ದೇಶವನ್ನು ಛಿದ್ರಛಿದ್ರಗೊಳಿಸುತ್ತಿರುವ ಅಸಲಿ ‘ತುಕ್ಡೇ ತುಕ್ಡೇ ಗ್ಯಾಂಗ್’ ಯಾರು?

Update: 2020-01-24 08:29 GMT

ಭಾಗ-2

ಬ್ರಿಟಿಷರ ಅಡಿಯಾಳಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಬಗೆದ ದ್ರೋಹ

ದ್ವಿತೀಯ ಮಹಾಯುದ್ಧದ ಕಾಲದಲ್ಲಿ ಸಾವರ್ಕರ್‌ರ ಹಿಂದೂ ಮಹಾಸಭಾ ಭಾರತೀಯ ತರುಣರನ್ನು ಬ್ರಿಟಿಷ್ ಸೈನ್ಯಕ್ಕೆ ಭರ್ತಿ ಮಾಡಿಸುವ ದೇಶದ್ರೋಹಿ ಕೆಲಸವನ್ನು ಮಾಡಿದ್ದ ವಿಷಯ ಎಷ್ಟು ಜನರಿಗೆ ಗೊತ್ತಿದೆ? 1941ರಲ್ಲಿ ಭಾಗಲ್ಪುರದಲ್ಲಿ ನಡೆದ 23ನೇ ಹಿಂದೂ ಮಹಾಸಭಾದ ಅಧಿವೇಶನದ ವೇಳೆ ಮಾತನಾಡಿದ ಸಾವರ್ಕರ್, ಹಿಂದೂಗಳನ್ನು ಪ್ರವಾಹೋಪಾದಿಯಲ್ಲಿ ಬ್ರಿಟಿಷ್ ಸೇನೆಗೆ ಸೇರಿಸುವ ಬಲವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕೆಂದು ಸದಸ್ಯರಿಗೆಲ್ಲ ಕರೆನೀಡಿದರು. ನಂತರ ಹಿಂದೂ ಮಹಾಸಭಾದ ವತಿಯಿಂದ ದೇಶದ ಹಲವಾರು ಕಡೆಗಳಲ್ಲಿ ನೇಮಕಾತಿ ಕೇಂದ್ರಗಳನ್ನು ತೆರೆಯಲಾಯಿತು. ಈ ರೀತಿ ಒಂದು ವರ್ಷದಲ್ಲಿ ಸುಮಾರು ಒಂದು ಲಕ್ಷ ಹಿಂದೂಗಳನ್ನು ಬ್ರಿಟಿಷ್ ಸೇನೆಗೆ ಸೇರಿಸಲಾಯಿತು. ಇತ್ತ ಇವರು ಭಾರತೀಯರನ್ನು ಬ್ರಿಟಿಷ್ ಸೇನೆಗೆ ಸೇರಿಸುತ್ತಿದ್ದಾಗ ಅತ್ತ ಬ್ರಿಟಿಷರು ನೇತಾಜಿಯವರ ‘ಆಝಾದ್ ಹಿಂದ್ ಫೌಜ್’ನ ಸಾವಿರಾರು ಭಾರತೀಯ ಯೋಧರ ಮಾರಣಹೋಮ ನಡೆಸಿದರು.

