ದತ್ತು ಮಕ್ಕಳಿಂದ ದೇಶದ್ರೋಹಿಗಳೆಂದು ಕರೆಸಿಕೊಳ್ಳುತ್ತಿದ್ದೇವೆ: ಹಿರಿಯ ಸಾಹಿತಿ ದೇವನೂರು ಮಹಾದೇವ

Update: 2020-01-27 13:17 GMT
ಫೈಲ್ ಚಿತ್ರ

ಬೆಂಗಳೂರು, ಜ.26: ಈ ನೆಲದ ನೈಸರ್ಗಿಕ ಮಕ್ಕಳು,  ಭಾರತದ ದತ್ತು ಮಕ್ಕಳಿಂದ ದೇಶದ್ರೋಹಿಗಳೆಂದು ಕರೆಯಿಸಿ ಕೊಳ್ಳುತ್ತಿರುವುದೇ ದುರಂತ ಎಂದು ಸಾಹಿತಿ ದೇವನೂರ ಮಹಾದೇವ ನುಡಿದರು.

ರವಿವಾರ ನಗರದ ಫ್ರೀಡಂ ಪಾರ್ಕ್ ಮೈದಾನದಲ್ಲಿ ಆದಿವಾಸಿ, ಅಲೆಮಾರಿ, ದಲಿತ ಮತ್ತು ಹಿಂದುಳಿದ ಜಾತಿ ಸಂಘಟನೆಗಳ ವೇದಿಕೆ, ನಾವು ಭಾರತೀಯರು ನೇತತ್ವದಲ್ಲಿ ಸಿಎಎ, ಎನ್‌ಪಿಆರ್,ಎನ್‌ಆರ್‌ಸಿ ಹಾಗೂ ಇವಿಎಂ ವಿರುದ್ಧ ಹಮ್ಮಿಕೊಂಡಿದ್ದ,  ಸಂವಿಧಾನದ ಉಳಿವಿಗಾಗಿ ಪ್ರತಿಭಟನಾ ರ್ಯಾಲಿ ಮತ್ತು ಜನ ಜಾಗೃತಿ ಆಂದೋಲನ ಸಮಾವೇಶದಲ್ಲಿ ಅವರು ಮಾತನಾಡಿದರು.

ಮಕ್ಕಳಿಲ್ಲದ ದಂಪತಿ ಒಂದು ಹುಡುಗನನ್ನು ದತ್ತು ಪಡೆಯುತ್ತಾರೆ. ಮರು ವರ್ಷವೇ ಆ ದಂಪತಿಗೆ ಗಂಡು ಮಗು ಹುಟ್ಟುತ್ತದೆ. ಬೆಳೆದು ದೊಡ್ಡವರಾದ ಮೇಲೆ ದತ್ತು ಮಗನೇ ದಿನಕ್ಕೆ ನೂರಾರು ಬಾರಿ ಅಪ್ಪ, ಅಮ್ಮ ಎಂದು ಕರೆಯುತ್ತಿರುತ್ತಾನೆ. ನೈಸರ್ಗಿಕ(ಸ್ವಂತ) ಮಗ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಅಪ್ಪ–ಅಮ್ಮ ಎನ್ನುತ್ತಿರುತ್ತಾನೆ. ಇದು ಕತೆಯಲ್ಲ ವಾಸ್ತವ.ಇದನ್ನು ಈ‌ ಹಿಂದೆ ನಾನು ದೇಶಪ್ರೇಮದ ಬಗ್ಗೆ ಬರೆದಿದ್ದೆ. ಅಂದಿಗಿಂತ ಇಂದಿಗೆ ಹೆಚ್ಚು ಲಗತ್ತಾಗಿದೆ ಎಂದರು.

ಈ ಅನುಮಾನಾಸ್ಪದ ದೇಶಭಕ್ತರನ್ನು ನಾನು ಬೇಡ ಎನ್ನುವುದಿಲ್ಲ. ಇಲ್ಲೇ ಹುಟ್ಟಿ ಈ ನೆಲದಲ್ಲೇ ಅಂಬೆಗಾಲಿಟ್ಟ ಕಂದಮ್ಮಗಳೆಲ್ಲಾ ಇಲ್ಲಿಯವರೇ ಎನ್ನುವವನು ನಾನು. ಆದರೆ, ಭಾರತದ ನೈಸರ್ಗಿಕ ಮಕ್ಕಳನ್ನೇ ದೇಶದ್ರೋಹಿಗಳೆಂದು ಕರೆಯುವುದು ಯಾವ ದುರಂತ. ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಈ ಕೆಲಸವನ್ನು ಮಾಡಲು ಹೊರಟಿವೆ. ಇದಕ್ಕಾಗಿ ಸಂವಿಧಾನದ ಮೂಲ‌ ಆಶಯವನ್ನು ಬಲಿಕೊಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತದ ಆರ್ಥಿಕತೆಯನ್ನು ಮುಳುಗಿಸುತ್ತಿರುವುದು ದೇಶದ್ರೋಹ ಅಲ್ಲ,  ಬೆಲೆ ಏರಿಕೆ ನಿಯಂತ್ರಿಸದೇ ಇರುವುದು ದೇಶದ್ರೋಹ ಅಲ್ಲ. ನಿರುದ್ಯೋಗವನ್ನು ವೃದ್ದಿಸುತ್ತಿರುವುದು ದೇಶದ್ರೋಹ ಅಲ್ಲ, ಆದರೆ, ಇದನ್ನೆಲ್ಲಾ ಪ್ರಶ್ನಿಸುವುದು ದೇಶದ್ರೋಹವೇ ಎಂದು ತಮ್ಮದೇ ದಾಟಿಯಲ್ಲಿ ದೇವನೂರು ಪ್ರಶ್ನಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News