್ಕಿಂತ 1 ಮತ ಹೆಚ್ಚು ಪಡೆದಿದ್ದರು! ಹಾಗೆಯೇ ಅಂಬೇಡ್ಕರರು ಪಡೆದಿದ್ದ ಆ 7 ಮತಗಳು ಅಂದು ಬಂಗಾಳದ ಯಾವುದೇ ಕ್ಷೇತ್ರದಲ್ಲಿ ಸದಸ್ಯನೊಬ್ಬ ಪಡೆದಿದ್ದ ಮತಗಳಲ್ಲೇ ಅತಿ ಹೆಚ್ಚು ಮತವಾಗಿತ್ತು. ಈ ನಿಟ್ಟಿನಲ್ಲಿ ಈ ಪರಿಯ ಅಭೂತಪೂರ್ವ ಗೆಲುವಿನ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ 1946 ಜುಲೈ 29ರಂದು ಸಂವಿಧಾನ ಸಭೆಗೆ ಆಯ್ಕೆಗೊಂಡರು.

Writer - ರಘೋತ್ತಮ ಹೊ. ಬ.

contributor

Editor - ರಘೋತ್ತಮ ಹೊ. ಬ.

contributor

Similar News