ಛತ್ತೀಸ್‌ಗಡ:ತುರ್ತು ಸ್ಥಿತಿಯಲ್ಲಿ ಜೈಲು ಸೇರಿದ್ದವರ ಪಿಂಚಣಿ ರದ್ದು

Update: 2020-01-24 15:20 GMT

ರಾಯಪುರ,ಜ.24: ತುರ್ತು ಸ್ಥಿತಿಯಲ್ಲಿ ಮಿಸಾ ಕಾಯ್ದೆಯಡಿ ಜೈಲು ಸೇರಿದ್ದವರಿಗಾಗಿ ಹಿಂದಿನ ಬಿಜೆಪಿ ಆಡಳಿತವು ಜಾರಿಗೊಳಿಸಿದ್ದ ಪಿಂಚಣಿ ಯೋಜನೆಯನ್ನು ಛತ್ತೀಸ್‌ಗಡದ ಕಾಂಗ್ರೆಸ್ ಸರಕಾರವು ರದ್ದುಗೊಳಿಸಿದೆ. ಸರಕಾರದ ಈ ಕ್ರಮವನ್ನು ಪ್ರಮುಖ ಪ್ರತಿಪಕ್ಷ ಬಿಜೆಪಿಯು ಟೀಕಿಸಿದೆ.

ಲೋಕನಾಯಕ ಜಯಪ್ರಕಾಶ ನಾರಾಯಣ (ಮಿಸಾ/ಡಿಐಆರ್/ಡಿಐಆರ್ ಬಂಧಿತರು) ಸಮ್ಮಾನ ನಿಧಿ ನಿಯಮ,2008ನ್ನು ರದ್ದುಗೊಳಿಸಿರುವುದಾಗಿ ಸಾಮಾನ್ಯ ಆಡಳಿತ ಇಲಾಖೆಯು ಗುರುವಾರ ಹೊರಡಿಸಿರುವ ಗೆಝೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

1975,ಜೂ.25ರಿಂದ 1977,ಮಾ.31ರವರೆಗೆ ಜಾರಿಯಲ್ಲಿದ್ದ ತುರ್ತು ಸ್ಥಿತಿ ಸಂದರ್ಭದಲ್ಲಿ ಮಿಸಾ ಸೇರಿದಂತೆ ಈ ಕಾಯ್ದೆಗಳಡಿ ಜೈಲುಪಾಲಾಗಿದ್ದವರಿಗಾಗಿ 2008ರಲ್ಲಿ ಆಗಿನ ಬಿಜೆಪಿ ಸರಕಾರವು ಈ ಯೋಜನೆಯನ್ನು ಜಾರಿಗೆ ತಂದಿತ್ತು.

ಈ ಯೋಜನೆಯನ್ವಯ ಮಿಸಾದಡಿ ಬಂಧಿತರಾಗಿ ಮೂರು ತಿಂಗಳು ಜೈಲಿನಲ್ಲಿದ್ದವರಿಗೆ ಮಾಸಿಕ 10,000 ರೂ.,ಆರು ತಿಂಗಳು ಮತ್ತು ಆರು ತಿಂಗಳಿಗೂ ಹೆಚ್ಚಿನ ಅವಧಿಗೆ ಜೈಲಿನಲ್ಲಿದ್ದವರಿಗೆ ಅನುಕ್ರಮವಾಗಿ ಮಾಸಿಕ 15,000 ರೂ. ಮತ್ತು 25,000 ರೂ.ಗಳ ಪಿಂಚಣಿಯನ್ನು ನೀಡಲಾಗುತ್ತಿತ್ತು.

ಕಳೆದ ವರ್ಷದ ಜನವರಿಯಲ್ಲಿ ಯೋಜನೆಯನ್ನು ಅಮಾನತಿನಲ್ಲಿರಿಸಿದ್ದ ರಾಜ್ಯ ಸರಕಾರವು ಫಲಾನುಭವಿಗಳ ದೈಹಿಕ ದೃಢೀಕರಣ ಮತ್ತು ಪಿಂಚಣಿ ವಿತರಣೆ ಪ್ರಕ್ರಿಯೆಯ ಪುನರ್‌ಮೌಲ್ಯಮಾಪನದ ಬಳಿಕ ಅದನ್ನು ಮಂದುವರಿಸುವುದಾಗಿ ತಿಳಿಸಿತ್ತು.

 ಸರಕಾರದ ಕ್ರಮವನ್ನು ಸ್ವಾಗತಿಸಿರುವ ರಾಜ್ಯ ಕಾಂಗ್ರೆಸ್ ವಕ್ತಾರ ವಿಕಾಸ ತಿವಾರಿ ಅವರು,ಈ ಯೋಜನೆಯು ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರನ್ನು ಖುಷಿಪಡಿಸುವ ಉದ್ದೇಶವನ್ನು ಹೊಂದಿತ್ತು. ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಹಣವನ್ನು ಈಗ ಯವಜನರ ಉದ್ಯೋಗ ಯೋಜನೆಗಳಿಗಾಗಿ ಬಳಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News