ಬ್ಯಾಟ್ ವೇಗವನ್ನು ಸುಧಾರಿಸುವ ಯತ್ನ: ಜೆಮಿಮಾ ರೊಡ್ರಿಗಸ್

Update: 2020-01-22 18:59 GMT

ಮುಂಬೈ, ಜ.22: ಶಕ್ತಿಯ ಕೊರತೆಯನ್ನು ನಿಭಾಯಿಸಲು ಭಾರತದ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ತನ್ನ ಬ್ಯಾಟ್ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಇದು ಮುಂಬರುವ ಮಹಿಳಾ ಟ್ವೆಂಟಿ-20 ವಿಶ್ವಕಪ್‌ನಲ್ಲಿ ದೊಡ್ಡ ಹೊಡೆತಗಳಿಗೆ ನೆರವಾಗಲಿದೆ ಎಂದು ಅವರು ಆಶಿಸಿದ್ದಾರೆ.

  ಮುಂದಿನ ತಿಂಗಳು ಆಸ್ಟ್ರೇಲಿಯದಲ್ಲಿ ಪ್ರಾರಂಭವಾಗುವ ಮರ್ಕ್ಯೂ ಈವೆಂಟ್‌ಗೆ ಮುಂಚಿತವಾಗಿ 19ರ ಹರೆಯದ ಜೆಮಿಮಾ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಲು ಗಮನ ಹರಿಸಿದ್ದಾರೆ.

  ‘‘ನನ್ನ ಬ್ಯಾಟ್ ವೇಗವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇನೆ. ಏಕೆಂದರೆ ನನ್ನ ದೇಹಕ್ಕೆ ಸಿಕ್ಸರ್‌ಗಳನ್ನು ಹೊಡೆಯಲು ಅಷ್ಟೊಂದು ಶಕ್ತಿ ಇಲ್ಲ ಎಂದು ನೀವು ಅಂದುಕೊಳ್ಳಬಹುದು. ಆದರೆ ನಾನು ಸ್ವಲ್ಪ ಸಮಯದವರೆಗೆ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಜೆಮಿಮಾ ರೋಡ್ ಟು ದಿ ಟ್ವೆಂಟಿ-20 ವಿಶ್ವಕಪ್‌ೞಪಾದ್ಕಾಸ್ಟ್‌ನಲ್ಲಿ ಹೇಳಿದರು.

 2018 ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಅವರು ತಂಡದ ಪ್ರಮುಖ ಸದಸ್ಯರಾಗಿ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ನಿರಂತರವಾಗಿ ಶ್ಲಾಘನೀಯ ಪ್ರದರ್ಶನಗಳನ್ನು ನೀಡಿದ್ದಾರೆ.

  ಫೆಬ್ರವರಿ 21ರಂದು ಸಿಡ್ನಿಯಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಭಾರತ ಹಾಲಿ ಚಾಂಪಿಯನ್ ಆಸ್ಟ್ರೇಲಿಯವನ್ನು ಎದುರಿಸಲಿದೆ. ಆತಿಥೇಯರ ವಿರುದ್ಧ ತನ್ನ ತಂಡವು ಮಾನಸಿಕವಾಗಿ ಬಲಶಾಲಿಯಾಗಿರಬೇಕು ಎಂದು ಜೆಮಿಮಾ ಅಭಿಪ್ರಾಯಪಟ್ಟರು.

     ಆಸ್ಟ್ರೇಲಿಯಕ್ಕೆ ಹೋಗುವಾಗ ನೀವು ಉತ್ತಮವಾಗಿರಬೇಕು ಇಲ್ಲದಿದ್ದರೆ ನಿಮಗೆ ಆಡಲು ಅಲ್ಲಿ ಸಾಧ್ಯವಿಲ್ಲ. ಯಾಕೆಂದರೆ ಆಸ್ಟ್ರೇಲಿಯ ಬಲಿಷ್ಠ ತಂಡವಾಗಿದೆ ಎಂದು ಜೆಮಿಮಾ ಹೇಳಿದರು.

ವಿಶ್ವಕಪ್ ಮೊದಲು ಭಾರತವು ಜನವರಿ 31ರಿಂದ ಆತಿಥೇಯ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡದೊಂದಿಗೆ ತ್ರಿರಾಷ್ಟ್ರಗಳ ಸರಣಿಯನ್ನು ಆಡಲಿದೆ. ಆಸೀಸ್ ಸ್ವಾಭಾವಿಕವಾಗಿ ಪ್ರಾಬಲ್ಯ ಹೊಂದಿದೆ ಮತ್ತು ನೀವು ಸ್ವಲ್ಪ ಬಗ್ಗಿದರೆ, ಅವರು ನಿಮ್ಮ ತಲೆಯ ಮೇಲೆ ಕುಳಿತುಕೊಳ್ಳುತ್ತಾರೆ ಮತ್ತು ನಿಮ್ಮನ್ನು ಮೇಲಕ್ಕೆ ಬರಲು ಬಿಡುವುದಿಲ್ಲ. ಆದ್ದರಿಂದ ನೀವು ಅವರನ್ನು ಎದುರಿಸಲು ಅಥವಾ ಅವರ ವಿರುದ್ಧ ಉತ್ತಮವಾಗಿ ಪ್ರದರ್ಶನ ನೀಡಲು ಬಯಸಿದರೆ, ನೀವು ಅತ್ಯುತ್ತಮ ಆಟವನ್ನು ಪ್ರದರ್ಶಿಸಬೇಕಾಗಿದೆ. ನಿಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಬೇಕಾಗಿದೆ ಎಂದು ಅವರು ಹೇಳಿದರು.

 ಭಾರತ ತಂಡಕ್ಕೆ ಆಸ್ಟ್ರೇಲಿಯದಲ್ಲಿ ಹೆಚ್ಚು ಅಭಿಮಾನಿಗಳಿದ್ದಾರೆ ಮತ್ತು ಉತ್ತಮ ಬೆಂಬಲ ದೊರೆಯುವ ನಿರೀಕ್ಷೆಯಿದೆ. ಇದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

 ನಾವು ಎಲ್ಲಿಗೆ ಹೋದರೂ ನಾವು ಭಾರತದ ಅಭಿಮಾನಿಗಳನ್ನು ಮತ್ತು ಬೆಂಬಲಿಗರನ್ನು ಪಡೆಯುತ್ತೇವೆ ಆದ್ದರಿಂದ ನಾವು ಎಂದಿಗೂ ತವರಿನಿಂದ ದೂರವಿದ್ದೇವೆ ಎಂದು ಅನಿಸುವುದಿಲ್ಲ. ನಾವು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಬಯಸುತ್ತೇವೆ. ಇದರಿಂದ ನಮಗೆ ಆಡಲು ಹೆಚ್ಚಿನ ಉತ್ತೇಜನ ದೊರೆಯುತ್ತದೆ ಎಂದರು.

   ವಿಶ್ವಕಪ್‌ನಲ್ಲಿ ಮೊದಲ ಬಾರಿ ಆಡಲಿರುವ ಜೆಮಿಮಾ ಅವರು ಫೈನಲ್‌ನಲ್ಲಿ ಆಡುವುದನ್ನು ಎದುರು ನೋಡುತ್ತಿದ್ದಾಳೆ, ಇದು ಅವರ ಜೀವನದ ಪ್ರಮುಖ ಮೈಲುಗಲ್ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News