​ಚಿದಂಬರಂ ಬಂಧನಕ್ಕೆ ಗೋಡೆ ಹತ್ತಿದ ಪೊಲೀಸ್ ಅಧಿಕಾರಿಗೆ ರಾಷ್ಟ್ರಪತಿ ಪದಕ

Update: 2020-01-26 03:35 GMT
ಚಿದಂಬರಂ- ರಾಮಸ್ವಾಮಿ (ಫೈಲ್ ಚಿತ್ರ)

ಹೊಸದಿಲ್ಲಿ: ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಬಂಧನಕ್ಕೆ ಚಿದಂಬರಂ ಮನೆಯ ಗೋಡೆ ಹತ್ತಿದ ಅಧಿಕಾರಿ ಸೇರಿದಂತೆ 28 ಮಂದಿ ಸಿಬಿಐ ಅಧಿಕಾರಿಗಳು, ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ನೀಡುವ ರಾಷ್ಟ್ರಪತಿ ಪೊಲೀಸ್ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.

ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಚಿದಂಬರಂ ಅವರನ್ನು ಡಿವೈಎಸ್ಪಿ ರಾಮಸ್ವಾಮಿ ಪಾರ್ಥಸಾರಥಿ ಬಂಧಿಸಿದ್ದು, ವಿಶಿಷ್ಟ ಸೇವೆಗಾಗಿ ಅವರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ ನೀಡಿ ಗೌರವಿಸಲಾಗಿದೆ.

ತೀರಾ ಮೃದು ಸ್ವಭಾವದ ಆದರೆ ಕಟ್ಟುನಿಟ್ಟಿನ ಅಧಿಕಾರಿಯಾಗಿರುವ ಪಾರ್ಥಸಾರಥಿಯವರು ಕಾರ್ತಿ ಚಿದಂಬರಂ ಅವರನ್ನೂ ಬಂಧಿಸಿದ್ದರು. ಭಾರತದ ಪ್ರಜೆಯನ್ನು ಮೊಟ್ಟಮೊದಲ ಬಾರಿಗೆ ಯುಎಇನಿಂದ ಗಡೀಪಾರು ಮಾಡಿದ ತಂಡದ ಮುಖ್ಯಸ್ಥ ಧೀರೇಂದ್ರ ಶುಕ್ಲ ಕೂಡಾ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ.

ಮುಂಬೈ ಪತ್ರಕರ್ತರಾದ ಜೆ.ಡೇ ಹತ್ಯೆ ಪ್ರಕರಣದ ಯಶಸ್ವಿ ತನಿಖೆ ನಡೆಸಿದ ಶುಕ್ಲ, ಸಿಬಿಐಯ ಕ್ರೀಡಾ ಸಮನ್ವಯ ಘಟಕದ ಮುಖ್ಯಸ್ಥರಾಗಿ ಐದು ವರ್ಷ ಕಾಲ ಸೇವೆ ಸಲ್ಲಿಸಿದ್ದರು. ಅಂತೆಯೇ ಮೊನಾಕೊಗೆ ಭೇಟಿ ನೀಡುವ ಪೊಲೀಸ್ ಪಡೆಗೆ ವಿಶ್ವಸಂಸ್ಥೆ ಇವರನ್ನು ಆಯ್ಕೆ ಮಾಡಿತ್ತು. ಬಳಿಕ ಯುಎಇನಿಂದ ಗಡೀಪಾರಾದ ರೋಷನ್ ಅನ್ಸಾರಿಯನ್ನು ಭಾರತಕ್ಕೆ ಕರೆತಂದ ತಂಡದ ಮುಖ್ಯಸ್ಥರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಗುರ್ಮೀತ್ ಸಿಂಗ್ ನ ದೇರಾ ಸಚ್ಚಸೌಧ ಅನುಯಾಯಿಗಳನ್ನು ನಿರ್ವೀರ್ಯಗೊಳಿಸಿದ ಪ್ರಕರಣದ ಬಗ್ಗೆ ಮತ್ತು ಪತ್ರಕರ್ತ ರಾಜೀವ್ ರಂಜನ್ ಹತ್ಯೆ ಪ್ರಕರಣ ಬಗ್ಗೆಯೂ ಇವರು ತನಿಖೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News