ಜನಾಂಗೀಯವಾದಿಗಳಾದ ಹಿಟ್ಲರ್, ಮುಸ್ಸೋಲಿನಿಗಳನ್ನು ಮೆಚ್ಚಿದ್ದ ಸಾವರ್ಕರ್

1940ರಲ್ಲಿ ಮಧುರೆಯಲ್ಲಿ ನಡೆದ ಹಿಂದೂ ಮಹಾಸಭಾದ ಅಧಿವೇಶನ ದಲ್ಲಿ ಅಧ್ಯಕ್ಷೀಯ ಭಾಷಣ ಮಾಡುತ್ತ ಸಾವರ್ಕರ್ ಹೀಗೆಂದಿದ್ದರು, ‘‘ಹಿಟ್ಲರ್ ತಾನು ನಾಝಿಯೆಂದು ತೋರಿಸಿಕೊಂಡ ಮಾತ್ರಕ್ಕೆ ಆತನನ್ನು ಮಾನವರೂಪದ ಪೆಡಂಭೂತವೆಂದು ಭಾವಿಸಲು ಯಾವ ಕಾರಣವೂ ಇಲ್ಲ. ಜರ್ಮನಿ ಸಿಲುಕಿಕೊಂಡಿದ್ದ ಸನ್ನಿವೇಶಗಳನ್ನು ಪರಿಗಣಿಸಿದಾಗ ಅದನ್ನು ಉಳಿಸಿದ್ದೇ ನಾಝಿ ಸಿದ್ಧಾಂತ ಎನ್ನುವುದರಲ್ಲಿ ಎರಡು ಮಾತಿಲ್ಲ.....’’

ಭಾರತದಲ್ಲಿ ಫ್ಯಾಶಿಸ್ಟ್ ಮತ್ತು ನಾಝಿ ಸಿದ್ಧಾಂತಗಳನ್ನು ಅಳವಡಿಸುವುದಕ್ಕೆ ಪ್ರತಿರೋಧ ಒಡ್ಡಿದ್ದ ನೆಹರೂರನ್ನು ತರಾಟೆಗೆ ತೆಗೆದುಕೊಂಡಿದ್ದ ಸಾವರ್ಕರ್ ‘‘ಜರ್ಮನಿ, ಇಟಲಿ ಮುಂತಾದ ದೇಶಗಳಿಗೆ ಬುದ್ಧಿವಾದ ಹೇಳಲು ನಾವು ಯಾರು. ಜರ್ಮನಿಗೆ ಯಾವುದು ಹಿತಕರ ಎಂಬುದು ನೆಹರೂಗಿಂತ ಚೆನ್ನಾಗಿ ಹಿಟ್ಲರ್‌ಗೇ ಗೊತ್ತು. ನಾಝಿಸಂ ಅಥವಾ ಫ್ಯಾಶಿಸಂನ ಮಂತ್ರದಂಡದಿಂದ ಅವೆರಡು ದೇಶಗಳು ಕಂಡಿರುವ ಅದ್ಭುತ ಪ್ರಗತಿಯೇ ಅವೆರಡು ತತ್ವಗಳು ಅವುಗಳ ಆರೋಗ್ಯಕ್ಕೆ ಅಗತ್ಯವಿದ್ದ ಟಾನಿಕ್ ಎಂಬುದನ್ನು ಖಚಿತಪಡಿಸುತ್ತದೆ’’ ಎಂದಿದ್ದರು.

ಹಿಟ್ಲರ್ ವ್ಯವಸ್ಥಿತವಾಗಿ ನಡೆಸಿದ ಯಹೂದಿಗಳ ಸಾಮೂಹಿಕ ಸಂಹಾರಕ್ಕೆ ಸಾವರ್ಕರ್‌ರ ಪೂರ್ಣ ಸಹಮತವಿತ್ತು. ಭಾರತದ ಅಲ್ಪಸಂಖ್ಯಾತರ ಸಮಸ್ಯೆಗೂ ಅದೇ ರೀತಿಯ ಪರಿಹಾರಗಳನ್ನು ಅನ್ವಯಿಸುವ ಕುರಿತು ಅಕ್ಟೋಬರ್ 14, 1938ರಂದು ಆತ ಸೂಚ್ಯವಾಗಿ ನೀಡಿದ ಸಲಹೆ ಹೀಗಿದೆ: ‘‘ಒಂದು ದೇಶದೊಳಗೆ ಜೀವಿಸುವ ಬಹುಸಂಖ್ಯಾತರಿಂದ ಆ ರಾಷ್ಟ್ರವು ರಚಿಸಲ್ಪಡುತ್ತದೆ. ಜರ್ಮನಿಯ ಯಹೂದಿಗಳೇನು ಮಾಡಿದರು? ಅವರು ಅಲ್ಪಸಂಖ್ಯಾತರಾಗಿದ್ದುದರಿಂದ ಜರ್ಮನಿಯಿಂದ ಹೊರದಬ್ಬಲ್ಪಟ್ಟರು.’’ ಸಾವರ್ಕರ್‌ರ ಸಲಹೆಗೂ ಸಂಘಪರಿವಾರ ಇಷ್ಟು ವರ್ಷಗಳಿಂದ ಅಲ್ಪಸಂಖ್ಯಾತರ ವಿರುದ್ಧ ನಡೆಸಿದ ಹಿಂಸಾಚಾರ ಮತ್ತು ಇದೀಗ ಮೋದಿ ಸರಕಾರ ಜಾರಿಗೊಳಿಸಲು ಹೊರಟಿರುವ ಸಿಎಎ, ಎನ್‌ಆರ್‌ಐಸಿ ಮತ್ತು ಎನ್‌ಪಿಆರ್‌ಗಳ ನೈಜ ಉದ್ದೇಶಕ್ಕೂ ಸಾಮ್ಯಗಳಿಲ್ಲವೇ?

