ಕೊರೋನಾ ವೈರಸ್: ಚೀನಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ

Update: 2020-01-24 04:16 GMT

ಬೀಜಿಂಗ್: ಕೊರೋನಾ ವೈರಸ್ ದಾಳಿಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 25ಕ್ಕೇರಿದ್ದು, 800ಕ್ಕೂ ಹೆಚ್ಚು ಮಂದಿಗೆ ಈ ವೈರಸ್ ಸೋಂಕು ತಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಆದರೆ ಇದು ಅಂತರ್ ರಾಷ್ಟ್ರೀಯ ಆತಂಕಕ್ಕೆ ಕಾರಣವಾದ ಸಾಂಕ್ರಾಮಿಕ ರೋಗ ಎಂದು ಡಬ್ಲ್ಯುಎಚ್‌ಒ ಹೇಳಿಲ್ಲ.

ದೇಶದಲ್ಲಿ 830 ಕೊರೋನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ ಹಾಗೂ 25 ಮಂದಿ ಇದರಿಂದ ಮೃತಪಟ್ಟಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಖಚಿತಪಡಿಸಿದೆ. ಬಹುತೇಕ ಪ್ರಕರಣಗಳು ಕೇಂದ್ರ ಚೀನಾದ ವೂಹನ್ ನಗರದಲ್ಲಿ ಬೆಳಕಿಗೆ ಬಂದಿವೆ. ಕಳೆದ ವರ್ಷ ಈ ಸೋಂಕು ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಇತರ ಏಳು ದೇಶಗಳಲ್ಲೂ ಈ ಸೋಂಕು ಕಾಣಿಸಿಕೊಂಡಿದೆ.

ಚೀನಾದ ಸೌರಮಾನ ಹೊಸ ವರ್ಷ ಆಚರಣೆ ಶನಿವಾರ ನಡೆಯುವ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಚೀನೀಯರು ಹೊರದೇಶಗಳಿಂದ ತಾಯ್ನೆಡಿಗೆ ಆಗಮಿಸುವ ಹಿನ್ನೆಲೆಯಲ್ಲಿ ಮತ್ತು ದೇಶದ ಒಳಗೆ ಕೂಡಾ ಒಂದು ವಾರದ ರಜೆ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಳ್ಳುವುದರಿಂದ ಈ ವೈರಸ್ ಹರಡುವಿಕೆ ಹೆಚ್ಚಲಿದೆ ಎಂಬ ಆತಂಕವನ್ನು ಆರೋಗ್ಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ ಇದನ್ನು ಅಂತರ್ ರಾಷ್ಟ್ರೀಯ ಕಳಕಳಿಯ ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿ ಎಂದು ಘೋಷಿಸುವುದು ಆತುರದ ಕ್ರಮವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಮಿತಿ ಅಧ್ಯಕ್ಷ ದಿಡಿಯರ್ ಹೌಸಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News