ಸಾಹಿತ್ಯ ಸಮ್ಮೇಳನಕ್ಕೆ ದುಂದುವೆಚ್ಚ ಬೇಡ

Update: 2020-01-24 18:40 GMT

ಮಾನ್ಯರೇ,

1915ರಿಂದ ಪ್ರತಿ ವರ್ಷ ಕನ್ನಡಿಗರಿಗಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಕಾರ್ಯಕ್ರಮಕ್ಕಾಗಿ ಪ್ರತಿ ವರ್ಷ ಸರಕಾರ ಹಾಗೂ ಸಂಘ-ಸಂಸ್ಥೆಗಳು ಕೋಟಿಗಟ್ಟಲೆ ಹಣ ನೀಡಿ ಸಮ್ಮೇಳನ ಯಶಸ್ವಿಯಾಗಲು ಶ್ರಮಿಸುತ್ತಿವೆ.

2017ರ 83ನೇ ಮೈಸೂರಿನ ಸಾಹಿತ್ಯ ಸಮ್ಮೇಳನಕ್ಕೆ ರೂ. 10 ಕೋಟಿ ನೀಡಲಾಗಿದೆ. 2019ರ 84ನೇ ಧಾರವಾಡದ ಸಾಹಿತ್ಯ ಸಮ್ಮೇಳನಕ್ಕೆ ರೂ. 12 ಕೋಟಿ ನೀಡಿದೆ. 85ನೇ ಕಲಬುರಗಿ ಸಮ್ಮೇಳನಕ್ಕೆ 14 ಕೋಟಿ ಹಣದ ಪ್ರಸ್ತಾವನೆ ಮಾಡಿ 10 ಕೋಟಿ ಬಿಡುಗಡೆಗೊಳಿಸಲಾಗಿದೆ. ಪ್ರತಿ ವರ್ಷ ಸಮ್ಮೇಳನಕ್ಕೆ ಹಣದ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಕೇವಲ ಮೂರು ದಿನದ ಕಾರ್ಯಕ್ರಮಕ್ಕೆ ಕೋಟಿಗಟ್ಟಲೆ ಹಣ ಖರ್ಚು ಮಾಡುವ ಅವಶ್ಯಕತೆ ಇದೆಯೇ?

20,000 ಸದಸ್ಯತ್ವದ ರಸೀದಿಯಿಂದಲೇ ಸುಮಾರು 60 ಲಕ್ಷ ಹಣ ಹರಿದು ಬಂದಿದೆಯೆಂದು ಮಾಧ್ಯಮಗಳಿಂದ ವರದಿಯಾಗುತ್ತಿದೆ. ಅಲ್ಲದೆ ಕಲಬುರಗಿ ಜಿಲ್ಲೆಯ ನೌಕರರ ಒಂದು ದಿನದ ವೇತನ ಕಡಿತ ಮಾಡಿ 2 ಕೋಟಿ ಹಣ ಸಂಗ್ರಹಿಸಲಾಗುತ್ತದೆಯಂತೆ. ಸಮ್ಮೇಳನ ನಡೆಸುವಾಗ ಸಂಬಂಧಿಸಿದವರು ತಮಗೆ ಬೇಕಾದವರಿಗೆ ಸಮ್ಮೇಳನ ವ್ಯವಸ್ಥೆಯ ಟೆಂಡರ್ ನೀಡುವುದರಿಂದಲೇ ಖರ್ಚು ಹೆಚ್ಚಾಗುತ್ತಿದೆಯೆಂಬ ಆರೋಪವಿದೆ.

ಈ ಮೂರು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಊಟದ ವ್ಯವಸ್ಥೆ ಮಾಡಬಾರದು. ಊಟ ಏನಾದರೂ ಸಿಗದೇ ಹೋದರೆ ಸಮ್ಮೇಳನ ಸರಿಯಾಗಿ ನಡೆದಿಲ್ಲ ಎಂದು ಮಾಧ್ಯಮಗಳ ಚೀರಾಟ ನಡೆಯುತ್ತದೆ. ಆದ್ದರಿಂದ ಸರಕಾರ ಸಮ್ಮೇಳನದ ಹಣ ಪೋಲಾಗದಂತೆ ಹಾಗೂ ಬರುವ ಎಲ್ಲಾ ಕನ್ನಡಾಭಿಮಾನಿಗಳಿಗೆ ವಸತಿ, ನೀರಿನ ವ್ಯವಸ್ಥೆಯನ್ನಷ್ಟೇ ಸರಿಯಾಗಿ ಮಾಡಬೇಕಾಗಿದೆ.

-ಮಹಾಂತೇಶ ಬಯ್ಯಪುರ, ಸವದತ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News