ನಾಲ್ಕನೇ ಟೆಸ್ಟ್: ಇಂಗ್ಲೆಂಡ್ 400 ರನ್‌ಗೆ ಆಲೌಟ್

Update: 2020-01-25 18:30 GMT

ಜೋಹಾನ್ಸ್‌ಬರ್ಗ್, ಜ.25: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಇಲ್ಲಿ ಆರಂಭವಾದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 98.2 ಓವರ್‌ಗಳಲ್ಲಿ 400 ರನ್ ಗಳಿಸಿ ಆಲೌಟಾಗಿದೆ.

 ಎರಡನೇ ದಿನವಾದ ಶನಿವಾರ 4 ವಿಕೆಟ್‌ಗಳ ನಷ್ಟಕ್ಕೆ 192 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಬರೋಬ್ಬರಿ 400 ರನ್ ಗಳಿಸಿತು. ನೊರ್ಟ್ಜೆ (5-110)ಐದು ವಿಕೆಟ್ ಗೊಂಚಲು ಕಬಳಿಸಿದರೆ, ನಿವೃತ್ತಿಯ ಅಂಚಿನಲ್ಲಿರುವ ಫಿಲ್ಯಾಂಡರ್(2-50) ಹಾಗೂ ಯುವ ಬೌಲರ್ ಪ್ಯಾಟರ್ಸನ್(2-86)ತಲಾ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.

 ಇಂಗ್ಲೆಂಡ್‌ನ ಪರವಾಗಿ ಆರಂಭಿಕ ಬ್ಯಾಟ್ಸ್‌ಮನ್ ಝಾಕ್ ಕ್ರಾಲಿ ಅಗ್ರ ಸ್ಕೋರರ್(66, 112 ಎಸೆತ, 11 ಬೌಂಡರಿ)ಎನಿಸಿಕೊಂಡರು. ನಾಯಕ ಜೋ ರೂಟ್(59, 108 ಎಸೆತ, 6 ಬೌಂಡರಿ)ಹಾಗೂ ಒಲ್ಲಿ ಪೋಪ್(56, 78 ಎಸೆತ, 8 ಬೌಂಡರಿ)ಅರ್ಧಶತಕಗಳ ಕೊಡುಗೆ ನೀಡಿದರು. ಇನ್ನೋರ್ವ ಆರಂಭಿಕ ಬ್ಯಾಟ್ಸ್‌ಮನ್ ಸಿಬ್ಲೆ(44, 93 ಎಸೆತ, 7 ಬೌಂಡರಿ), ಸ್ಟುವರ್ಟ್ ಬ್ರಾಡ್(43,28ಎಸೆತ, 2 ಬೌಂಡರಿ,4 ಸಿಕ್ಸರ್) ವೋಕ್ಸ್(32, 46 ಎಸೆತ) ಹಾಗೂ ವುಡ್(ಔಟಾಗದೆ 35, 39 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

ಇಂಗ್ಲೆಂಡ್‌ನ ಪರ ಇನಿಂಗ್ಸ್ ಆರಂಭಿಸಿದ ಕ್ರಾಲಿ ಹಾಗೂ ಸಿಬ್ಲೆ ಮೊದಲ ವಿಕೆಟ್‌ಗೆ 107 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಮೊದಲ ದಿನದಾಟ ಮಂದ ಬೆಳಕಿನಿಂದ ಬೇಗನೆ ಕೊನೆಗೊಂಡಾಗ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತ್ತು.

5ನೇ ವಿಕೆಟ್ ಜೊತೆಯಾಟದಲ್ಲಿ 101 ರನ್ ಸೇರಿಸಿದ ರೂಟ್ ಹಾಗೂ ಪೋಪ್ ಇಂಗ್ಲೆಂಡ್‌ಗೆ ಆಸರೆಯಾದರು. ಕೊನೆಯ ವಿಕೆಟ್‌ನಲ್ಲಿ 82 ರನ್ ಕಲೆ ಹಾಕಿದ ಬ್ರಾಡ್(43) ಹಾಗೂ ವುಡ್(ಔಟಾಗದೆ 35, 39 ಎಸೆತ)ತಂಡದ ಮೊತ್ತವನ್ನು 400ಕ್ಕೆ ತಲುಪಿಸಿದರು.

ಮಿಡ್‌ವಿಕೆಟ್‌ನತ್ತ ಬೌಂಡರಿ ಬಾರಿಸಿದ ರೂಟ್ ಟೆಸ್ಟ್‌ನಲ್ಲಿ 7,500 ರನ್ ಪೂರೈಸಿದರು. ಇದೇ ವೇಳೆ ರೂಟ್ ಒಂಟಿ ರನ್ ಗಳಿಸುವ ಮೂಲಕ ಇಂಗ್ಲೆಂಡ್ ತಂಡ ಟೆಸ್ಟ್‌ನ ಮೊದಲ ದಿನ 500,000 ಟೆಸ್ಟ್ ರನ್ ಪೂರೈಸಿದ ಮೊದಲ ತಂಡ ಎಂಬ ಸಾಧನೆಯೊಂದಿಗೆ ಇತಿಹಾಸ ನಿರ್ಮಿಸಿತು.

ಕ್ರಾಲಿ ಇಂಗ್ಲೆಂಡ್‌ನ ಪರವಾಗಿ ಇದೇ ಮೊದಲ ಬಾರಿ ಅರ್ಧಶತಕ ಸಿಡಿಸಿದರು. ಕೇಪ್‌ಟೌನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸಿಬ್ಲೆ 44 ರನ್ ಗಳಿಸಿ ಹೆಂಡ್ರಿಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಹೆಂಡ್ರಿಕ್ಸ್ ತನ್ನ ಚೊಚ್ಚಲ ಪಂದ್ಯದಲ್ಲೇ ವಿಕೆಟ್ ಪಡೆದು ಗಮನ ಸೆಳೆದರು.ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಕೇವಲ 2 ರನ್ ಗಳಿಸಿ ನೊರ್ಟ್ಜೆಗೆ ವಿಕೆಟ್ ಒಪ್ಪಿಸಿದಾಗ ಇಂಗ್ಲೆಂಡ್‌ನ ಸ್ಕೋರ್ 4 ವಿಕೆಟ್ ನಷ್ಟಕ್ಕೆ 157.

ಜೋ ರೂಟ್ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಮೊದಲು ವೇಗದ ಬೌಲರ್ ಜೋಫ್ರಾ ಅರ್ಚರ್ ಗಾಯಗೊಂಡು ಆಡುವ 11ರ ಬಳಗದಿಂದ ಹೊರಗುಳಿದ ಸುದ್ದಿ ಇಂಗ್ಲೆಂಡ್ ಪಾಳಯದಲ್ಲಿ ಬೇಸರ ಮೂಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News