ಗಾಂಧಿ ಹತ್ಯೆಯಲ್ಲಿ ಪಾತ್ರ

ಗಾಂಧಿ ಕೊಲೆಯ ತನಿಖೆ ನಡೆಸಿದ್ದ ಕಪೂರ್ ಆಯೋಗ ‘‘ಈ ಎಲ್ಲಾ ವಾಸ್ತವಾಂಶಗಳನ್ನು ಒಟ್ಟಾಗಿ ಪರಿಗಣಿಸಿದಾಗ ಹತ್ಯೆಯ ಷಡ್ಯಂತ್ರ ನಡೆಸಿರುವುದು ಸಾವರ್ಕರ್ ಮತ್ತಾತನ ತಂಡ ಎಂಬ ಪ್ರಮೇಯವೊಂದನ್ನು ಬಿಟ್ಟು ಮಿಕ್ಕೆಲ್ಲ ಪ್ರಮೇಯಗಳು ಅನೂರ್ಜಿತವಾಗುತ್ತವೆ’’ ಎಂದು ಅಭಿಪ್ರಾಯಪಟ್ಟಿದೆ. ಮಾಫಿಸಾಕ್ಷಿಯಾಗಿದ್ದ ದಿಗಂಬರ್ ಬಾಡ್ಗೆ ನೀಡಿರುವ ಹೇಳಿಕೆಯೂ ಸಾವರ್ಕರ್‌ರ ದೋಷಿತ್ವವನ್ನು ಸಾಬೀತುಪಡಿಸುತ್ತದೆ. ಬಾಡ್ಗೆ ಪ್ರಕಾರ ಆತ ಜನವರಿ 17, 1948ರಂದು ಹಂತಕ ನಾಥೂರಾಮ್ ಗೋಡ್ಸೆ ಮತ್ತು ಸಹಚರ ನಾರಾಯಣ ಆಪ್ಟೆಯರೊಂದಿಗೆ ಸಾವರ್ಕರ್ ಮನೆಗೆ ಹೋಗಿದ್ದ. ಅಲ್ಲಿ ಆತ ಸಾವರ್ಕರ್ ಅವರಿಬ್ಬರಿಗೆ ವಿದಾಯ ಹೇಳುವ ಸಂದರ್ಭದಲ್ಲಿ ‘‘ಜಯಶಾಲಿಗಳಾಗಿ ಮರಳಿ’’ ಎಂದುದನ್ನು ಆಲಿಸಿದ್ದ.

