ಶರಣ್ ಮುನ್ನಡೆ, ಬೋಪಣ್ಣ ಹೊರಕ್ಕೆ

Update: 2020-01-22 18:50 GMT

ಮೆಲ್ಬೋರ್ನ್, ಜ.22: ಭಾರತದ ಡಿವಿಜ್ ಶರಣ್ ಮತ್ತು ಅವರ ನ್ಯೂಝಿಲ್ಯಾಂಡ್‌ನ ಪಾಲುದಾರ ಆರ್ಟೆಮ್ ಸಿಟಾಕ್ ಅವರು ಆಸ್ಟ್ರೇಲಿಯನ್ ಓಪನ್‌ನ ಪುರುಷರ ಡಬಲ್ಸ್ ಪಂದ್ಯಾವಳಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಇದೇ ವೇಳೆ ರೋಹನ್ ಬೋಪಣ್ಣ ಸೋತು ನಿರ್ಗಮಿಸಿದ್ದಾರೆ.

  ಒಂದು ಗಂಟೆ, 28 ನಿಮಿಷಗಳ ಕಾಲ ನಡೆದ ಮುಖಾಮುಖಿಯಲ್ಲಿ ಶರಣ್ ಮತ್ತು ಸಿಟಾಕ್ ಅವರು 6-4, 7-5ರಿಂದ ಪೋರ್ಚುಗಲ್ ಮತ್ತು ಸ್ಪೇನ್‌ನ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಮತ್ತು ಜೊವಾವ್ ಸೂಸಾ ಅವರನ್ನು ಸೋಲಿಸಿದರು.

   ಈ ಜೋಡಿ ಮುಂದಿನ ಪಂದ್ಯದಲ್ಲಿ 10 ನೇ ಶ್ರೇಯಾಂಕದ ಮೇಟ್ ಪ್ಯಾವಿಕ್-ಬ್ರೂನೋ ಸೊರೆಸ್ ಮತ್ತು ಬೆನ್ ಮೊಲಾಕ್ಲಾನ್-ಲ್ಯೂಕ್ ಬಾಂಬ್ರಿಡ್ಜ್ ನಡುವಿನ ಮೊದಲ ಸುತ್ತಿನ ಪಂದ್ಯದಲ್ಲಿ ವಿಜೇತರಾದವರನ್ನು ಎದುರಿಸಲಿದೆ.

ಜಪಾನ್‌ನ ಯಸುಟಕಾ ಉಚಿಯಾಮಾ ಅವರೊಂದಿಗೆ ಕಣಕ್ಕಿಳಿದ ಬೋಪಣ್ಣ ಅಮೆರಿಕದ ಬ್ರಿಯಾನ್ ಸಹೋದರರಾದ ಬಾಬ್ ಮತ್ತು ಮೈಕ್ ಅವರ ಎದುರು 1-6 , 6-3 , 3-6 ಅಂತರದಲ್ಲಿ ಸೋಲು ಅನುಭವಿಸಿದರು. ಒಂದು ಗಂಟೆ, 17 ನಿಮಿಷಗಳ ಇವರ ನಡುವೆ ಹಣಾಹಣಿ ನಡೆಯಿತು.

 ಬೋಪಣ್ಣ ಅವರು ಮಿಶ್ರ ಡಬಲ್ಸ್‌ನಲ್ಲಿ ಆಡಲಿದ್ದಾರೆ. 39 ರ ಹರೆಯ ಬೋಪಣ್ಣ ಮಿಶ್ರ ಡಬಲ್ಸ್ ಪಂದ್ಯಾವಳಿಯಲ್ಲಿ ಸಾನಿಯಾ ಮಿರ್ಝಾ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ.

  ಮಂಗಳವಾರ ಭಾರತದ ಅಗ್ರ ಶ್ರೇಯಾಂಕದ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಪುರುಷರ ಸಿಂಗಲ್ಸ್ ಆರಂಭಿಕ ಸುತ್ತಿನಲ್ಲಿ ಸೋತ ನಂತರ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ನೊವಾಕ್ ಜೊಕೊವಿಕ್ ವಿರುದ್ಧ ಆಡುವ ಅವಕಾಶವನ್ನು ಕಳೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News