ನಿಮ್ಮ ನಿಷ್ಕ್ರಿಯತೆ ಪ್ರತಿ ಗಂಟೆಯೂ ಬೆಂಕಿಗೆ ತುಪ್ಪ ಎರೆಯುತ್ತಿದೆ

Update: 2020-01-22 16:28 GMT

ಡಾವೋಸ್ (ಸ್ವಿಟ್ಸರ್‌ಲ್ಯಾಂಡ್), ಜ. 22: ನಮ್ಮ ಮನೆ ಈಗಲೂ ಹೊತ್ತಿ ಉರಿಯುತ್ತಿದೆ ಎಂದು ಸ್ವೀಡನ್ ‌ನ ಹದಿಹರಯದ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್ ‌ಬರ್ಗ್ ಮಂಗಳವಾರ ಜಗತ್ತನ್ನು ಎಚ್ಚರಿಸಿದ್ದಾರೆ.

 ಸ್ವಿಟ್ಸರ್‌ ಲ್ಯಾಂಡ್‌ ನ ಡಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಭಾವಿ ಭಾಷಣ ಮಾಡಿದ 17 ವರ್ಷದ ಗ್ರೆಟಾ, ‘‘ನಿಮ್ಮ ನಿಷ್ಕ್ರಿಯತೆಯು ಗಂಟೆ ಗಂಟೆಗೂ ಜ್ವಾಲೆಗಳಿಗೆ ತುಪ್ಪ ಸುರಿಯುತ್ತಿದೆ. ನಿಮ್ಮ ಮಕ್ಕಳನ್ನು ನೀವು ಬೇರೆ ಎಲ್ಲದಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತೀರಿ ಎಂದು ನಾವು ಭಾವಿಸುತ್ತೇವೆ. ಹಾಗಾಗಿ, ಬೆಂಕಿಯನ್ನು ನಂದಿಸಲು ಕ್ರಮ ತೆಗೆದುಕೊಳ್ಳಿ ಎಂದು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ’’ ಎಂದು ಹೇಳಿದರು.

‘‘ಜಾಗತಿಕ ತಾಪಮಾನವನ್ನು ನಿಭಾಯಿಸಲು ವಿಫಲವಾಗಿರುವುದಕ್ಕೆ ಹಾಗೂ ಗೊತ್ತಿದ್ದೇ ನಿಮ್ಮ ಮಕ್ಕಳು ಈ ಪರಿಸರ ವಿಪ್ಲವವನ್ನು ಎದುರಿಸುವಂತೆ ಮಾಡಿರುವುದಕ್ಕಾಗಿ ನಾಳೆ ನೀವು ನಿಮ್ಮ ಮಕ್ಕಳಿಗೆ ಏನು ಕಾರಣ ಕೊಡುತ್ತೀರಿ’’ ಎಂದು ಅವರು ಸಭಿಕರನ್ನು ಪ್ರಶ್ನಿಸಿದರು.

‘‘ಒಂದು ವರ್ಷದ ಹಿಂದೆ ನಾನು ಡಾವೋಸ್‌ಗೆ ಬಂದು, ನಮ್ಮ ಮನೆಗೆ ಬೆಂಕಿ ಬಿದ್ದಿದೆ ಎಂದು ನಿಮಗೆ ಹೇಳಿದೆ. ನೀವು ಗಾಬರಿಗೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ನಾನು ನಿಮಗೆ ಹೇಳಿದೆ. ಆದರೆ ಪರಿಸರ ಬಿಕ್ಕಟ್ಟಿನ ಬಗ್ಗೆ ಗಾಬರಿಗೊಳ್ಳುವಂತೆ ಜನರಿಗೆ ಹೇಳುವುದು ಅತ್ಯಂತ ಅಪಾಯಕಾರಿ ಎಂಬುದಾಗಿ ನನಗೆ ಎಚ್ಚರಿಕೆ ನೀಡಲಾಗಿದೆ’’ ಎನ್ನುತ್ತಾ ಅವರು ತನ್ನ 8 ನಿಮಿಷಗಳ ಭಾಷಣವನ್ನು ಆರಂಭಿಸಿದರು.

 ‘‘2050 ಅಥವಾ 2060 ಅಥವಾ 2021ರಲ್ಲಿ ನಮಗೆ ಬದಲಾವಣೆ ಬೇಕಿಲ್ಲ. ಆ ಬದಲಾವಣೆಯು ಈಗ ಆಗಬೇಕೆಂದು ನಾವು ಬಯಸುತ್ತೇವೆ. ಹಾಗಾಗಿ, ಒಂದೋ ನೀವು ಇದನ್ನು ಮಾಡಬೇಕು ಅಥವಾ ಪರಿಸರದ ಉಷ್ಣತೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ತಗ್ಗಿಸುವ ಗುರಿಯನ್ನು ನೀವು ಯಾಕೇ ತ್ಯಜಿಸಿದಿರಿ ಎನ್ನುವುದಕ್ಕೆ ನಿಮ್ಮ ಮಕ್ಕಳಿಗೆ ವಿವರಣೆ ನೀಡಬೇಕಾಗುತ್ತದೆ’’ ಎಂದು ‘ಟೈಮ್’ ವರ್ಷದ ವ್ಯಕ್ತಿ ಗ್ರೆಟಾ ತನ್ನ ಭಾಷಣದಲ್ಲಿ ಹೇಳಿದರು.

ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ನಡೆದ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಶೃಂಗ ಸಮ್ಮೇಳನದಲ್ಲಿ, ‘‘ಮಕ್ಕಳ ಭವಿಷ್ಯವನ್ನು ಹಾಳುಗೆಡವಲು ನಿಮಗೆಷ್ಟು ಧೈರ್ಯ?’’ ಎಂದು ಭಾವನಾತ್ಮಕವಾಗಿ ಜಾಗತಿಕ ನಾಯಕರನ್ನು ಪ್ರಶ್ನಿಸುವ ಮೂಲಕ ಗ್ರೆಟಾ ತನ್‌ಬರ್ಗ್ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೆ ಬಂದಿದ್ದಾರೆ.

ಮರ ನೆಟ್ಟರೆ ಸಾಕಾಗುವುದಿಲ್ಲ

ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಮರ ನೆಟ್ಟರೆ ಸಾಕಾಗುವುದಿಲ್ಲ ಎಂದು ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್ ಮಂಗಳವಾರ ಹೇಳಿದ್ದಾರೆ. ಒಂದು ಲಕ್ಷ ಕೋಟಿ ಮರಗಳನ್ನು ನೆಡುವ ಕಾರ್ಯಕ್ರಮಕ್ಕೆ ಅಮೆರಿಕ ಸೇರ್ಪಡೆಗೊಳ್ಳುವುದು ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ವೇದಿಕೆಯಲ್ಲಿ ಮಾಡಿರುವ ಘೋಷಣೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

‘‘ಮರಗಳನ್ನು ನೆಡುವುದು ನಿಜವಾಗಿಯೂ ಒಳ್ಳೆಯದು. ಆದರೆ, ಅದು ನಮ್ಮ ಈಗಿನ ಅಗತ್ಯದ ಸಮೀಪವೂ ಬರುವುದಿಲ್ಲ ಹಾಗೂ ಮೂಲ ಪರಿಸರ ವ್ಯವಸ್ಥೆಗೆ ಅದು ಪರ್ಯಾಯವಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News