ಸಾವರ್ಕರ್ ಚಿಂತನೆಗಳನ್ನು ಮುಂದುವರಿಸಿದ ಆರೆಸ್ಸೆಸ್

 1925ರಲ್ಲಿ ಸಾವರ್ಕರ್, ಡಾ ಹೆಡ್ಗೆವಾರ್ ಮತ್ತು ಡಾ ಮೂಂಜೆ ಸೇರಿ ಆರೆಸ್ಸೆಸ್ ಸ್ಥಾಪಿಸುವ ನಿರ್ಧಾರ ಕೈಗೊಂಡರು. ಡಾ ಹೆಡ್ಗೆವಾರ್‌ರೇ ಆರೆಸ್ಸೆಸ್‌ನ ಪ್ರಥಮ ಸರಸಂಘಚಾಲಕನಾದರು. ಡಾ ಹೆಡ್ಗೆವಾರ್ ಸಹ ಭಾರತದ ಸ್ವಾತಂತ್ರ್ಯ ಹೋರಾಟವನ್ನು ತೆಗಳುವುದರೊಂದಿಗೆ ಬ್ರಿಟಿಷರನ್ನು ಕೊಂಡಾಡುತ್ತಿದ್ದವರು. ಇದೇ ರೀತಿಯ ನಿಲುವುಗಳನ್ನು ಹೊಂದಿದ್ದ ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಕೂಡ ತನ್ನ ಭಾಷಣಗಳಲ್ಲೆಲ್ಲ ಬ್ರಿಟಿಷ್ ಸರಕಾರವನ್ನೆಂದೂ ನೇರವಾಗಿ ಟೀಕಿಸಿರಲಿಲ್ಲ; ಆರೆಸ್ಸೆಸ್ ಬ್ರಿಟಿಷರ ವಿರೋಧಿಯೆಂದು ಎಂದೂ ಹೇಳಿರಲಿಲ್ಲ. ವಿದೇಶೀ ಆಡಳಿತ ವಿರುದ್ಧದ ಯಾವುದೇ ಚಳವಳಿ ಇರಲಿ, ಅದನ್ನು ವಿರೋಧಿಸುತ್ತಿದ್ದ ಗೋಳ್ವಾಲ್ಕರ್‌ಗೆ ತನ್ನ ಈ ಪ್ರತಿರೋಧವನ್ನು ಬಚ್ಚಿಡಲೂ ಸಾಧ್ಯವಾಗುತ್ತಿರಲಿಲ್ಲ. ಜೂನ್ 8, 1942ರ ತನ್ನ ಭಾಷಣವೊಂದರಲ್ಲಿ ‘‘ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ಕಬಳಿಸುತ್ತವೆಂದು ನಮಗೆ ಗೊತ್ತಿರುವಾಗ ದೊಡ್ಡ ಮೀನುಗಳನ್ನು ದೂರುವುದು ಶುದ್ಧ ತಿಳಿಗೇಡಿತನ..........’’ ಎಂದಿದ್ದರು. ಮುಂದೆ 1947ರ ಮಾರ್ಚ್ ನಲ್ಲಿ ಬ್ರಿಟಿಷರು ಭಾರತ ಬಿಟ್ಟು ತೊಲಗಲು ನಿರ್ಧರಿಸಿದಾಗ ದಿಲ್ಲಿಯಲ್ಲಿ ನಡೆದ ಆರೆಸ್ಸೆಸ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಗೋಳ್ವಾಲ್ಕರ್, ಬ್ರಿಟಿಷರ ರಾಜಾಡಳಿತವನ್ನು ವಿರೋಧಿಸಿದ ನಾಯಕರನ್ನು ಸಂಕುಚಿತ ದೃಷ್ಟಿಯವರೆಂದು ಕರೆದರು.

