ಪರಿಸರ ಮಾಲಿನ್ಯವನ್ನು ತಿಳಿಯಲು ಪದವಿಯ ಅಗತ್ಯವಿಲ್ಲ: ಗ್ರೆಟಾ

Update: 2020-01-24 17:55 GMT

ಡಾವೋಸ್ (ಸ್ವಿಟ್ಸರ್‌ಲ್ಯಾಂಡ್), ಜ. 24: ಜಗತ್ತು ತನ್ನ ಪರಿಸರ ಸಂರಕ್ಷಣೆ ಸಂಬಂಧದ ಗುರಿಗಳನ್ನು ತಲುಪುತ್ತಿಲ್ಲ ಎನ್ನುವುದನ್ನು ತಿಳಿಯಲು ನನಗೆ ಶೈಕ್ಷಣಿಕ ಪದವಿಯ ಅಗತ್ಯವಿಲ್ಲ ಎಂದು ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್ ಗುರುವಾರ ಹೇಳಿದ್ದಾರೆ.

ಜಗತ್ತನ್ನು ಅರ್ಥ ಮಾಡಿಕೊಳ್ಳಲು ಹದಿಹರೆಯದ ಪರಿಸರ ಹೋರಾಟಗಾರ್ತಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಬೇಕು ಎಂಬ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್ ಹೇಳಿಕೆಗೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

‘‘ಅವರು (ಗ್ರೆಟಾ) ಮುಖ್ಯ ಆರ್ಥಿಕ ಪರಿಣತೆಯೇ? ನನಗೆ ಗೊಂದಲವಿದೆ... ಅವರು ಕಾಲೇಜಿಗೆ ಹೋಗಿ ಅರ್ಥಶಾಸ್ತ್ರವನ್ನು ಕಲಿತ ಮೇಲೆ, ಅವರು ನಮ್ಮ ಬಳಿ ಬಂದು ಅದನ್ನು ನಮಗೆ ವಿವರಿಸಬಹುದು’’ ಎಂದು ಡಾವೋಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮನುಚಿನ್ ನುಡಿದರು. ಭೂಗರ್ಭದ ಇಂಧನದಿಂದ ದೂರ ಸರಿಯುವಂತೆ ಹಿಂದೆ ಗ್ರೆಟಾ ನೀಡಿರುವ ಕರೆಗಳ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

‘‘ಜಗತ್ತು ತನ್ನ ಪರಿಸರ ಗುರಿಗಳನ್ನು ಸಂಧಿಸುತ್ತಿಲ್ಲ ಎಂದು ತಿಳಿಯುವುದಕ್ಕೆ ಶೈಕ್ಷಣಿಕ ಪದವಿಯ ಅಗತ್ಯವಿಲ್ಲ’’ ಎಂದು ಗ್ರೆಟಾ ಟ್ವಿಟರ್‌ನಲ್ಲಿ ಹೇಳಿದರು. ‘‘ಹಾಗಾದರೆ, ಪರಿಸರ ಮಾಲಿನ್ಯವನ್ನು ಹೇಗೆ ಕಡಿಮೆ ಮಾಡಬಹುದು ಎನ್ನುವುದನ್ನು ನೀವು ನಮಗೆ ತಿಳಿಸಿ ಅಥವಾ ನಾವು ನಮ್ಮ ಪರಿಸರ ಬದ್ಧತೆಗಳನ್ನು ಯಾಕೆ ತೊರೆಯಬೇಕು ಎನ್ನುವುದನ್ನು ಭವಿಷ್ಯದ ತಲೆಮಾರುಗಳಿಗೆ ಹಾಗೂ ಈಗಾಗಲೇ ಪರಿಸರ ತುರ್ತು ಸ್ಥಿತಿಯಿಂದ ಬಾಧೆಗೊಳಗಾದವರಿಗೆ ವಿವರಿಸಿ’’ ಎಂದು ಗ್ರೆಟಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News