1960ಲ್ಲಿ ಇಂದೋರ್‌ನಲ್ಲಿ ಮಾಡಿದ ಭಾಷಣವನ್ನು ಗಮನಿಸಿ: ‘‘ಬ್ರಿಟಿಷರನ್ನು ಹೊರಕ್ಕೆಸೆದು ದೇಶವನ್ನು ಮುಕ್ತವಾಗಿಸುವ ಸ್ಫೂರ್ತಿಯಿಂದ ಅನೇಕ ಜನ ದುಡಿದರು. ವಾಸ್ತವದಲ್ಲಿ ಇಷ್ಟೊಂದು ಪ್ರೇರೇಪಣೆಯ ಅಗತ್ಯವೇ ಇರಲಿಲ್ಲ. ನಮ್ಮ ಪ್ರಮಾಣವಚನದಲ್ಲಿ ನಾವು ಧರ್ಮ ಹಾಗೂ ಸಂಸ್ಕೃತಿ ರಕ್ಷಣೆ ಮೂಲಕ ದೇಶದ ಸ್ವಾತಂತ್ರ್ಯದ ಕುರಿತು ಮಾತಾಡಿದ್ದೇವೆಂಬುದನ್ನು ಜ್ಞಾಪಿಸಿಕೊಳ್ಳಬೇಕು. ಅದರಲ್ಲಿ ಬ್ರಿಟಿಷರ ತೊಲಗುವಿಕೆಯ ಪ್ರಸ್ತಾಪ ಬಂದಿಲ್ಲ.’’ ವಸಾಹತುಶಾಹಿ ಯಜಮಾನಿಕೆಯನ್ನು ಒಂದು ಅನ್ಯಾಯವೆಂದು ಪರಿಗಣಿಸಲು ಕೂಡ ಆರೆಸ್ಸೆಸ್ ಸಿದ್ಧವಿರಲಿಲ್ಲ. ಸ್ವಾತಂತ್ರ್ಯ ಹೋರಾಟ ಕಾಲಾವಧಿಯ ರಾಷ್ಟ್ರೀಯತಾವಾದಿ ಪತ್ರಿಕೆಗಳನ್ನೆಲ್ಲ ಅತ್ಯಂತ ಸೂಕ್ಷ್ಮವಾಗಿ ಜಾಲಾಡಿದರೂ ಹಿಂದೂ ಮಹಾಸಭಾ, ಆರೆಸ್ಸೆಸ್‌ಗಳು ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಧನಾತ್ಮಕ ಪಾತ್ರ ವಹಿಸಿದ ಬಗೆಗೆ ಒಂದಕ್ಷರವೂ ಕಾಣಸಿಗುವುದಿಲ್ಲ. ಲಭ್ಯವಿರುವ ಪುರಾವೆಗಳೆಲ್ಲವೂ ಬೆಟ್ಟು ಮಾಡುತ್ತಿರುವುದು ಅವುಗಳ ವಿಚ್ಛಿದ್ರಕಾರಿ ಅರ್ಥಾತ್ ತುಕ್ಡೇ ತುಕ್ಡೇ ಚಟುವಟಿಕೆಗಳತ್ತ; ಸಂಘಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟದ ಭಾಗವಾಗಿರಲಿಲ್ಲ ಎನ್ನುವುದರತ್ತ.

ದೇಶ ವಿಭಜನೆಯ ಕಾಲದಲ್ಲಿ ಗೋಳ್ವಾಲ್ಕರ್‌ರು ಮುಸ್ಲಿಮರ ಮಾರಣಹೋಮ ನಡೆಸುವ ಯೋಜನೆಗಳನ್ನು ಹಾಕಿಕೊಂಡಿದ್ದರ ಬಗ್ಗೆ ತನಗೆ ಖಚಿತ ಪುರಾವೆಗಳು ದೊರೆತಿದ್ದವೆಂದು ಅಂದು ಉತ್ತರ ಪ್ರದೇಶ ಸರಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜೇಶ್ವರ್ ದಯಾಳ್ ಬರೆದಿದ್ದಾರೆ. ಆದಾಗ್ಯೂ ಅಂದಿನ ಮುಖ್ಯಮಂತ್ರಿ ಗೋವಿಂದ ವಲ್ಲಭ್ ಪಂತ್‌ಅವರು, ಬಂಧನಾದೇಶ ಹೊರಡಿಸಲು ನಿರಾಕರಿಸಿದ್ದರು. ಆಗ ತಲೆಮರೆಸಿಕೊಂಡ ಗೋಳ್ವಾಲ್ಕರ್‌ರನ್ನು ಗಾಂಧಿ ಹತ್ಯೆಯ ನಂತರವಷ್ಟೆ ಬಂಧಿಸಲಾಗಿತ್ತು.

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News